ಕುಮಟಾ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆಗೆ ತಡೆಯಾಜ್ಞೆ

| Published : Aug 22 2024, 12:55 AM IST

ಕುಮಟಾ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆಗೆ ತಡೆಯಾಜ್ಞೆ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆಯ ಕಾಂಗ್ರೆಸ್ ಬೆಂಬಲಿತ ಸದಸ್ಯೆ ವಿನಯಾ ಶೆರ್ಲಿ ವಿನು ಕೆ. ಜಾರ್ಜ್‌ ಅವರು ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾದ ಮೀಸಲಾತಿ ಪ್ರಶ್ನಿಸಿ ರಿಟ್ ಅರ್ಜಿ ಆಧರಿಸಿ ಧಾರವಾಡದ ಹೈಕೋರ್ಟ್‌ ಆ. ೨೦ರಂದೇ ತಡೆಯಾಜ್ಞೆ ನೀಡಿದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಈ ಮೇಲ್ ಸಂದೇಶ ಬಂದಿದೆ.

ಕುಮಟಾ: ಪುರಸಭೆಯಲ್ಲಿ ಬಹುಮತವಿಲ್ಲದಿದ್ದರೂ ಕಾಂಗ್ರೆಸ್ ಬೆಂಬಲಿತ ಸದಸ್ಯರೊಬ್ಬರು ತಮ್ಮದೇ ಸರ್ಕಾರದ ಮೀಸಲಾತಿ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿ ತಡೆಯಾಜ್ಞೆ ತಂದ ಹಿನ್ನೆಲೆ ಇಲ್ಲಿನ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆಯಬೇಕಿದ್ದ ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ, ತಹಸೀಲ್ದಾರ್ ರವಿರಾಜ ದೀಕ್ಷಿತ ಮುಂದೂಡಿದ್ದಾರೆ.

ಪುರಸಭೆಯ ಕಾಂಗ್ರೆಸ್ ಬೆಂಬಲಿತ ಸದಸ್ಯೆ ವಿನಯಾ ಶೆರ್ಲಿ ವಿನು ಕೆ. ಜಾರ್ಜ್‌ ಅವರು ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾದ ಮೀಸಲಾತಿ ಪ್ರಶ್ನಿಸಿ ರಿಟ್ ಅರ್ಜಿ ಆಧರಿಸಿ ಧಾರವಾಡದ ಹೈಕೋರ್ಟ್‌ ಆ. ೨೦ರಂದೇ ತಡೆಯಾಜ್ಞೆ ನೀಡಿದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಈ ಮೇಲ್ ಸಂದೇಶ ಬಂದಿದೆ. ಇದನ್ನು ಆಧರಿಸಿ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಯೂ ಆಗಿರುವ ಕುಮಟಾ ತಹಸೀಲ್ದಾರ್ ರವಿರಾಜ ದೀಕ್ಷಿತ ಅವರಿಗೆ ಸೂಚನೆ ನೀಡಿ, ಪುರಸಭೆಯ ಚುನಾವಣೆ ನಡೆಸದಂತೆ ಹಾಗೂ ನ್ಯಾಯಾಲಯದ ಮುಂದಿನ ಆದೇಶದವರೆಗೆ ತಡೆಹಿಡಿಯುವಂತೆ ಆದೇಶಿಸಿದ್ದರು. ಆದರೆ ಚುನಾವಣೆಯ ನಾಮಪತ್ರ ಸಲ್ಲಿಕೆ ಇನ್ನಿತರ ಪ್ರಕ್ರಿಯೆಗಳಿಗಾಗಿ ಪುರಸಭೆಯ ಮೀಟಿಂಗ್ ಹಾಲ್‌ನಲ್ಲಿ ಬ್ಯಾನರ್ ಸಹಿತ ಸಜ್ಜುಗೊಳಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಎಲ್ಲ ಸದಸ್ಯರು ಚುನಾವಣಾಧಿಕಾರಿ ಎದುರು ಹಾಜರಾಗಿ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದರು. ಆದರೆ ನಾಮಪತ್ರ ಪಡೆಯಲು ನಿರಾಕರಿಸಿದ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಆದೇಶವನ್ನು ತಿಳಿಸಿದ್ದಾರೆ. ಈ ವೇಳೆ ಉಚ್ಚ ನ್ಯಾಯಾಲಯದ ಆದೇಶವೂ ಲಭ್ಯವಿಲ್ಲದ್ದರಿಂದ ಗೊಂದಲ ಸೃಷ್ಟಿಯಾಗಿ ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ ಆಗಮಿಸಿ ವಿಚಾರಿಸಿದರು. ದೂರವಾಣಿ ಮೂಲಕ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರೊಂದಿಗೆ ಮಾತನಾಡಿ, ನ್ಯಾಯಾಲಯದ ಆದೇಶಕ್ಕೆ ನಾವು ತಲೆಬಾಗುತ್ತೇವೆ. ಆದರೆ ನ್ಯಾಯಾಲಯದ ಅಸಲು ಆದೇಶ ಪ್ರತಿ ಕೈಸೇರುವ ವರೆಗೆ ಚುನಾವಣೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ತಡೆಹಿಡಿಯುವುದು ಸರಿಯಲ್ಲ. ಚುನಾವಣೆ ಪ್ರಕ್ರಿಯೆ ನಡೆಯಲು ಬಿಡಿ ಎಂದರು. ಆದರೆ ನ್ಯಾಯಾಲಯದ ಆದೇಶವಾಗಿದೆ ಎಂದು ಜಿಲ್ಲಾಧಿಕಾರಿ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಒಂದು ದಿನ ಮೊದಲೇ ತಿಳಿದಿದ್ದರೂ ಚುನಾವಣೆಗೆ ಸಜ್ಜುಗೊಳಿಸಿ, ಸದಸ್ಯರು ಬಂದು ಕುಳಿತ ಮೇಲೆ ತಡೆಯಾಜ್ಞೆಯ ಪ್ರಹಸನ ನಡೆಸಿದ್ದು, ಚುನಾಯಿತ ಸದಸ್ಯರನ್ನು ಅವಮಾನ ಮಾಡಿದಂತಾಗಿದೆ. ಬುಧವಾರ ಬೆಳಗ್ಗೆ ಸದಸ್ಯರಿಗೆ ಮಾಹಿತಿ ನೀಡಿದ್ದರೂ ನಾವು ಚುನಾವಣೆಗೆ ಬರುತ್ತಲೇ ಇರಲಿಲ್ಲ.

