ಕೊಪ್ಪಳ: ಆಂಜನಾದ್ರಿಯ ಆಂಜನೇಯ ದೇವಸ್ಥಾನಕ್ಕೆ ಹೈದ್ರಾಬಾದ್ ಮೂಲದ ಉದ್ಯಮಿ ನೀಡಿದ್ದ 1.400 ಕೆಜಿ ಬಂಗಾರದ ಆಭರಣದಲ್ಲಿನ ಬಂಗಾರ ಪತ್ತೆ ಅಸಾಧ್ಯವಾಗಿದ್ದರಿಂದ ಇದ್ದಂತೆಯೇ ಸಂರಕ್ಷಣೆ ಮಾಡಲು ಕೊಪ್ಪಳ ಜಿಲ್ಲಾಡಳಿತ ತೀರ್ಮಾನ ಮಾಡಿದೆ. ಹೀಗಾಗಿ, ಕಾಣಿಕೆ ನೀಡಿದ್ದ ಪ್ರಭಾವಳಿಗಳಲ್ಲಿನ ಬಂಗಾರ ಎಷ್ಟೆಂಬುದು ನಿಗೂಢವಾಗಿದ್ದು, ವಿವಾದಕ್ಕೆ ಈಗ ತೆರೆ ಎಳೆಯಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಅಂಜನಾದ್ರಿಯ ಆಂಜನೇಯನ ದೇವಸ್ಥಾನಕ್ಕೆ ನೀಡಿದ್ದ ಬಂಗಾರದ ಪ್ರಭಾವಳಿಗಳಲ್ಲಿರುವ ಬಂಗಾರದ ಪ್ರಮಾಣ ಇದ್ದಂತೆಯೇ ಪತ್ತೆ ಮಾಡುವುದು ಅಸಾಧ್ಯ. ಅದನ್ನು ಕರಗಿಸಿ ನೋಡಿದರೆ ಮಾತ್ರ ಅದರಲ್ಲಿರುವ ಬಂಗಾರ ಪ್ರಮಾಣ ಅಳೆಯಲು ಸಾಧ್ಯ. ಹೀಗಾಗಿ ಅವುಗಳು ಇದ್ಧಂತೆಯೇ ಸಂರಕ್ಷಣೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.ಹಟ್ಟಿ ಚಿನ್ನದ ಗಣಿಯ ತಜ್ಞರನ್ನು ಸಹ ಸಂಪರ್ಕ ಮಾಡಿದಾಗ ಅವರು ಸಹ ಆಭರಣ ಇದ್ದಂತೆಯೇ ಅದರಲ್ಲಿರುವ ಬಂಗಾರದ ಪ್ರಮಾಣ ಪತ್ತೆ ಮಾಡಲು ಸಾಧ್ಯವಿಲ್ಲ. ನಮ್ಮ ಬಳಿಯೂ ಅಂಥ ಯಾವುದೇ ತಂತ್ರಜ್ಞಾನ ಇಲ್ಲ ಎಂದಿದ್ದಾರೆ.
ಇನ್ನು ಬೆಂಗಳೂರಿನ ಹಾಲ್ ಮಾರ್ಕ್ ಕಂಪನಿಯೊಂದನ್ನು ಸಂಪರ್ಕ ಮಾಡಿ, ಕಮಲ ಕುಮಾರ ಎನ್ನುವವರನ್ನು ಮೇಲ್ ಮೂಲಕ ಸಂಪರ್ಕ ಮಾಡಿ ಪತ್ರ ವ್ಯವಹಾರ ಮಾಡಿದಾಗಲೂ ಆಭರಣ ಇದ್ದಂತೆಯೇ ನೋಡಿ ಅದರಲ್ಲಿರುವ ಬಂಗಾರ ಅಳೆಯುವುದು ಅಸಾಧ್ಯ ಎಂದು ಹೇಳಿದ್ದಾರೆ.ಕೇವಲ ಸಣ್ಣಪುಟ್ಟ ಆಭರಣಗಳನ್ನು ಸ್ಕ್ಯಾನ್ ಮಾಡಿ ಅದರಲ್ಲಿರುವ ಬಂಗಾರದ ಪ್ರಮಾಣ ಪತ್ತೆ ಮಾಡುತ್ತಾರೆ. ಆದರೆ, ಇಂಥ ದೊಡ್ಡ ದೊಡ್ಡ ಪ್ರಭಾವಳಿಗಳಲ್ಲಿರುವ ಬಂಗಾರ ಪತ್ತೆ ಮಾಡಲು ಎಲ್ಲಿಯೂ ಅವಕಾಶ ಇಲ್ಲದಿರುವುದರಿಂದ ಕೊಟ್ಟಿರುವ ದಾಖಲೆ ಆಧರಿಸಿ ಸಂರಕ್ಷಣೆ ಮಾಡಲಾಗುತ್ತದೆ.
