ಅಣ್ಣಪ್ಪಸ್ವಾಮಿ ದೇವಾಲಯ ಧರ್ಮ ದೈವ ನೇಮೋತ್ಸವ

| Published : Apr 16 2024, 01:07 AM IST

ಸಾರಾಂಶ

ಧರ್ಮದೈವಗಳ ನೇಮೋತ್ಸವ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು. ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ನಾರ್ಗಾಣೆ ಗ್ರಾಮದ ಶ್ರೀದೇವಿಯ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಧರ್ಮ ದೈವದ ನೇಮೋತ್ಸವ ಎರಡು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯ ಹಾಗೂ ಧರ್ಮ ದೈವಗಳ ನೇಮೋತ್ಸವ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.

ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ಧರ್ಮ ದೈವದ ನೇಮೋತ್ಸವದ ಅಂಗವಾಗಿ ದೇವಾಲಯದ ಆವರಣದ ವ್ಯಾಪ್ತಿಯಲ್ಲಿ ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಸುತ್ತ ಮುತ್ತಲ ಗ್ರಾಮ ಹಾಗೂ ಊರುಗಳಾದ ವಿರಾಜಪೇಟೆ, ಸಿದ್ಧಾಪುರ ಕುಶಾಲನಗರ ಹಾಗೂ ನೆರೆಯ ಜಿಲ್ಲೆಯ ಸುಳ್ಯ, ಪುತ್ತೂರು ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಜರಿದ್ದರು.

14ರಂದು ರಾತ್ರಿ 8 ಗಂಟೆಗೆ ಭಂಡಾರ ಮೆರವಣಿಗೆ, 8.30ಕ್ಕೆ ಎಣ್ಣೆ ಅರ್ಪಣೆ, 10 ಗಂಟೆಯ ನಂತರ ಕಲ್ಲುರ್ಟಿ ದೈವದ ನೇಮೋತ್ಸವವು ನಡೆದು ಭಕ್ತಾದಿಗಳಿಗೆ ದರ್ಶನ ನೀಡಿತು. ನಂತರ ಭಕ್ತಾದಿಗಳಿಗೆ ಗಂಧ ಪ್ರಸಾದ ವಿತರಿಸಲಾಯಿತು. ರಾತ್ರಿ 1 ಗಂಟೆಗೆ ಧರ್ಮ ದೈವವಾದ ಅಣ್ಣಪ್ಪ, ಪಂಜುರ್ಲಿ ದೈವದ ನೇಮವು ನೆರವೇರಿತು. ರಾತ್ರಿ 3.30ಗಂಟೆಯ ನಂತರ ಗುಳಿಗ ಹಾಗೂ ಚಾಮುಂಡೇಶ್ವರಿ ಧರ್ಮ ದೈವದ ಜೋಡಿ ಕೋಲವು ಬೆಳಗ್ಗೆ 8 ಗಂಟೆಯವರೆಗೆ ನಡೆಯಿತು. ಧರ್ಮ ದೈವಕ್ಕೆ ಅರ್ಪಣೆಯನ್ನು ನೀಡಲಾಯಿತು.

ಏ.15ರಂದು ಬೆಳಗ್ಗೆ 8 ಗಂಟೆಗೆ ಧರ್ಮ ದೈವದ ಹರಕೆ, ಬೇಡಿಕೆಗಳನ್ನು ಭಕ್ತಾದಿಗಳು ಅರ್ಪಿಸಿದರು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರೆವೇರಿತು.

ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆಯನ್ನು ನೆರೆದಿದ್ದ ಭಕ್ತಾದಿಗಳಿಗೆ ನೀಡಲಾಯಿತು. ಈ ನಾರ್ಗಾಣೆ ಗ್ರಾಮದ ಶ್ರೀ ದೇವಿಯ ಅಣ್ಣಪ್ಪಸ್ವಾಮಿ ದೇವಾಲಯ ಪ್ರಮುಖರಾದ ಬಿ.ಡಿ.ರಾಜು ರೈ ಹಾಗೂ ಕುಟುಂಬಸ್ಥರು ಇದ್ದರು.