ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆ ಅಧಿಕಾರಿಗಳ ಬಗ್ಗೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವಹೇಳನವಾಗಿ ಮಾತನಾಡಿರುವುದು ಖಂಡನೀಯ. ಕೂಡಲೇ ಕ್ಷಮೆಯಾಚಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಆಗ್ರಹಿಸಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿನಡಿಯಲ್ಲಿ ಸೇವೆ ಸಲ್ಲಿಸುವ ಪೊಲೀಸ್ ಇಲಾಖೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದರು.
ತಾವು ಶಾಸಕರಾಗಿದ್ದ ಅವಧಿಯಲ್ಲಿ ನಿಮಗೂ ರಕ್ಷಣೆ ನೀಡಿದ್ದವರು ಪೊಲೀಸರೇ ಎನ್ನುವುದನ್ನು ಮರೆಯಬಾರದು. ಶಾಸಕರಿಗೆ ಬಕೆಟ್ ಹಿಡಿಯುತ್ತಾರೆ ಎಂಬ ಪದವನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.ಈ ಹಿಂದಿನ ಅಧಿಕಾರದ ಅವಧಿಯಲ್ಲಿ ಜಡ್ಡು ಹಿಡಿದಿದ್ದ ತಾಲೂಕು ಆಡಳಿತವನ್ನು ಚುರುಕುಗೊಳಿಸುವ ಕೆಲಸವನ್ನು ಹಾಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾಡುತ್ತಿದ್ದಾರೆ. ಸಾರ್ವಜನಿಕರ ಕೆಲಸಗಳು ಯಾವುದೇ ತೊಂದರೆ ಇಲ್ಲದೇ ನಡೆಯುತ್ತಿವೆ. ಮಾಜಿ ಶಾಸಕರು ಮನಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಪಂ ಮಾಜಿ ಉಪಾಧ್ಯಕ್ಷ ಮಾರ್ಕಾಲು ಸಿ. ಮಾಧು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತ ಪಡೆದು ಗೆಲುವು ಸಾಧಿಸಿದ್ದ ನೀವು ದಲಿತ ಸಂಘಟನೆಗಳ ಪದಾಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡುವುದು ಖಂಡನೀಯ. ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ ರಾಜು ಮಾತನಾಡಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರು ನನ್ನನ್ನು ಜನರು ಮರೆತು ಹೋಗುತ್ತಾರೆಂದು ಪದೇ ಪದೇ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಗ್ಯಾರಂಟಿ ಯೋಜನೆ ಅನುಷ್ಠಾನಗಳ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ಮಳವಳ್ಳಿ ಜನರ ಮತ ಪಡೆದ ಎಚ್.ಡಿ. ಕುಮಾರಸ್ವಾಮಿ ಮಳವಳ್ಳಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು ಅವರ ಕರ್ತವ್ಯವಾಗಿದೆ ಎನ್ನುವುದನ್ನು ಮಾಜಿ ಶಾಸಕರು ಮರೆಯಬಾರದು ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಂಕ್ ಮಹದೇವು, ಕೃಷ್ಣಮೂರ್ತಿ,ರವೀಂದ್ರ ಜಯರಾಜು, ಕಿರಣ್‌ಶಂಕರ್, ಮಹದೇವು, ಪ್ರಮೀಳ, ವೇದಾವತಿ ಸೇರಿದಂತೆ ಇತರರು ಇದ್ದರು.