ಸಾರಾಂಶ
==
5 ತಿಂಗಳಲ್ಲಿ 24 ಟನ್ ಅಕ್ಕಿ,270 ಕ್ವಿಂಟಲ್ ಗೋಧಿ ವಶಪಡಿತರ ಆಹಾರಧಾನ್ಯಗಳ ಅಕ್ರಮ ಮಾರಾಟ, ದಾಸ್ತಾನು ತಡೆಗೆ ಆಹಾರ ಇಲಾಖೆ 5 ತಿಂಗಳಲ್ಲಿ 300ಕ್ಕೂ ಹೆಚ್ಚು ದಾಳಿ ನಡೆಸಿದ್ದು, 250ಕ್ಕೂ ಹೆಚ್ಚು ಎಫ್‌ಐಆರ್ ದಾಖಲಿಸಿ, 220ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದೆ. ಕೋಟ್ಯಂತರ ರು. ಮೌಲ್ಯದ ಪಡಿತರ ಆಹಾರ ಧಾನ್ಯ ವಶಪಡಿಸಿಕೊಂಡಿದೆ. ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದ ಪ್ರಕರಣಗಳು ಯಾದಗಿರಿ, ಗಂಗಾವತಿ, ಹಾಸನ ಸೇರಿ ಇತರೆಡೆ ಪತ್ತೆಯಾದ ಬೆನ್ನಲ್ಲೇ ಅಕ್ರಮ ದಾಸ್ತಾನುಗಳ ಮೇಲಿನ ದಾಳಿಯನ್ನು ಇಲಾಖೆ ತೀವ್ರಗೊಳಿಸಿದೆ. ಏಪ್ರಿಲ್‌ನಿಂದ ಈವರೆಗೆ 23 ಸಾವಿರ ಕ್ವಿಂಟಲ್ ಅಕ್ಕಿ, 270 ಕ್ವಿಂಟಲ್ ಗೋಧಿ, 53 ಕ್ವಿಂಟಲ್ ರಾಗಿ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಸಾಗಣೆಗೆ ಬಳಸಲಾದ 110ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದೆ.==ಸಂಪತ್ ತರೀಕೆರೆಕನ್ನಡಪ್ರಭ ವಾರ್ತೆ ಬೆಂಗಳೂರು
ಪಡಿತರ ವ್ಯವಸ್ಥೆಯ ಮೂಲಕ ಬಡವರಿಗೆ ವಿತರಿಸುವ ಅನ್ನಭಾಗ್ಯದ ಅಕ್ಕಿ ವಿದೇಶಗಳಿಗೆ ರವಾನೆಯಾಗುತ್ತಿರುವ ಸುದ್ದಿಯ ನಡುವೆಯೇ, ಅನ್ಯ ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬಂದಿರುವ 50000ಕ್ಕೂ ಹೆಚ್ಚು ಜನರು ರಾಜ್ಯದ ಪಡಿತರ ವ್ಯವಸ್ಥೆಯ ಮೂಲಕ ಅಕ್ರಮವಾಗಿ ಆಹಾರ ಪದಾರ್ಥ ಪಡೆಯುತ್ತಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಅಷ್ಟು ಮಾತ್ರವಲ್ಲ, ರಾಜ್ಯದ ವಿವಿಧ ಕಂಪನಿಗಳಲ್ಲಿ ನಿರ್ದೇಶಕರಾಗಿರುವ 19,690 ಮಂದಿ ಕೂಡ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ ಎಂಬ ವಿಷಯವನ್ನು ಆಹಾರ ಇಲಾಖೆ ಪತ್ತೆ ಮಾಡಿದೆ.ಅಕ್ರಮ ಪಡಿತರ ಚೀಟಿ ಪತ್ತೆಗೆ ನಡೆಸಿದ ಅಭಿಯಾನದ ವೇಳೆ ರಾಜ್ಯದಲ್ಲಿ ವಿತರಣೆಯಾಗಿರುವ ಒಟ್ಟು 1.16 ಕೋಟಿ ಪಡಿತರ ಚೀಟಿಗಳಲ್ಲಿ 12 ಲಕ್ಷಕ್ಕೂ ಅಧಿಕ ಕಾರ್ಡ್‌ಗಳನ್ನು ಶಂಕಾಸ್ಪದ ಕಾರ್ಡ್‌ಗಳೆಂದು ಆಹಾರ ಇಲಾಖೆ ಗುರುತಿಸಿದೆ.
