ಸಾರಾಂಶ
ಸೋಗಾನೆ, ಗೋವಿಂದಪುರ, ಅನುಪಿನಕಟ್ಟೆ ಗ್ರಾಮಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸುವ ಚರ್ಚೆ ನಡೆದಿದೆ ಎಂದು ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೋಗಾನೆ, ಗೋವಿಂದಪುರ, ಅನುಪಿನಕಟ್ಟೆ ಗ್ರಾಮಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸುವ ಚರ್ಚೆ ನಡೆದಿದೆ ಎಂದು ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 20 ವರ್ಷಗಳ ಹಿಂದೆಯೇ ಮಲವಗೊಪ್ಪ, ಗಾಡಿಕೊಪ್ಪ, ಬೊಮ್ಮನಕಟ್ಟೆ, ಮಲ್ಲಿಗೇನಹಳ್ಳಿ ಸೇರಿದಂತೆ ಇತರೆ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿತ್ತು. ಈಗ ಮತ್ತೆ ಪಾಲಿಕೆ ವ್ಯಾಪ್ತಿಗೆ ಸೋಗಾನೆ, ಗೋವಿಂದಪುರ, ಅನುಪಿನಕಟ್ಟೆ ಮುಂತಾದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳನ್ನು ಸೇರಿಸುವ ಚರ್ಚೆ ನಡೆದಿದೆ. ಈಗಾಗಲೇ ಪಾಲಿಕೆಗೆ ಸರ್ಕಾರದಿಂದ ಪತ್ರ ಕೂಡ ಬಂದಿದೆ ಎಂದು ಮಾಹಿತಿ ನೀಡಿದರು.
ಆದರೆ, ಈ ಹಿಂದೆ ನಗರಸಭಾ ವ್ಯಾಪ್ತಿಗೆ ಸೇರಿದ್ದ ಪ್ರದೇಶಗಳ ಅಭಿವೃದ್ಧಿಯೇ ಇನ್ನೂ ಆಗಿಲ್ಲ. ಮೂಲಸೌಲಭ್ಯಗಳು ಆ ಗ್ರಾಮಗಳಿಗೆ ಕಲ್ಪಿಸಿಲ್ಲ. ಹೊಸದಾಗಿ ಗ್ರಾಮಗಳನ್ನು ಸೇರಿಸುವ ಮುನ್ನಾ ಈಗಾಗಲೇ ಸೇರಿಸಿರುವ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ನ್ನು ಘೋಷಣೆ ಮಾಡಿ ನಂತರ ಸೇರಿಸಬೇಕು ಎಂದು ಒತ್ತಾಯಿಸಿದರು.ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ರೈತರು ವ್ಯವಸಾಯ ಮಾಡುತ್ತಾ ಬಂದಿದ್ದಾರೆ. ಆದರೆ, ಈಗ ಅವರನ್ನು ಒಕ್ಕಲೆಬ್ಬಿಸುವ ಕೆಲಸ ನಡೆದಿದೆ. ಯಾವುದೇ ಕಾರಣಕ್ಕೂ ಅವರನ್ನು ಒಕ್ಕಲೆಬ್ಬಿಸಬಾರದು. ಈಗಾಗಲೇ, ಅಲ್ಲಿ ಬ್ರೋಕರ್‌ಗಳ ಹಾವಳಿ ಜಾಸ್ತಿಯಾಗಿದೆ. ಅದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಪಾಲಿಕೆ ಸದಸ್ಯರ ಅವಧಿ ಮುಗಿದು 4 ತಿಂಗಳುಗಳೇ ಕಳೆದಿವೆ. ನಗರದಲ್ಲಿ ಅನೇಕ ಸಮಸ್ಯೆಗಳು ಹಾಗೆಯೇ ಉಳಿದಿವೆ. ನಗರದ ಅಭಿವೃದ್ಧಿ ದೃಷ್ಠಿಯಿಂದ ಕೂಡಲೇ ಮಹಾನಗರ ಪಾಲಿಕೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ನಗರಾಧ್ಯಕ್ಷ ದೀಪಕ್ ಸಿಂಗ್ ಪ್ರಮುಖರಾದ ಅಬ್ದುಲ್ ವಾಜೀದ್, ಬೊಮ್ಮನಕಟ್ಟೆ ಮಂಜುನಾಥ್, ವೆಂಕಟೇಶ್, ಪುಷ್ಪ, ವಿನಯ್ ಮತ್ತಿತರರು ಇದ್ದರು.
- - - -19ಎಸ್‌ಎಂಜಿಕೆಪಿ04: ಕೆ.ಬಿ.ಪ್ರಸನ್ನಕುಮಾರ್