ಲೋಕಸಭೆ ಚುನಾವಣೆಗೆ ಮುನ್ನ ಪಂಚಮಸಾಲಿ ಮೀಸಲು ಘೋಷಿಸಿ

| Published : Nov 25 2023, 01:15 AM IST

ಲೋಕಸಭೆ ಚುನಾವಣೆಗೆ ಮುನ್ನ ಪಂಚಮಸಾಲಿ ಮೀಸಲು ಘೋಷಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮಠ ಬಿಟ್ಟು ನಾವು ರಸ್ತೆಯಲ್ಲಿ ಕುಳಿತಿದ್ದೇವೆ ನಮ್ಮ ಸಮಾಜದ ಮಕ್ಕಳಿಗಾಗಿ ನಾವು ಸುವರ್ಣ ಸೌಧದಲ್ಲೂ ಕುಳಿತು ಲಿಂಗಪೂಜೆ ಸಲ್ಲಿಸುವೆವು. ಕಾರಣ ಮುಖ್ಯಮಂತ್ರಿಗಳು ನಮಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಇದರ ಪ್ರಭಾವ ಬೀರುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಲಿಂಗಾಯತ ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕಾರ 2 ಎ ಮೀಸಲಾತಿ ಘೋಷಿಸಬೇಕು ಮತ್ತು ಲಿಂಗಾಯತ ಉಪಸಮಾಜಗಳನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ರಾಜ್ಯಾದ್ಯಂತ 6ನೇ ಹಂತದ ಚಳವಳಿಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.

ಇಲ್ಲಿಗೆ ಸಮೀಪದ ರನ್ನಬೆಳಗಲಿಯ ಹಣಮಂತ ಶಿರೋಳ ಇವರ ನಿವಾಸದದಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಹಾಲುಮತ ಸಮಾಜಕ್ಕೆ ಎಸ್ಟಿ ಮೀಸಲಾತಿ ಶಿಫಾರಸು ಮಾಡಿದೆ ಅದನ್ನು ನಾವು ಸ್ವಾಗತಿಸುತ್ತೇವೆ. ಸರ್ಕಾರ ಡಿ.4ರ ಅಧಿವೇಶನಕ್ಕೂ ಮೊದಲೇ ಸಮಾಲೋಚಿಸಿ ಕಾನೂನು ಅಡೆತಡೆಗಳನ್ನು ನಿವಾರಿಸಿ ಪಂಚಮಸಾಲಿ ಮೀಸಲಾತಿಗೆ ಮುನ್ನುಡಿ ಬರೆದು, ಲೋಕಸಭೆ ಚುನಾವಣೆ ಒಳಗೆ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ 7 ಜಿಲ್ಲೆಗಳಲ್ಲಿ ಹೆದ್ದಾರಿ ತಡೆದು, ಅಲ್ಲಿಯೇ ಕುಳಿತು ಇಷ್ಟಲಿಂಗ ಪೂಜೆ ಮಾಡಲಾಗುವದು. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಬಂದು ಮನವಿ ಸ್ವೀಕರಿಸಬೇಕು. ನಾವು ಸುವರ್ಣಸೌಧದ ಅಂಗಳಕ್ಕೂ ತೆರಳಿ ಅಲ್ಲಿಯೂ ಲಿಂಗಪೂಜೆ ಸಲ್ಲಿಸಲಿದ್ದೇವೆ. ಮಠ ಬಿಟ್ಟು ನಾವು ರಸ್ತೆಯಲ್ಲಿ ಕುಳಿತಿದ್ದೇವೆ ನಮ್ಮ ಸಮಾಜದ ಮಕ್ಕಳಿಗಾಗಿ ನಾವು ಸುವರ್ಣ ಸೌಧದಲ್ಲೂ ಕುಳಿತು ಲಿಂಗಪೂಜೆ ಸಲ್ಲಿಸುವೆವು. ಕಾರಣ ಮುಖ್ಯಮಂತ್ರಿಗಳು ನಮಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಇದರ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ನಮ್ಮ ಹೋರಾಟದಲ್ಲಿ ಬಸನಗೌಡ ಪಾಟೀಲ (ಯತ್ನಾಳ) ಇವರ ಬೆಂಬಲ ಅಮೋಘವಾಗಿದೆ ಎಂದರು.

ಸಮಾಜದ ತಾಲೂಕು ಕಾರ್ಯದರ್ಶಿ ಲಕ್ಕಪ್ಪ ಪಾಟೀಲ, ಮುಖಂಡರಾದ ಸಿದ್ದುಗೌಡ ಪಾಟೀಲ, ಮಹಾದೇವ ಮಾರಾಪೂರ, ಅಡಿವೆಪ್ಪ ಶಿರೋಳ, ಚನ್ನಪ್ಪ ಪಟ್ಟಣಶೆಟ್ಟಿ, ಹಣಮಂತ ಶಿರೋಳ, ಮಲ್ಲಪ್ಪ ಕೌಜಲಗಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಶಿವಲಿಂಗ ಕೌಜಲಗಿ, ವಿನೋದ ಉಳ್ಳಾಗಡ್ಡಿ, ಅಲ್ಲಪ್ಪ ಕಲ್ಲೋಳ್ಳಿ, ಪರಪ್ಪ ಹುದ್ದಾರ, ಶ್ರೀಶೈಲಪ್ಪ ವಜ್ರಮಟ್ಟಿ, ಸದಾಶಿವ ಪಟ್ಟಣಶೆಟ್ಟಿ, ಮಹಾಲಿಂಗ ಕಂಠಿ, ಮಹಾಲಿಂಗ ಕೂಡಲಗಿ, ಮಲ್ಲಪ್ಪ ಉರಬಿನವರ, ಶ್ರೀಶೈಲ ಬಿರಾದಾರ, ಇತರರು ಇದ್ದರು.