ಸಾರಾಂಶ
ಕನ್ನಡಪ್ರಭ ವಾರ್ತೆ
ಬೀದರ್: ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದ ಹಿರಿಯ ಗುರುಗಳಾದ ಡಾ. ಬಸವಲಿಂಗ ಪಟ್ಟದ್ದೇವರು ಸೇರಿದಂತೆ ಮೂರು ಜನರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ನಾಡೋಜ ಪ್ರಶಸ್ತಿ ಘೋಷಿಸಿದೆ.
ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಈ ವಿಷಯ ಪ್ರಕಟಿಸಿ, ಜ.10ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ (ಘಟಿಕೋತ್ಸವ) ನಡೆಯಲಿದ್ದು, ಅಂದು ಸಂಜೆ 5 ಗಂಟೆಗೆ ರಾಜ್ಯಪಾಲರು ಹಾಗೂ ಕುಲಾಧಿಪತಿ ಥಾವರ್‌ಚಂದ್ ಗೆಹಲೋತ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಡಿ.ಲಿಟ್ ಹಾಗೂ ಪಿಎಚ್‌ಡಿ ಪ್ರದಾನ ಮಾಡಲಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ. ಕೋರಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಅನಾಥ ಶಿಶುಗಳ ಪಾಲಿನ ಆರಾಧ್ಯ ದೇವ: ರಾಜ್ಯದಲ್ಲಿ ಅನಾಥ ಶಿಶುಗಳ ಪಾಲನೆ ಪೋಷಣೆ ಮಾಡುವ ಅಪರೂಪದ ಸಂತ, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರೂ ಆಗಿರುವ ಡಾ.ಬಸವಲಿಂಗ ಪಟ್ಟದ್ದೇವರು ಸಮಾಜದಲ್ಲಿ ಹೆತ್ತವರಿಗೂ, ಸಮಾಜಕ್ಕೂ ಬೇಡವಾದ ಹಸುಳೆ, ಬಡ, ನಿರ್ಗತಿಕ, ಅನಾಥ ಶಿಶುಗಳ ಪಾಲಿನ ಆರಾಧ್ಯ ದೇವರಾಗಿದ್ದಾರೆ.
ನಾಡಿನ ಹೆಸರಾಂತ ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿರುವುದು ಭಕ್ತರಿಗೆ ಇನ್ನಿಲ್ಲದ ಸಂತಸ ನೀಡಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ತಿಳಿಸಿದ್ದಾರೆ.
ಪಟ್ಟದ್ದೇವರಿಗೆ ನಾಡೋಜ ಪ್ರಶಸ್ತಿ, ಬಾಬು ವಾಲಿ ಹರ್ಷ: ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಗೌರವಕ್ಕೆ ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಎಂದೆ ಖ್ಯಾತಿ ಪಡೆದ ಅನುಭವ ಮಂಟಪದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದೇವರಿಗೆ ಅಭಿನಂದನೆಗಳು.
ಬಸವ ತತ್ವದ ಪ್ರಚಾರ ಪ್ರಸಾರದ ಜೊತೆಗೆ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಪೂಜ್ಯರಿಗೆ ನಾಡೋಜ ಗೌರವ ಭಾಜನರಾಗಿದಕ್ಕೆ ಭಾರತೀಯ ಬಸವ ಬಳಗದ ಕರ್ನಾಟಕ ರಾಜ್ಯಾಧ್ಯಕ್ಷರಾದ ಬಾಬು ವಾಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ನಾಡೋಜ ಪ್ರಶಸ್ತಿಗೆ ಶಾಸಕ ಪ್ರಭು ಬಿ.ಚವ್ಹಾಣ್ ಹರ್ಷ: ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರು, ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದೇವರು ಹಂಪಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಔರಾದ ಶಾಸಕ ಪ್ರಭು.ಬಿ ಚವ್ಹಾಣ ಹರ್ಷ ವ್ಯಕ್ತಪಡಿಸಿದ್ದಾರೆ.
ಪೂಜ್ಯರು ಗಡಿನಾಡಿನಲ್ಲಿದ್ದುಕೊಂಡು ಧಾರ್ಮಿಕ ಸೇವೆಯ ಜೊತೆಗೆ ರಾಜ್ಯ ಮತ್ತು ಹೊರರಾಜ್ಯಗಳಲ್ಲಿಯೂ ಬಸವ ತತ್ವದ ಪ್ರಚಾರ ಪ್ರಸಾರ ಮಾಡುತ್ತಿದ್ದು, ಇವರ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವೆ ಆದರ್ಶವಾದದ್ದು, ಅನಾಥ ಮಕ್ಕಳ ಪಾಲಿನ ದೇವರಾಗಿರುವ ಪೂಜ್ಯರು ಸಾಕಷ್ಟು ಬಡ, ನಿರ್ಗತಿಕ ಮಕ್ಕಳನ್ನು ಬೆಳೆಸಿ, ಉತ್ತಮ ಶಿಕ್ಷಣ ನೀಡುತ್ತಾ ಬರುತ್ತಿದ್ದಾರೆ. ಶ್ರೀಗಳು ನಾಡೋಜ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಭಕ್ತಾದಿಗಳು ಮತ್ತು ಬಸವಾನುಯಾಯಿಗಳಿಗೆ ಎಲ್ಲಿಲ್ಲದ ಸಂತೋಷ ತಂದಿದೆ ಎಂದಿದ್ದಾರೆ.