ಪಶುಪಾಲಕರೇ ಮಳೆಗಾಲದಲ್ಲಿ ಮುಂಜಾಗ್ರತ ಕ್ರಮ ಅನುಸರಿಸಿ: ಪಶುವೈದ್ಯ ನಂದೀಶ್ ಸಲಹೆ

| Published : Jun 24 2024, 01:31 AM IST

ಪಶುಪಾಲಕರೇ ಮಳೆಗಾಲದಲ್ಲಿ ಮುಂಜಾಗ್ರತ ಕ್ರಮ ಅನುಸರಿಸಿ: ಪಶುವೈದ್ಯ ನಂದೀಶ್ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಕುರಿ ಮೇಕೆಗಳಲ್ಲಿ ಗಳಲೆ ರೋಗ, ನೀಲಿ ನಾಲಿಗೆ ಕಾಯಿಲೆ ಮತ್ತು ಕರಳುಬೇನೆ ಕಾಯಿಲೆಗಳು ಕಂಡು ಬರುವ ಸಾಧ್ಯತೆಯಿದೆ. ಆದ್ದರಿಂದ ರೈತರು ಮುಂಜಾಗ್ರತೆ ತೆಗೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ತಿಪಟೂರು

ಮಳೆಗಾಲದಲ್ಲಿ ವಾತಾವರಣ ಬದಲಾವಣೆಯಾಗುವುದರಿಂದ ಪಶುಪಾಲಕರು ಹಲವು ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕೆಂದು ಪಶುಪಾಲನೆ ಹಾಗೂ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಂದೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳೆಗಾಲದಲ್ಲಿ ಜಾನುವಾರುಗಳು ಸಹಜವಾಗಿಯೇ ಒತ್ತಡಕ್ಕೊಳಗಾಗಿ ಅನೇಕ ಕಾಯಲೆಗಳು ಉಲ್ಬಣಗೊಳ್ಳುವ ಸಂಭವವಿರುತ್ತದೆ. ದನ, ಎಮ್ಮೆಗಳಲ್ಲಿ ಗಳಲೆ ರೋಗ, ಚಪ್ಪೆ ಕಾಯಿಲೆ, ಕಾಲು, ಬಾಯಿ ಜ್ವರ ಮತ್ತು ಚರ್ಮಗಂಟು ಕಾಯಿಲೆಗಳು ಉಲ್ಬಣಗೊಳ್ಳುವ ಸಾಧ್ಯತೆಯಿರುತ್ತದೆ. ಕುರಿ ಮೇಕೆಗಳಲ್ಲಿ ಗಳಲೆ ರೋಗ, ನೀಲಿ ನಾಲಿಗೆ ಕಾಯಿಲೆ ಮತ್ತು ಕರಳುಬೇನೆ ಕಾಯಿಲೆಗಳು ಕಂಡು ಬರುವ ಸಾಧ್ಯತೆಯಿದೆ. ಆದ್ದರಿಂದ ರೈತರು ಮುಂಜಾಗ್ರತೆ ತೆಗೆದುಕೊಳ್ಳಬೇಕು. ದಿಢೀರ್ ಜಾನುವಾರುಗಳು ಸಾವನ್ನಪ್ಪುವುದು ಕಂಡು ಬಂದಲ್ಲಿ ತಕ್ಷಣ ಸಮೀಪದ ಪಶುವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಲಸಿಕೆಗಳ ಲಭ್ಯತೆಗನುಗುಣವಾಗಿ ಪಶುವೈದ್ಯರು ಲಸಿಕೆಗಳನ್ನು ಹಾಕಲು ವ್ಯವಸ್ಥೆ ಮಾಡುತ್ತಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮೇವನ್ನು ಶೇಖರಿಸಿಟ್ಟುಕೊಳ್ಳುವುದು ಒಳ್ಳೆಯದು. ಹಸಿರು ಮೇವು ಬೆಳೆಯುವಾಗ ಹೂ ಬಿಡುವ ಸಂದರ್ಭದಲ್ಲಿ ಸೈನೈಡ್ ಮತ್ತು ನೈಟ್ರೈಟ್ ಅಂಶ ಹೆಚ್ಚಿದ್ದು, ಅಂತಹ ಮೇವಿನಿಂದಲೂ ಜಾನುವಾರುಗಳು ಸಾವನ್ನಪ್ಪುವ ಸಂದರ್ಭವಿರುತ್ತದೆ. ಆದ್ದರಿಂದ ನಿಗಾವಹಿಸಿ ಮೇವನ್ನು ನೀಡುವುದು ಅವಶ್ಯಕ. ಯಥೇಚ್ಚವಾಗಿ ಹಸಿರು ಮೇವು ಬೆಳೆಯಿತೆಂದು ಕೇವಲ ಹಸಿ ಮೇವನ್ನೇ ಹಾಕುವುದು ಒಳ್ಳೆಯದಲ್ಲ. ಒಣ ಮೇವು ಮತ್ತು ಹಸಿ ಮೇವುಗಳೆಡರನ್ನೂ ಮಿಶ್ರಣ ಮಾಡಿ ಜಾನುವಾರುಗಳಿಗೆ ನೀಡುವುದು ಉತ್ತಮ. ಸಿಡಿಲು- ಮಿಂಚುಗಳೊಂದಿಗೆ ಮಳೆ ಬರುವಾಗ ಎಲೆಕ್ಟ್ರಿಕ್ ಕಂಬಗಳ ಕೆಳಗೆ, ಮರಗಳ ಕೆಳಗೆ, ಜಾನುವಾರುಗಳನ್ನು ಕಟ್ಟುವುದನ್ನು ಆದಷ್ಟು ಕಡಿಮೆ ಮಾಡಿ. ಮಳೆ ಇರದ ಬೆಳಗಿನ ಸಮಯದಲ್ಲಿ ಜಾನುವಾರುಗಳನ್ನು ಹೊರಗಡೆ ಬಿಡಿ. ದುರಸ್ತಿ ಅವಶ್ಯಕತೆಯಿರುವ ಕೊಟ್ಟಿಗೆಗಳಲ್ಲಿ ಜಾನುವಾರುಗಳನ್ನು ಕಟ್ಟಬೇಡಿ.

ಕೆರೆ ಬಯಲಲ್ಲಿ ಮೇಯುವ ಜಾನುವಾರುಗಳು ಹುಲ್ಲಿನ ತುದಿಯಲ್ಲಿರುವ ಜಂತಿನ ಮೊಟ್ಟೆಗಳನ್ನು ಮೇವಿನೊಡನೆ ತಿಂದು ದೇಹದಲ್ಲಿ ಜಂತುಗಳು ವರ್ಧಿಸಿ ಬೇಧಿಯಾವುದು. ನಿಶ್ಯಕ್ತಿಯಾಗಿ ನಿತ್ರಾಣಗೊಳ್ಳುವುದು, ಗದ್ದದ ಕೆಳಗೆ ಊತ ಬರುವುದು ಸಂಭವಿಸಬಹುದು. ಆದ್ದರಿಂದ ಇಂತಹ ಸನ್ನಿವೇಶಗಳು ಕಂಡ ಕೂಡಲೇ ಸಮೀಪದ ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತವಾದ ಜಂತುನಾಶಕವನ್ನು ತಮ್ಮ ಜಾನುವಾರುಗಳಿಗೆ ಕೊಡಬೇಕೆಂದು ರೈತ ಬಾಂಧವರಿಗೆ ತಿಳಿಸಿದ್ದಾರೆ.