ಸಾರಾಂಶ
ಮಾದಪ್ಪ ಬೆಟ್ಟದಲ್ಲಿನ ಸಂಪುಟ ಸಭೆಯಲ್ಲಿ ತೀರ್ಮಾನಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಹನೂರುತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗಲಿರುವ ಸಚಿವ ಸಂಪುಟ ಸಭೆಯಲ್ಲಿ ಹನೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲು ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಬೇಕೆಂದು ಹನೂರು ತಾಲೂಕು ಸಾರ್ವಜನಿಕ ಹಿತ ರಕ್ಷಣಾ ಸಮಿತಿ ವತಿಯಿಂದ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಹನೂರು ತಾಲೂಕು ಸಾರ್ವಜನಿಕ ಹಿತ ರಕ್ಷಣಾ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಯಲ್ಲಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದೆ,ಬೇಡಿಕೆಗಳು:
ಶ್ರೀ ಕ್ಷೇತ್ರ ಮಲೆ ಮಹದೇಶ್ವರರ ಸನ್ನಿದಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ ಭಕ್ತರ ಸಂಖ್ಯೆಗೆ ಅನುಗುಣವಾಗಿ ಯಾವುದೇ ಮೂಲಭೂತ ಸೌಲಭ್ಯಗಳು ದೊರೆಯುತ್ತಿಲ್ಲ. ಹಾಗಾಗಿ ತಿರುಪತಿ ಮಾದರಿಯಲ್ಲಿ ಶ್ರೀ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು, ಹನೂರಿನಿಂದ ಮಹದೇಶ್ವರ ಬೆಟ್ಟದವರೆಗಿನ ಕಿರಿದಾದ ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ಘೋಷಿಸಿ ಅಭಿವೃದ್ಧಿ ಮಾಡಬೇಕು, ಸ್ವಾತಂತ್ರ್ಯ ಬಂದು 77 ವರ್ಷಗಳಾಗಿದ್ದರೂ ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿಯನ್ನು ಹೊತ್ತಿಕೊಂಡಿರುವ ಕ್ಷೇತ್ರ ಹನೂರು ವಿಧಾನಸಭಾ ಕ್ಷೇತ್ರ, 2018 ರಲ್ಲಿ ಹನೂರನ್ನು ನೂತನ ತಾಲೂಕು ಕೇಂದ್ರವಾಗಿ ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ತಾವೇ ಖುದ್ದು ಘೋಷಣೆ ಮಾಡಿದ್ದೀರಿ. ಆದರೆ ತಾಲೂಕಿನ ಬೇಕಾದಂತಹ ಕನಿಷ್ಕ ಮೂಲಭೂತ ಸೌಕರ್ಯಗಳನ್ನು ಇದುವರೆಗೂ ಒದಗಿಸಿಲ್ಲ ಎಂದು ಹೇಳಿದ್ದಾರೆ.ತಾಲೂಕಿಗೆ ಸಂಬಂಧಿಸಿದ ಬಹುತೇಕ ಕಚೇರಿಗಳು ವರ್ಗಾವಣೆಯಾಗಿಲ್ಲ. ಆದ್ದರಿಂದ ಸಾರ್ವಜನಿಕರ ದೈನಂದಿನ ಸರ್ಕಾರಿ ಕೆಲಸ ಕಾರ್ಯಗಳಿಗೆ ತೊಂದರೆಯಾಗಿರುತ್ತದೆ. ಆಗಾಗಿ ತಾಲೂಕಿಗೆ ಸಂಬಂಧಿಸಿದ ಕಚೇರಿಗಳನ್ನು ಶೀಘ್ರವಾಗಿ ಹನೂರು ತಾಲೂಕು ಕೇಂದ್ರಕ್ಕೆ ವರ್ಗಾವಣೆಗೊಳಿಸಬೇಕು ಹಾಗೂ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಛೇರಿಗಳಿಗೆ ಸ್ವಂತ ಕಟ್ಟಡವನ್ನು ನಿರ್ಮಿಸಿಕೊಡಬೇಕು, ತಾಲೂಕು ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು, ಹನೂರು ಪಟ್ಟಣ ಪಂಚಾಯಿತಿಯ ಸಿಬ್ಬಂದಿ ಕೊರತೆಯನ್ನು ನಿವಾರಿಸಿ. ಕಾಯಂ ಎಂಜಿನಿಯರ್ ಅವರನ್ನು ಪಟ್ಟಣ ಪಂಚಾಯಿತಿಗೆ ನಿಯೋಜಿಸಬೇಕು, ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಚುರುಕುಗೊಳಿಸಬೇಕು ಎಂದು ಮನವಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿದ್ದು, ವಾಹನ ಸವಾರರ ಪರಿಸ್ಥಿತಿ ತುಂಬಾ ಹದಗೆಟ್ಟಿವೆ. ಹಾಗಾಗಿ ತಾಲೂಕಿನ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು, ಇನ್ನೂ ಮುಂತಾದ ನೂರಾರು ಸಾರ್ವಜನಿಕ ಸಮಸ್ಯೆಗಳು ಇದ್ದು ಈ ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕಾದರೆ ಹನೂರು ತಾಲೂಕಿಗೆ ವಿಶೇಷವಾದ ಅನುದಾನವನ್ನು ನೀಡುವ ಮೂಲಕ ವಿಶೇಷವಾದ ಪ್ಯಾಕೇಜ್ ಘೋಷಿಸಿ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತಲಿನ ಕುಗ್ರಾಮಗಳನ್ನು ಸಹ ಅಭಿವೃದ್ಧಿಪಡಿಸುವಲ್ಲಿ ಮುಂದಾಗಬೇಕು. ಹನೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡುವಂತೆ ಕೋರಿದ್ದಾರೆ.ಸಮಿತಿಯಿಂದ ಅಭಿನಂದನೆ:
ಪ್ರಸ್ತಾವಿತ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪವಾಡ ಪುರುಷ ಈ ಭಾಗದ ಆರಾಧ್ಯ ದೈವ ಮಹದೇಶ್ವರರ -ಸನ್ನಿದಿಯಲ್ಲಿ ಸಚಿವ ಸಂಪುಟದ ಸಭೆಯನ್ನು ಏರ್ಪಡಿಸಿರುವುದನ್ನು ಹನೂರು ತಾಲ್ಲೂಕು ಸಾರ್ವಜನಿಕ ಹಿತರಕ್ಷಣಾ ಸಮಿತಿಯು ಸ್ವಾಗತಿಸಿ ಅಭಿನಂದಿಸುತ್ತದೆ. ಹಾಗಾಗಿ ಮೊದಲಿಗೆ ಮುಖ್ಯಮಂತ್ರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಸಮಿತಿಯ ಅಧ್ಯಕ್ಷ ಟಿ.ಸೋಮಶೇಖರ್ ತಿಳಿಸಿದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನೋದ್, ಸಹ ಕಾರ್ಯದರ್ಶಿ ಹರೀಶ್ ಕುಮಾರ್, ಖಜಾಂಚಿ ಸುದೇಶ್, ಸಮಿತಿಯ ನಿರ್ದೇಶಕ ಹಾಗೂ ಪ.ಪಂ. ನಾಮನಿರ್ದೇಶಿತ ಸದಸ್ಯ ಬಸವರಾಜ್, ಗಿರೀಶ್, ಬಸವರಾಜು, ಶ್ರೀಕಂಠ ಮೂರ್ತಿ, ಇತರರು ಇದ್ದರು.