ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗುತ್ತೀವಿ ಎಂದಿದ್ದೀರಿ. ನಿಮಗೆ ಚಾಲೆಂಜ್ ಮಾಡುತ್ತೇನೆ. ಯಾವಾಗ ಮನೆಗೆ ನುಗ್ಗುತ್ತೀರಿ ಎಂದು ಹೇಳಿ ನಾವು ರೆಡಿ ಆಗುತ್ತೇವೆ

ಗಜೇಂದ್ರಗಡ: ಶಾಸಕರೇ ನಿಮಗೆ ತಾಕತ್ತಿದ್ದರೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗುವ ದಿನಾಂಕ ಘೋಷಣೆ ಮಾಡಿ ನಾವು ರೆಡಿಯಾಗಿರುತ್ತೇವೆ. ಜನ ನಿಮ್ಮ ಪರವಾಗಿಲ್ಲ, ಜನ ಮೋದಿ ಪರವಾಗಿದ್ದಾರೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಅಹಿಂದ ಸಮಾವೇಶದಲ್ಲಿ ಶಾಸಕ ಜಿ.ಎಸ್.ಪಾಟೀಲರು ನೀಡಿದ ಹೇಳಿಕೆಯನ್ನು ಗುರುವಾರ ಇಲ್ಲಿ ನಡೆದ ರೋಣ ಮಂಡಲ ಪ್ರತಿಭಟನೆಯಲ್ಲಿ ಬಂಡಿ ಖಂಡಿಸಿದರು.

ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ನಡೆದ ಭಯೋತ್ಪಾದಕ ದಾಳಿಗಳಿಗೆ ನೂರಾರು ಜನ ಸಾವನಪ್ಪಿದ್ದರು. ಭಯೋತ್ಪಾದಕ ಕಸಬ್‌ ಹಿಡಿದು ವರ್ಷಾನುಗಟ್ಟಲೆ ಬಿರಿಯಾನಿ ಕೊಟ್ಟರು. ಆದರೆ ಮೋದಿ ಸರ್ಕಾರದಲ್ಲಿ ಎಲ್ಲಿಯಾದರು ಒಂದು ಘಟನೆ ಆದರೆ ಸೈನಿಕರು ಹಾಗೂ ಭದ್ರತಾ ಪಡೆಗಳು ಅಲ್ಲೇ ಲೆಕ್ಕಾ ಚುಕ್ತಾ ಮಾಡುತ್ತಿದ್ದಾರೆ. ಇಂತಹ ಮೋದಿ ಸರ್ಕಾರಕ್ಕೆ ಶಾಸಕರು ಹೇಳುತ್ತಾರೆ ಶ್ರೀಲಂಕಾ ಹಾಗೂ ಬಾಂಗ್ಲಾ ದೇಶದ ಪ್ರಧಾನಮಂತ್ರಿಗೆ ಹೆಂಗ ನುಗ್ಗಿದರು, ಹಂಗ ನುಗ್ಗುತ್ತಾರ್ ಅಂತಾ. ಶಾಸಕರೇ ನಿಮ್ಮ ಪರವಾಗಿ ಜನರಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಜನರ ನಿಮ್ಮ ಪರವಾಗಿಲ್ಲ, ಮೋದಿ ಪರವಾಗಿದ್ದಾರೆ ಎಂದರು.

ಶಾಸಕ ಜಿ.ಎಸ್. ಪಾಟೀಲ ವಿವೇಚನೆಯಿಂದ ಹೇಳಿಕೆ ಕೊಡಬೇಕು. ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗುತ್ತೀವಿ ಎಂದಿದ್ದೀರಿ. ನಿಮಗೆ ಚಾಲೆಂಜ್ ಮಾಡುತ್ತೇನೆ. ಯಾವಾಗ ಮನೆಗೆ ನುಗ್ಗುತ್ತೀರಿ ಎಂದು ಹೇಳಿ ನಾವು ರೆಡಿ ಆಗುತ್ತೇವೆ. ನಿಮ್ಮ ಗುಂಡಾಗಿರಿಗೆ ಹೆದರುವ ಪ್ರಶ್ನೆಯೇ ಇಲ್ಲ. ನಾವು ಸೋತಿದ್ದೇವೆ ಹೊರತು ಸತ್ತಿಲ್ಲ. ಪ್ರತಿದಿನ ಹೋರಾಟ, ಪ್ರತಿಭಟನೆ ಮಾಡುವ ಉದ್ಧೇಶ ಹಾಗೂ ರಾಜಕಾರಣ ಎಂದು ನಾನು ಅಂದುಕೊಂಡಿಲ್ಲ. ಅಂತಹ ಪ್ರಸಂಗಗಳು ಬಂದಾಗ ಮಾತ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಿಳಿದುಕೊಂಡಿದ್ದೇನೆ ಎಂದರು.

ಮುಖಂಡ ಅಶೋಕ ನವಲಗುಂದ ಮಾತನಾಡಿದರು. ಪುರಸಭೆ ಸದಸ್ಯರಾದ ಸುಭಾಸ ಮ್ಯಾಗೇರಿ, ಕನಕಪ್ಪ ಅರಳಿಗಿಡದ, ಮುದಿಯಪ್ಪ ಮುಧೋಳ, ಯು.ಆರ್. ಚನ್ನಮ್ಮನವರ, ಲೀಲಾ ಸವಣೂರ, ಲಕ್ಷ್ಮೀ ಮುಧೋಳ ಹಾಗೂ ಮುತ್ತಣ್ಣ ಕಡಗದ, ಸಿದ್ದಣ್ಣ ಬಳಿಗೇರ, ಉಮೇಶ ಚನ್ನುಪಾಟೀಲ, ಸಿದ್ದಪ್ಪ ಚೋಳಿನ, ದುರಗಪ್ಪ ಮುಧೋಳ, ಶಂಕರ ಇಂಜನಿ ಸೇರಿ ಇತರರು ಇದ್ದರು.