ಕಾಣಿಕೆ ಕೊಟ್ಟಿರುವ ಮಹೇಶ ರೆಡ್ಡಿ ನೀಡಿರುವ ದಾಖಲೆಯ ಪ್ರಕಾರ 1400 ಗ್ರಾಮ ಚಿನ್ನವಿದೆ ಎನ್ನುವ ಬಿಲ್ ಇದೆ ಹಾಗೂ ಅದರ ಮೌಲ್ಯ ₹2.20 ಕೋಟಿ. ಹಾಗೆ ಅದನ್ನು ಸಿದ್ಧ ಮಾಡಲು ₹9 ಲಕ್ಷ ಪಾವತಿ ಮಾಡಿದ್ದಾರೆ. ಹಾಗೆಯೇ ಸಿದ್ಧ ಮಾಡಿದ ಅಕ್ಕಸಾಲಿಗ ಗುಂಡಾಚಾರ್ಯ ಸಹ ಬಾಂಡ್ ನೀಡಿದ್ದು, ಅಷ್ಟು ಬಂಗಾರ ಹಾಕಿಯೇ ಸಿದ್ಧ ಮಾಡಿದ್ದೇವೆ. ಶೇ.10 ರಷ್ಟು ವೇಸ್ಟೇಜ್ ಇರುತ್ತದೆ. ಉಳಿದಂತೆ ಅದಕ್ಕೆ ಸಂಬಂಧಿಸಿದಂತೆ 50 ವರ್ಷಗಳ ಗ್ಯಾರಂಟಿ ಪತ್ರ ನೀಡಿದ್ದಾರೆ.
ಇದಕ್ಕೂ ಮುಂಚೆ ಸ್ಥಳೀಯವಾಗಿ ಪರಶುರಾಮ ಎನ್ನುವ ಅಕ್ಕಸಾಲಿಗ ಕೇವಲ 250 ರಿಂದ 300 ಗ್ರಾಮ ಬಂಗಾರ ಇದೆ ಎಂದು ಹೇಳಿದ್ದರೆ, ನಾಗರಾಜ ಆಚಾರ ಹೊಸಪೇಟೆ 1 ಕೆಜಿ ಇದೆ ಎಂದು, ಗೋಪಾಲ ಅಚಾರ 1 ಕೆಜಿ 150 ಗ್ರಾಮ ಇದೆ ಎಂದು ಹೇಳಿದ್ದಾರೆ.
ಹೀಗಾಗಿ, ಇದನ್ನು ಮೀರಿ ಅದನ್ನು ಪರಿಶೀಲನೆ ಮಾಡಲು ಸಾಧ್ಯವಿಲ್ಲದೇ ಇರುವುದರಿಂದ ಎಲ್ಲ ದಾಖಲೆಗಳೊಂದಿಗೆ ಸಂರಕ್ಷಣೆ ಮಾಡಲಾಗುವುದು ಮತ್ತು ಅಗತ್ಯವಿದ್ದಾಗ ಬಳಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದ್ದಾರೆ.ಈಗ ಅದನ್ನು ಕರಗಿಸಿ ನೋಡಲು ಹೋದರೇ ಅಕ್ಕಸಾಲಿಗನಿಗೆ ಲಕ್ಷ ಲಕ್ಷ ಹಣ ಪಾವತಿ ಮಾಡಬೇಕು. ಪುನಃ ಅದನ್ನು ಸಿದ್ಧ ಮಾಡಲು ಅಕ್ಕಸಾಲಿಗನ ಚಾರ್ಜ್ ₹9 ಲಕ್ಷ ನೀಡಬೇಕು. ಆಗಲೂ ಅದರಲ್ಲಿರುವ ಬಂಗಾರದ ಪ್ರಮಾಣ ಅಳೆಯಲು ಸಾಧ್ಯವಿರುವುದಿಲ್ಲ. ಹೀಗಾಗಿ, ಉದ್ಯಮಿ ಕೊಟ್ಟಿರುವ ದಾಖಲೆ ಮತ್ತು ಅಕ್ಕಸಾಲಿಗರು ನೀಡಿರುವ ವರದಿಗಳನ್ನು ಸೇರಿ ಸಂರಕ್ಷಣೆ ಮಾಡುವುದಾಗಿ ಹೇಳಿದ್ದಾರೆ.
ಹೀಗಾಗಿ, ಆಂಜನೇಯನ ದೇವಸ್ಥಾನಕ್ಕೆ ಕಾಣಿಕೆ ಬಂದಿರುವ ಪ್ರಭಾವಳಿಯಲ್ಲಿರುವ ಬಂಗಾರ ಎಷ್ಟು ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.