ಕಾಂಗ್ರೆಸ್ ಸರ್ಕಾರದ ಮೀಸಲಾತಿ ಆದೇಶದ ವಿರುದ್ಧವೇ ನಮ್ಮ ಪುರಸಭೆಯ ಕಾಂಗ್ರೆಸ್ ಬೆಂಬಲಿತ ಸದಸ್ಯರು ತಮಗೆ ಸ್ವಲ್ಪವೂ ಬಹುಮತವಿಲ್ಲ ಎಂಬುದನ್ನು ತಿಳಿದೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದರ ಉದ್ದೇಶ ಅತ್ಯಂತ ಕೀಳುಮಟ್ಟದ್ದಾಗಿದೆ. ಇದು ಪಟ್ಟಣದ ಜನಸಾಮಾನ್ಯರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ವಿರುದ್ಧ ಹಾಜರಿದ್ದ ಸದಸ್ಯರು ಧಿಕ್ಕಾರ ಕೂಗಿ ಹೊರನಡೆದರು. ಇದಕ್ಕೂ ಮುನ್ನ ಪುರಸಭೆಯ ನೂತನ ಅಧ್ಯಕ್ಷರಾಗಿ ಸುಮತಿ ಭಟ್ ಹಾಗೂ ಉಪಾಧ್ಯಕ್ಷರಾಗಿ ಮಹೇಶ ನಾಯ್ಕ ಆಯ್ಕೆ ಪಕ್ಷದ ಒಳವಲಯದಲ್ಲಿ ನಿಶ್ಚಿತವಾಗಿತ್ತು. ತಡೆಯಾಜ್ಞೆಯಿಂದಾಗಿ ಮತ್ತೆ ಅನಿರ್ದಿಷ್ಟ ಅವಧಿಗೆ ಪುರಸಭೆಯ ಚುನಾಯಿತ ಪ್ರತಿನಿಧಿಗಳ ಆಡಳಿತ ಅತಂತ್ರವಾದಂತಾಗಿದೆ. ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಸಿಪಿಐ ತಿಮ್ಮಪ್ಪ ನಾಯ್ಕ ಹಾಗೂ ಸಿಬ್ಬಂದಿ ಇದ್ದರು. ಸದಸ್ಯರಿಗೆ ಅವಮಾನ: ನ್ಯಾಯಾಲಯದ ಆದೇಶಕ್ಕೆ ನಾವೆಲ್ಲರೂ ತಲೆಬಾಗಲೇಬೇಕು. ಈಗಾಗಲೇ ಹೊನ್ನಾವರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತವಾಗಿ ಅವಿರೋಧ ಆಯ್ಕೆಯಾಗಿದೆ. ಕುಮಟಾದಲ್ಲೂ ಅವಿರೋಧ ಆಯ್ಕೆಯಾಗುವುದನ್ನು ಮತ್ತು ಕುಮಟಾ- ಹೊನ್ನಾವರದಲ್ಲಿ ಕಾಂಗ್ರೆಸ್ ಅಧೋಗತಿಯನ್ನು ಸಹಿಸಲಾಗದೇ ಒಳತಂತ್ರ ಮಾಡಿ, ಚುನಾಯಿತ ಸದಸ್ಯರಿಗೆ ಅವಮಾನ ಮಾಡಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ಆರೋಪಿಸಿದರು.