ಸಾರಾಂಶ
ಯುವತಿ ಪಾರು: ಮಾನವೀಯತೆ ಮೆರೆದ ಪೊಲೀಸರು
ಬೀರೂರು: ತರೀಕೆರೆಯಿಂದ ಕೆಲಸ ಮುಗಿಸಿ ವಾಪಾಸು ಬರುವಾಗ ಸ್ಕೂಟಿಗೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತ ಪಟ್ಟು, ಹಿಂದೆ ಕುಳಿತಿದ್ದ ಯುವತಿ ಅಪಾಯದಿಂದ ಪಾರಾದ ಘಟನೆ ಬೀರೂರು ಪಟ್ಟಣದಲ್ಲಿ ಗುರುವಾರ ರಾತ್ರಿ ನಡೆದಿದೆ. ಹಾಲಪ್ಪ ಬಡಾವಣೆಯ 4 ನೇ ಕ್ರಾಸ್ ನಿವಾಸಿಯಾಗಿದ್ದ ಕಾರ್ಪೆಂಟರ್ ದಿ.ಮೌನೇಶ್ವರ್ ರವರ ಪುತ್ರ ಬಿ.ಎಂ.ವಿನಾಯಕ (28) ಮೃತ ದುರ್ದೈವಿ.ಘಟನೆ ವಿವರ: ಬಿ.ಎಂ.ವಿನಾಯಕ ತರೀಕೆರೆಯ ಶುಭಂ ಎಲೆಕ್ಟ್ರಿಕಲ್ಸ್ ನಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು. ಎಂದಿನಂತೆ ಪ್ರತಿದಿನ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದ. ನ.23ರ ಗುರುವಾರ ಶೋ ರೂಂ ನಲ್ಲಿ ಕೆಲಸ ಮುಗಿಸಿ , ರಾತ್ರಿ 10 ಗಂಟೆಗೆ ಊರಿಗೆ ತೆರಳಲು ಬಸ್ಸ್ ಇಲ್ಲದ ಪರಿಣಾಮ ಸ್ನೇಹಿತ ತಿಪ್ಪೇಸ್ವಾಮಿ ಯವರ ಸ್ಕೂಟಿ ಪಡೆದು ಬೀರೂರಿಗೆ ಹೊರಟಿದ್ದನು.
ಈ ಸಂದರ್ಭದಲ್ಲಿ ಕೋಡಿ ಕ್ಯಾಂಪಿನ ಬಳಿ ಸುಪ್ರಿಯಾ ಎಂಬ ಯುವತಿ ಬೀರೂರು ರೈಲ್ವೆ ಜಂಕ್ಷನ್ ಗೆ ತೆರಳಲು ಡ್ರಾಪ್ ಕೇಳಿದ್ದರಿಂದ ವಿನಾಯಕ ಒಪ್ಪಿ ಆಕೆಯನ್ನು ಕೂರಿಸಿಕೊಂಡು ಬರುವಾಗ ದೊಡ್ಡಘಟ್ಟ ಗೇಟ್ ಸಮೀಪ ಬೀರೂರಿನಿಂದ ಶಿವಮೊಗ್ಗಕ್ಕೆ ಪ್ರಿಡ್ಜ್ ಸರಕನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ಎದುರಿನಿಂದ ಬಂದು ಡಿಕ್ಕಿ ಹೊಡೆದಿದೆ.ತೀವ್ರವಾಗಿ ಗಾಯಗೊಂಡಿದ್ದ ವಿನಾಯಕ ಮತ್ತು ಜೊತೆಗಿದ್ದ ಹುಡುಗಿಯನ್ನು ಪೊಲೀಸರು ಬೀರೂರಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಇಬ್ಬರಿಗೂ ವೈದ್ಯರು ಚಿಕಿತ್ಸೆ ನೀಡಿದ್ದರು. ವಿನಾಯಕನಿಗೆ ತಲೆ ಹಾಗೂ ಮತ್ತಿತರ ಕಡೆ ಬಲವಾದ ಏಟು ಬಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಮೃತನ ಸಹೋದರ ಬಿ.ಎಂ. ಮಲ್ಲಿಕಾರ್ಜುನ್ ಪಿಕಪ್ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ ನನ್ನ ತಮ್ಮ ಮೃತಪಟ್ಟಿದ್ದಾನೆಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ಶುಕ್ರವಾರ ಹಿಂದು ವಿಧಿವಿಧಾನದಂತೆ ಪಟ್ಟಣದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಮಾನವೀಯತೆ ಮೆರೆದ ಪೊಲೀಸರು: ದೊಡ್ಡಘಟ್ಟ ಗೇಟ್ ಸಮೀಪ ಅಪಘಾತವಾಗಿರುವ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದಾಗ ಕರ್ತವ್ಯದಲ್ಲಿದ್ದ ಅಪರಾಧ ವಿಭಾಗದ ಪಿ.ಎಸೈ.ಮಂಜುಳಾಬಾಯಿ ಸ್ಥಳಕ್ಕೆ ತೆರಳಿ ಅಪಘಾತದಲ್ಲಿ ಗಾಯಗೊಂಡಿದ್ದ ವಿನಾಯಕ ಉಸಿರಾಡುತ್ತಿದ್ದುದನ್ನು ಕಂಡು ತಕ್ಷಣ ತಾವು ಬಂದಿದ್ದ 112 ವಾಹನದಲ್ಲಿ ಇಬ್ಬರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದರು. ಆದರೆ ವಿನಾಯಕ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರೆ, ಯುವತಿ ಸುಪ್ರಿಯಾಗೆ ಒಳ ಹೊಡೆತ ಬಿದ್ದಿದ್ದರು ಸಹ ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಳ್ಳುತ್ತಿದ್ದಾಳೆ. ವಿಷಯ ಪಟ್ಟಣಾದಾದ್ಯಂತ ಹಬ್ಬುತ್ತಿದಂತೆ ಸಾರ್ವಜನಿಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.24 ಬೀರೂರು 1 ಬಿ.ಎಂ.ವಿನಾಯಕ್ (28)