ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ 10 ಕೋಟಿಗೂ ಅಧಿಕ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ಘೋಷಣೆ

| Published : Apr 14 2024, 01:48 AM IST

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ 10 ಕೋಟಿಗೂ ಅಧಿಕ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ಘೋಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಆಳ್ವಾಸ್‌ ಪ್ರತಿಷ್ಠಾನವು ಈ ಬಾರಿ ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ವರ್ಷಕ್ಕೆ 10 ಕೋಟಿ ರು. ಅಧಿಕ ಮೌಲ್ಯದ ವಿದ್ಯಾರ್ಥಿ ವೇತನ ಘೋಷಿಸಿದೆ. ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್‌ ಶೆಟ್ಟಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಈ ಬಾರಿ ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ವರ್ಷಕ್ಕೆ 10 ಕೋಟಿ ರು. ಅಧಿಕ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನವನ್ನು ಘೋಷಿಸಿದೆ ಎಂದು ಕಾಲೇಜಿನ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10ನೇ ತರಗತಿಯಲ್ಲಿ ಸಿಬಿಎಸ್‍ಸಿ (ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ), ಐಸಿಎಸ್‍ಇ(ಭಾರತೀಯ ಪ್ರೌಢ ಶಿಕ್ಷಣದ ಪ್ರಮಾಣ ಪತ್ರ) ಹಾಗೂ ರಾಜ್ಯ ಪಠ್ಯಕ್ರಮ(ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ) ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ಶೈಕ್ಷಣಿಕ ವಿದ್ಯಾರ್ಥಿ ವೇತನ ಪರೀಕ್ಷೆ ಬರೆಯಬಹುದು. ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದ ವಿದ್ಯಾರ್ಥಿಗಳು ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯಲು ಅರ್ಹರಾಗುತ್ತಾರೆ ಎಂದು ಮಾಹಿತಿ ನೀಡಿದರು.

ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಸಾಮರ್ಥ್ಯ ಕುರಿತು 120 ನಿಮಿಷಗಳ ಪರೀಕ್ಷೆಯು ಏ.14 ಹಾಗೂ 20 ರಂದು ಸಿಬಿಎಸ್‍ಸಿ, ಐಸಿಎಸ್‍ಇ ಹಾಗೂ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಮೂಡುಬಿದಿರೆಯ ವಿದ್ಯಾಗಿರಿ ಶ್ರೀಮತಿ ಸುಂದರಿ ಆಳ್ವ ಆವರಣದಲ್ಲಿನ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ಬಾರಿ ಪರೀಕ್ಷೆ ನಡೆಯಲಿದ್ದು, ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷಾ ಪತ್ರಿಕೆ ಇರಲಿದೆ ಎಂದು ಪ್ರಸಾದ್ ಶೆಟ್ಟಿ ತಿಳಿಸಿದರು.

ಶೈಕ್ಷಣಿಕ ವಿದ್ಯಾರ್ಥಿ ವೇತನ ಪ್ರವೇಶ ಪರೀಕ್ಷೆಯ ಅಂಕದ ಆಧಾರದ ಮೇಲೆ ಆಯ್ಕೆಯ ಜೊತೆಯಲ್ಲಿ ಪ್ರತ್ಯೇಕವಾಗಿ ಪ್ರತಿ ವರ್ಷದಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಅಂಕವನ್ನು ಪರಿಗಣಿಸಿ, ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆಯ ಮೇಲೂ ಆಯ್ಕೆಗಳು ನಡೆಯಲಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು http://scholarship.alvas.org/puc/login.php ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಸಾದ ಶೆಟ್ಟಿ ತಿಳಿಸಿದರು.

ಪರೀಕ್ಷೆಯ ದಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಪೋಕಷರ ಜೊತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸಮಾಲೋಚನೆ ನಡೆಸಲಿದ್ದು, ಹೆಚ್ಚಿನ ಮಾಹಿತಿಗೆ 8884477588, 6366377827, 6366377823 ಸಂಪರ್ಕಿಸಬಹುದಾಗಿದೆ ಎಂದರು.

ಕಾಲೇಜಿನ ಕನ್ನಡ ಉಪನ್ಯಾಸಕ ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.