ಸಾರಾಂಶ
ಶಾಸಕರ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ಶಿಶು ಅಭಿವೃದ್ಧಿ ಯೋಜನೆಯ ಪೋಷಣ್ ಅಭಿಯಾನ ಯೋಜನೆಯಡಿ ಹಮ್ಮಿಕೊಂಡ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಅಂಗನವಾಡಿ ಕಾರ್ಯಕರ್ತೆಯರಿಗೆ ಪೋಷಣ್ ಅಭಿಯಾನದಡಿ ಸ್ಮಾರ್ಟ್ ಫೋನ್‌ಗಳು ವಿತರಣೆ ಮಾಡುತ್ತಿದ್ದು, ಕಾರ್ಯಕರ್ತೆಯರು ಮೊಬೈಲ್ ಸದುಪಯೋಗ ಪಡಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ಒದಗಿಸುವ ಕಾರ್ಯ ಮಾಡಬೇಕೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಹೇಳಿದರು.ನಗರದ ಶಾಸಕರ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ಶಿಶು ಅಭಿವೃದ್ಧಿ ಯೋಜನೆಯ ಪೋಷಣ್ ಅಭಿಯಾನ ಯೋಜನೆಯಡಿ ಹಮ್ಮಿಕೊಂಡ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ ಕಾರ್ಯಕ್ರಮದಲ್ಲಿ ಮೊಬೈಲ್ ವಿತರಣೆ ಮಾಡಿ ಮಾತನಾಡಿದರು.
ಡಿಜಿಟಲ್ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಬೆರಳ ತುದಿಯಡಿ ಎಲ್ಲ ಮಾಹಿತಿ ಪಡೆಯಲು ಮೊಬೈಲ್‌ಗಳ ಸಹಾಯವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ, ಬಾಣಂತಿ ಹಾಗೂ ಗರ್ಭಿಣಿಯರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಕರ್ತರು ಉತ್ತಮ ಕಾರ್ಯ ಮಾಡುತ್ತಿದ್ದಾರೆಂದರು.ಮೊಬೈಲ್‌ನಿಂದ ಮಕ್ಕಳ ಹಾಜರಾತಿ, ಆಹಾರ ವಿತರಣೆ, ಮಕ್ಕಳ ಬೆಳವಣಿಗೆ ಮಾಹಿತಿ, ಫಲಾನುಭವಿಗಳ ಮನೆ ಭೇಟಿ ವಿವರ, ಅಂಗನವಾಡಿ ಕೇಂದ್ರದ ದೈನಂದಿನ ಚಟುವಟಿಕೆ, ಲಸಿಕೆ ಹಾಗೂ ಇತರೆ ಕಾರ್ಯಕ್ರಮ ಬಗ್ಗೆ ಶೀಘ್ರವಾಗಿ ಮಾಹಿತಿ ಪಡೆಯಬಹುದಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಜನರ ಪ್ರಾಣ ಉಳಿಸುವ ಕಾರ್ಯ ಮಾಡಿದ್ದು ಅವರ ಸೇವೆ ಬಹಳಷ್ಟು ಪ್ರಾಮುಖ್ಯತೆ ಇದೆ ಎಂದರು.ಈ ವೇಳೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ವನಜಾಕ್ಷಿ , ಮಲ್ಲಿಕಾರ್ಜುನ ಈಟೆ, ಉಷಾ ಬಳಗಾನೋರ್, ಶರಣಗೌಡ ಮಾಲಿ ಪಾಟಿಲ್, ಅಮರೇಶ ಜಾಕಾ, ತಿಮ್ಮನ ನಾಯಕ, ಶರಣಗೌಡ ಬಲ್‌ಕಲ್, ಮಲ್ಲಮ್ಮ ಹಾಗೂ ಇನ್ನಿತರರು ಇದ್ದರು.