ಅಕ್ರಮ ಕಾರ್ಡ್:ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್ ಕಾರ್ಡ್ ನೀಡಬೇಕೆಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ಸದ್ಯ 3,93,29,981 ಫಲಾನುಭವಿಗಳಿಗೆ 1,16,51,209 ಬಿಪಿಎಲ್ ಕಾರ್ಡ್ ನೀಡಲಾಗಿದೆ. ನಿಗದಿಗಿಂತ ಹೆಚ್ಚುವರಿಯಾಗಿ 14 ಲಕ್ಷ ಬಿಪಿಎಲ್ ಕಾರ್ಡ್ ವಿತರಣೆಯಾಗಿವೆ.ಈ ಪೈಕಿ 12 ಲಕ್ಷಕ್ಕೂ ಅಧಿಕ ಕಾರ್ಡ್‌ಗಳನ್ನು ಶಂಕಾಸ್ಪದ ಕಾರ್ಡ್‌ಗಳೆಂದು ಆಹಾರ ಇಲಾಖೆ ಗುರುತಿಸಿದೆ. ಆಘಾತಕಾರಿ ಸಂಗತಿಯೆಂದರೆ ವಿವಿಧ ಕಂಪನಿಗಳಲ್ಲಿ ನಿರ್ದೇಶಕರಾಗಿರುವ 19,690 ಮಂದಿ ಬಿಪಿಎಲ್ ಕಾರ್ಡ್ ಪಡೆದಿದ್ದು, ಇದರ ಮೂಲಕ 21,402 ಮಂದಿ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತ್ತಿರುವುದು ಹುಬ್ಬೇರಿಸುವಂತೆ ಮಾಡಿದೆ. ಒಟ್ಟು 25 ಲಕ್ಷ ಜಿಎಸ್‌ಟಿ ವಹಿವಾಟು ಮೀರಿದವರೂ 2,684 ಕಾರ್ಡ್ ಪಡೆದಿದ್ದು, 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ 5.13 ಲಕ್ಷ ಮಂದಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಇದರ ಫಲಾನುಭವಿಗಳ ಸಂಖ್ಯೆ 5.80 ಲಕ್ಷ ಎಂದು ಪತ್ತೆ ಮಾಡಲಾಗಿದೆ.57,864 ನಕಲಿ ಕಾರ್ಡ್:ಜತೆಗೆ ಹೊರ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ವಾಸಿಸುತ್ತಿರುವ 57,864 ಮಂದಿ ನಕಲಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಇವರೆಲ್ಲರೂ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಪಡೆಯುತ್ತಿದ್ದಾರೆ. 57,864 ಪಡಿತರ ಚೀಟಿಗಳ 73,859 ಮಂದಿ ಫಲಾನುಭವಿಗಳು 7.79 ಲಕ್ಷ ಕೆ.ಜಿ. ಅಕ್ಕಿಯನ್ನು (ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 10 ಕೆ.ಜಿ. ಅಕ್ಕಿ) ಪ್ರತಿ ತಿಂಗಳು ಪಡಿತರ ಆಹಾರ ಧಾನ್ಯ ಪಡೆಯುತ್ತಿದ್ದು, ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ.ಶಂಕಾಸ್ಪದ ಪಡಿತರ ಚೀಟಿಗಳನ್ನು ಪಡೆದವರಲ್ಲಿ 100 ವರ್ಷ ವಯೋಮಿತಿ ದಾಟಿರುವವರು 2,040 ಮಂದಿ ಇದ್ದಾರೆ. ಮೃತ ಸದಸ್ಯರು 1,446 ಪಡಿತರ ಚೀಟಿ ಹೊಂದಿದ್ದು, 18 ವರ್ಷಕ್ಕಿಂತ ಕಡಿಮೆ ಇರುವವರು 731 ಮಂದಿ ಇದ್ದಾರೆ. ಈ ನಡುವೆ ಬೋಗಸ್ ಕಾರ್ಡ್ ಪತ್ತೆಗೆ, ಪಡಿತರ ಸೋರಿಕೆ ತಡೆಯುವ ಉದ್ದೇಶದಿಂದ ಇಲಾಖೆ, ರೇಷನ್ ಕಾರ್ಡ್‌ಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಜೋಡಣೆ ಕಡ್ಡಾಯ ಎಂದು ಆದೇಶವಿದೆ. ಆದರೆ, 6,16,196 ಕಾರ್ಡ್‌ಗಳು ಇನ್ನೂ ಇ-ಕೆವೈಸಿ ಮಾಡಿಸಿಲ್ಲ ಎನ್ನಲಾಗಿದೆ.ಆಹಾರ ಇಲಾಖೆ ಗುರುತಿಸಿರುವ 12 ಲಕ್ಷ ಶಂಕಾಸ್ಪದ ಪಡಿತರ ಚೀಟಿಗಳ ಪೈಕಿ ಈಗಾಗಲೇ 4 ರಿಂದ 5 ಲಕ್ಷ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಇನ್ನೂ ಪಡಿತರ ಕಾರ್ಡ್‌ಗಳ ಪರಿಶೀಲನೆ ಕಾರ್ಯ ಮುಂದುವರೆದಿದ್ದು, ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಕಾರ್ಡ್ ರದ್ದು ಮಾಡಿ, ಅವರ ವಿರುದ್ಧ ಪ್ರಕರಣ ದಾಖಲು ಮಾಡುತ್ತೇವೆ. ದಂಡ ವಸೂಲಿಯನ್ನೂ ಮಾಡಲಾಗುವುದು ಎಂದು ಆಹಾರ ಇಲಾಖೆ ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.==