ಸಾಯಿನಾಥ ದೇವಾಲಯದ ವಾರ್ಷಿಕೋತ್ಸವ

| Published : Feb 06 2025, 11:45 PM IST / Updated: Feb 06 2025, 11:46 PM IST

ಸಾರಾಂಶ

ನಗರದ ಕುಣಿಗಲ್ ರಸ್ತೆಯಲ್ಲಿರುವ ರಾಮಕೃಷ್ಣ ನಗರದ ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿ ವತಿಯಿಂದ 13 ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ, ತುಮಕೂರುನಗರದ ಕುಣಿಗಲ್ ರಸ್ತೆಯಲ್ಲಿರುವ ರಾಮಕೃಷ್ಣ ನಗರದ ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿ ವತಿಯಿಂದ 13 ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು. 13ನೇ ವಾರ್ಷಿಕೋತ್ಸವದ ಅಂಗವಾಗಿ ಅಮರಜ್ಯೋತಿನಗರ, ಗಾಂಧಿನಗರ ಹಾಗೂ ಬನಶಂಕರಿ ನಗರದಲ್ಲಿ ಭಿಕ್ಷಾಟನೆ ನಡೆಸಲಾಯಿತು.ಭಿಕ್ಷಾಟನೆಗೆ ಸಾಯಿನಾಥ ದೇವಾಲಯದ ಸಂಸ್ಥಾಪಕ ಮಾಜಿ ಸಂಸದ ಜಿ.ಎಸ್. ಬಸವರಾಜು ಚಾಲನೆ ನೀಡಿದರು. ಸಂಜೆ 6.30 ರಿಂದ ಸಾಯಿ ಭಜನೆ ನಡೆಯಿತು. ಬೆಳಿಗ್ಗೆ 6 ಗಂಟೆಗೆ ಸಾಯಿಬಾಬ ಮೂರ್ತಿಗೆ ಕಾಕಡ ಆರತಿ, ಕ್ಷೀರಾಭಿಷೇಕ, ವಿಶೇಷ ಲೋಕಶಾಂತಿ ಹೋಮ, ಪೂರ್ಣಾಹುತಿ ಹಾಗೂ ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿತು. ರಾತ್ರಿ ಪಲ್ಲಕ್ಕಿ ಉತ್ಸವ, ಶೇಜಾರತಿ ನೆರವೇರಿತು. ವಾರ್ಷಿಕೋತ್ಸವದ ಪ್ರಯುಕ್ತ ಭಕ್ತರಿಗೆ ನಿರಂತರ ದಾಸೋಹವನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸಾಯಿ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಭಕ್ತರಾದ ಲಕ್ಷ್ಮೀ ಬಾಯಿ ಶಿಂಧೆ ಅವರಿಗೆ ಸಾಯಿಬಾಬಾರವರು ಪ್ರಸಾದ ರೂಪದಲ್ಲಿ ನೀಡಲಾಗಿದ್ದ 9 ನಾಣ್ಯಗಳ ದಿವ್ಯ ದರ್ಶನವನ್ನು ಸಾರ್ವಜನಿಕರ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಶಿರಡಿಯಿಂದ ತಂದಿದ್ದ ಈ 9 ನಾಣ್ಯಗಳ ದಿವ್ಯ ದರ್ಶನವನ್ನು ಭಕ್ತಾದಿಗಳು ಸರದಿಯ ಸಾಲಿನಲ್ಲಿ ನಿಂತು ನೋಡಿ ಪುನೀತರಾದರು. ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಕಳೆದ 13 ವರ್ಷದ ಹಿಂದೆ ಎಲ್ಲರ ಸಹಕಾರದೊಂದಿಗೆ ಸಾಯಿಬಾಬಾರವರ ದೇವಾಲಯವನ್ನು ನಿರ್ಮಾಣ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಭಕ್ತಾದಿಗಳು ಸಾಯಿಬಾಬಾರವರ ದರ್ಶನ ಪಡೆಯುತ್ತಿದ್ದಾರೆ. ಜನರ ಆಶಯಕ್ಕೆ ಈ ದೇವಾಲಯ ಸ್ಪಂದಿಸಿದೆ. ಭಕ್ತಿ, ಜ್ಞಾನ, ದಾಸೋಹ ಕೇಂದ್ರವೂ ಕೂಡಾ ಆಗಿದೆ. 13 ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಭಕ್ತರ ಮನೋಭಿಲಾಷೆಗಳು ಈಡೇರುತ್ತಿವೆ. ಭಿಕ್ಷಾಟನೆ ಮಾಡುತ್ತಿರುವುದು ಸಾಯಿನಾಥನ ಸಂಪ್ರದಾಯವಾಗಿದೆ ಎಂದು ಹೇಳಿದರು.ನಾವು ಯಾವುದೇ ಕಾಯಕ, ವಿದ್ಯೆ ಸೇರಿದಂತೆ ನಮ್ಮ ಅಭಿಲಾಷೆಗಳು ಈಡೇರಬೇಕಾದರೆ ಗುರುವಿನ ಪ್ರೇರಣೆ ಬಹುಮುಖ್ಯ ಎಂದರು.ಪ್ರತಿ ಗುರುವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಬಂದು ಬಾಬಾರವರ ದರ್ಶನ ಪಡೆದು ಹೋಗುತ್ತಾರೆ. ಪ್ರಸಾದ ವ್ಯವಸ್ಥೆಯೂ ಸಹ ನಿರಂತರವಾಗಿ ನಡೆಯುತ್ತಾ ಬಂದಿದೆ ಎಂದರು.ಸಾಯಿಬಾಬಾರವರಿಗೆ ಊಟ ನೀಡುತ್ತಿದ್ದ ಲಕ್ಷ್ಮೀಬಾಯಿ ಶಿಂಧೆಯವರಿಗೆ 1918 ರಲ್ಲಿ ಬಾಬಾರವರು ಕಾಲವಾಗುವ ಸಂದರ್ಭದಲ್ಲಿ ತಮ್ಮ ಬಳಿಯಿದ್ದ 9 ನಾಣ್ಯಗಳನ್ನು ನೀಡಿದ್ದರು. ಈ 9 ನಾಣ್ಯಗಳನ್ನು ಲಕ್ಷ್ಮೀಬಾಯಿ ಶಿಂಧೆರವರ ಮರಿಮಗ ಅರುಣ್‌ ಗಾಯಕವಾಡ್ ರವರು ಶಿರಡಿಯಿಂದ ತಂದು ಈ ಬಾರಿ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.13ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಹೋಮ ಪೂಜಾ ಕೈಂಕರ್ಯದಲ್ಲಿ ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ಸಮಾಜ ಸಮೃದ್ಧಿಯಾಗಲಿ ಎಂದು ಬಾಬಾರವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು. ಸಾಯಿನಾಥ ದೇವಾಲಯಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೇರಿದಂತೆ ಅನೇಕ ಗಣ್ಯರು, ಅಪಾರ ಭಕ್ತರು ಆಗಮಿಸಿ ಬಾಬಾರವರ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಶಿರಡಿಯ ಅರುಣ್ ಗಾಯಕವಾಡ್, ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿಯ ಕೆ.ಎಸ್. ಗುರುಸಿದ್ದಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಶಿವರುದ್ರಪ್ಪ, ರಂಗನಾಥ್, ರಕ್ಷಿತ್‌ಕುಮಾರ್, ಹರೀಶ್ ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.