ಸಾರಾಂಶ
ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ನೀಡುವ ಗೌರವ ಧನವೇ ಕಮ್ಮಿ, ಅದೂ ಕೂಡ ಎರಡ್ಮೂರು ತಿಂಗಳಿಂದ ಕೈ ಸೇರಿಲ್ಲ. ಸಾಲದಕ್ಕೆ ಮೊಟ್ಟೆಯ ಹಣವೂ ಎರಡು ತಿಂಗಳಿಂದ ಕೊಟ್ಟಿಲ್ಲ. ಹೀಗಾಗಿ ಅಂಗನವಾಡಿ ಮಕ್ಕಳಿಗೆ ಕಾರ್ಯಕರ್ತೆಯರೇ ತಮ್ಮ ಹಣದಿಂದಲೇ ಮೊಟ್ಟೆ ತಂದು ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.
ಕಳೆದ ಮೂರು ತಿಂಗಳಿಂದ ಗೌರವಧನವಿಲ್ಲದೆ ಅಂಗನವಾಡಿ ಕಾರ್ಯಕರ್ತರು ದಿಕ್ಕು ತೋಚದಾಗಿದ್ದಾರೆ. ಮೇ ತಿಂಗಳ ನಂತರ ಕಾರ್ಯಕರ್ತೆಯರಿಗೆ ಗೌರವ ಧನವೇ ನೀಡಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಪದೇ ಪದೇ ಗೌರವಧನ ವಿಳಂಬವಾಗುತ್ತಿದ್ದು, ಪ್ರತಿ ಬಾರಿಯೂ ಒಂದಲ್ಲ ಒಂದು ನೆಪದಲ್ಲಿ ಗೌರವಧನ ನೀಡಿಕೆಯಲ್ಲಿ ತಡವಾಗುತ್ತಿದೆ. ವಿಳಂಬವಾದಗೆಲ್ಲ ಒಂದಲ್ಲ ಒಂದು ಕಾರಣ ನೀಡಲಾಗುತ್ತಿದೆ. ಆದರೆ, ಕೆಲಸ ಮಾತ್ರ ತಪ್ಪುವುದಿಲ್ಲ. ಅಂಗನವಾಡಿಯಿಂದ ಒದಗಿಸುವ ಸೇವೆಗಳ ಪಟ್ಟಿ ಉದ್ದವಾಗುತ್ತಲೇ ಇರುತ್ತವೆ.ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಅ,ಆ, ಇ ಕಲಿಸುವುದು ಮಾತ್ರವಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಸಮನ್ವಯತೆಯಲ್ಲಿ ಸರ್ಕಾರದ ಮಹತ್ವ ಪೂರ್ಣ ಯೋಜನೆಗಳನ್ನು ತಲುಪಿಸುವ ಜವಾಬ್ದಾರಿ ನಿಭಾಯಿಸುವ ಹೊಣೆಗಾರಿಕೆ ಕೂಡ ಜೊತೆ ಯಾಗಿದೆ. ಶಾಲಾ ಪೂರ್ವ ಶಿಕ್ಷಣ, ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರ ವಿತರಣೆ, ನಾನಾ ಜಾಗೃತಿ ಕಾರ್ಯಕ್ರಮಗಳ ಹೊಣೆಗಾರಿಕೆ ಇವರದ್ದೇ. ಆದರೂ ಸರ್ಕಾರ ಇವರನ್ನು ನಡೆಸಿಕೊಳ್ಳುತ್ತಿರುವ ರೀತಿ ಮಾತ್ರ ಶೋಚನೀಯ!
ಯಾರಿಗೆ ಎಷ್ಟು ಗೌರವಧನ?ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ 2563 ಅಂಗನವಾಡಿಗಳಿದ್ದು, 2389 ಅಂಗನವಾಡಿ ಕಾರ್ಯಕರ್ತೆ, 1870 ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 11,000 ರು., ಸಹಾಯಕಿಯರಿಗೆ ಮಾಸಿಕ 5,500 ರು. ಮಾಸಿಕ ಗೌರವಧನವಿದೆ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಗೌರವಧನ ನೀಡಲು ವರ್ಷಕ್ಕೆ 48.01 ಕೋಟಿ ರು. ಬೇಕಿದ್ದು, ಸರ್ಕಾರ ಮೂರು ಕಂತುಗಳಲ್ಲಿ ಹಣವನ್ನು ಬಿಡುಗಡೆ ಮಾಡುತ್ತದೆ. ಈವರೆಗೆ ಮೊದಲ ಕಂತಿನಲ್ಲಿ 12 ಕೋಟಿ ರು. ಬಿಡುಗಡೆಯಾಗಿದೆ. ಎರಡನೇ ಹಂತದ ಹಣ ಇನ್ನೂ ಬಂದಿಲ್ಲ ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮಾಹಿತಿ.
