ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಪ್ರತಿ ಟನ್ ಕಬ್ಬಿಗೆ ₹3500 ಘೋಷಣೆ ಮಾಡಿ ಕಾರ್ಖಾನೆಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸೇನೆ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಇಲ್ಲಿನ ಬಸವ ಸರ್ಕಲ್‌ನಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು.ರಸ್ತೆ ತಡೆಯಿಂದಾಗಿ ಪಟ್ಟಣದಲ್ಲಿ ಟ್ರಾಪಿಕ್ ಕಿರಿಕಿರಿ ಕಂಡುಬಂತು. ಪೋಲಿಸರು ವಾಹನಗಳ ಮಾರ್ಗ ಬದಲಾವಣೆ ಮಾಡಿದ್ದರು ಸಹ ಟ್ರಾಪಿಕ್ ಕಿರಿಕಿರಿ ಮಾತ್ರ ತಪ್ಪಲಿಲ್ಲ.ರೈತ ಮುಖಂಡರು ಮಾತನಾಡಿ, ಕಬ್ಬು ಬೆಳೆದ ರೈತರು ಬೀದಿಯಲ್ಲಿದ್ದಾರೆ. ಕಬ್ಬು ಖರೀದಿಸಿದ ಮಾಲೀಕರು ಹವಾನಿಯಂತ್ರಿತ ಮನೆಗಳಿದ್ದಾರೆ. ಅನ್ನದಾತ ಅನ್ನ ಬೆಳೆಯುವುದನ್ನು ನಿಲ್ಲಿಸಿದರೆ ಉಳಿದವರು ಹೊಟ್ಟೆಗೆ ತಿನ್ನುವುದು ಕಷ್ಟವಾಗುತ್ತದೆ. ನಮ್ಮ ಜಿಲ್ಲೆಯ ಬಹಳಷ್ಟು ಜನಪ್ರತಿನಿಧಿಗಳ ಕಪಿಮುಷ್ಟಿಯಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ಮಾಲೀಕರು ಅದಕ್ಕಾಗಿ ಕಬ್ಬು ಬೆಳೆಗೆ ಕೂಡಲೇ ದರ ಘೋಷಣೆ ಮಾಡಿ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ದರ ಘೋಷಣೆ ಮಾಡದೆ ಹೋದರೆ ರೈತರ ಹೋರಾಟದ ಕಿಚ್ಚು ಮತ್ತಷ್ಟು ಹೆಚ್ಚಾಗಲಿದೆ. ಇದೀಗ ರಾಜ್ಯ ಹೆದ್ದಾರಿ ತಡೆಯಲಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೆಳಗ್ಗೆ ಬಸವ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಪಟ್ಟಣದಲ್ಲಿ ಎಲ್ಲಿ ನೋಡಿದಲ್ಲಿ ಸಾರಿಗೆ ದಟ್ಟನೆಯಿಂದ ಜನರು ಕಂಗಲಾದರು. ಇನ್ನು ಅಹೋರಾತ್ರಿ ಧರಣಿ ಸತ್ಯಾಗ್ರಹ ಮತ್ತೆ ಮುಂದುವರೆದಿದೆ. ರಸ್ತೆಯಲ್ಲಿ ಅಡುಗೆ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲಿ ಕಬ್ಬುಗಳನ್ನು ಇಟ್ಟು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಸರ್ಕಾರ ರೈತರ ಬೇಡಿಕೆ ಈಡೇರಿಸದೆ ಹೋದರೆ ದೆಹಲಿ ಮಾದರಿಯಲ್ಲಿ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಪ್ರತಿಭಟನೆ ಹಿಂಪಡೆಯುವಂತೆ ಅಧಿಕಾರಿಗಳು ಮನವೊಲಿಸುವ ಕಾರ್ಯ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ. ರೈತರ ಹೋರಾಟ ಮಾತ್ರ ಮುಂದುವರೆದಿದೆ.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸತ್ತೇಪ್ಪಾ ಮಲ್ಲಾಪುರೆ, ಕುಮಾರ ಮರಡಿ, ವಿವೇಕ ಸನದಿ, ರಫೀಕ ಪಠಾಣ, ಗುರುನಾಥ ಹುಕ್ಕೇರಿ, ಮನೋಜ ಮನಗೂಳಿ, ಆನಂದ ಪಾಶ್ಚಾಪುರೆ, ಸಹದೇವ ಚಿಮ್ಮಟ, ಮುರಗೇಪ್ಪಾ ಅಡಿಸೇರಿ, ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ, ಶಂಕರ ಪಡೇದ, ರಾಜೇಂದ್ರ ಪಾಶ್ಚಾಪುರೆ, ಬಸವಣ್ಣಿ ಗಾವಣೆ, ಕೆಂಪ್ಪಣ್ಣ ಕಾಮಗೌಡ, ಅಶೋಕ ದಂಡೆನ್ನವರ, ಇಮಾಮ ಮುಲ್ತಾನಿ, ಪ್ರಶಾಂತ ಹುಕ್ಕೇರಿ, ಅಜೀತ ಚೌಗಲಾ, ಭೀಮಪ್ಪಾ ಕಿವಡ, ಸಿದ್ರಾಮ ಕರಗಾಂವೆ ರೈತರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))