ಮೊಟ್ಟೆ ಖರೀದಿಗಿಲ್ಲ ಅನುದಾನ:ಇನ್ನೂ ಮೊಟ್ಟೆ ಖರೀದಿಗೂ ಅನುದಾನವಿಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ಕಂಗಾಲಾಗಿದ್ದಾರೆ. ಹಾಗೆಂದು ಮೊಟ್ಟೆ ಕೊಡದೆ ಇರುವ ಹಾಗಿಲ್ಲ. ಹೀಗಾಗಿ ಸಾಲ ಮಾಡಿ ಕೊಡುವ ಅನಿವಾರ್ಯತೆಯಲ್ಲಿದ್ದು, ಇದರಿಂದ ಸದ್ಯಕ್ಕಂತೂ ಅವರು ಸಾಲದ ಸುಳಿಗೆ ಸಿಲುಕಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 11,058 ಗರ್ಭಿಣಿಯರು, 10,950 ಬಾಂತಿಯರು, ಮಕ್ಕಳು ಇದ್ದು, ತಿಂಗಳಿಗೆ ಒಟ್ಟು ಅಂದಾಜು 8.50 ಲಕ್ಷದಷ್ಟು ಮೊಟ್ಟೆ ಅಗತ್ಯವಿದೆ. ಆದರೆ, ಕಳೆದ ಎರಡು ತಿಂಗಳಿಂದ ಮೊಟ್ಟೆಗೆ ಹಣ ನೀಡಿಲ್ಲ. ಒಟ್ಟು 2 ಕೋಟಿ ರು. ಬಾಕಿ ಇದೆ. ಗರ್ಭಿಣಿಯರು, ಬಾಣಂತಿಯರಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಗೂ ಇತರೆ ಮಕ್ಕಳಿಗೆ ಮೊಟ್ಟೆ ವಿತರಿಸಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗದೆ, ಅಂಗನವಾಡಿ ಕಾರ್ಯಕರ್ತೆಯರು 3 ತಿಂಗಳಿಂದ ಕಿರಾಣಿ ಅಂಗಡಿಗಳಲ್ಲಿ ಮೊಟ್ಟೆ ತಂದು ಸಾಲದ ಸುಳಿಗೆ ಸಿಲುಕಿದ್ದಾರೆ.ಇತ್ತ ಮೂರು ತಿಂಗಳಿನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಸಂದಾಯವಾಗಿಲ್ಲ. ನಿಗದಿತ ಅನುದಾನ ಬಿಡುಗಡೆ ಮಾಡದೆ ಸಾಲ ಮಾಡಿ ಮೊಟ್ಟೆ ತರಕಾರಿ ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಸಾಲದ ಪ್ರಮಾಣ ಏರಿಕೆಯಾಗಿ ಬಾಕಿ ಹಿಂದಿರುಗಿಸುವಂತೆ ಅಂಗಡಿಯವರು ಒತ್ತಡ ಹೇರುತ್ತಿದ್ದು, ಸಾಲದ ಬಾಕಿ ಚುಕ್ತಿಯಾಗದೆ ಮೊಟ್ಟೆ ನೀಡಲು ಸಾಧ್ಯವಾಗದೆ ಕಾರ್ಯಕರ್ತೆಯವರು ಸಮಸ್ಯೆಗೆ ಸಿಲುಕಿದ್ದಾರೆ.
ಮೊಟ್ಟೆಗೆ ಅನುದಾನ ಬಂದಿದೆ. ಕೂಡಲೇ ಹಣವನ್ನು ವಿತರಿಸಲಾಗುವುದು. ಇನ್ನು ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಮೇ ವರೆಗೆ ಗೌರವಧನ ನೀಡಲಾಗಿದೆ. ಎರಡು ತಿಂಗಳ ಗೌರವಧನ ಮಾತ್ರ ಬಾಕಿ ಇದೆ. ಕೆಲವೆಡೆ ಒಂದು ತಿಂಗಳ ಅನುದಾನ ಮಾತ್ರ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದಲೂ ಅನುದಾನ ನೀಡುತ್ತಿವೆ. ರಾಜ್ಯ ಸರ್ಕಾರದಿಂದ ಎರಡನೇ ಕಂತಿನ ಅನುದಾನ ಬಂದಿದೆ. ಕೇಂದ್ರ ಸರ್ಕಾರದಿಂದಲೂ ಆಗಸ್ಟ್ ಅಂತ್ಯದಲ್ಲಿ ಬರಲಿದೆ. ಅನುದಾನ ಬಂದ ಕೂಡಲೇ ಎಲ್ಲರಿಗೂ ಗೌರವಧನ ಬಿಡುಗಡೆ ಮಾಡಲಾಗುವುದು ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿವಮೊಗ್ಗ ಉಪನಿದೇಶಕ ಕೃಷ್ಣಪ್ಪ.ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆ ರಾಜ್ಯಾಧ್ಯಕ್ಷೆ ಬಿ.ಪ್ರೇಮಾ ಮಾತನಾಡಿ, ಜೂನ್‌ನಿಂದ ಮೂರು ತಿಂಗಳಿಂದ ಗೌರವಧನ ಇಲ್ಲ, ಮೊಟ್ಟೆಗೂ ಹಣ ಕೊಟ್ಟಿಲ್ಲ. ಹೀಗಾಗಿ ಒಬ್ಬ ಕಾರ್ಯಕರ್ತೆ 6 ರಿಂದ 8 ಸಾವಿರ ಕೈಯಿಂದ ಹಣ ಹಾಕಿ ಮೊಟ್ಟೆ ತಂದು ಕೊಡುತ್ತಿದ್ದೇವೆ. ಒಂದು ತಿಂಗಳು ಗೌರವಧನ ಬಾರದೆ ಇದ್ದರೆ ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟ. ಅದರಲ್ಲಿ ಕೈಯಿಂದ ಹಣ ಹಾಕಿ ಮೊಟ್ಟೆ ತಂದು ಕೊಡುವುದು ಅಸಾಧ್ಯ ಎಂಬ ಪರಿಸ್ಥಿತಿ ಇದೆ. ಸರ್ಕಾರ ಕೂಡಲೇ ಗೌರವಧನ ಹಾಗೂ ಮೊಟ್ಟೆಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.