ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಖೇಲ್ ಬಿ ಜಿತೋ - ದಿಲ್ ಬಿ ಜಿತೋ ಎಂಬ ಘೋಷವಾಕ್ಯದಡಿಯಲ್ಲಿ ಮೋದಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಟಲ್ ಫೌಂಡೇಶನ್ ಅಧ್ಯಕ್ಷರಾದ ಗುರುನಾಥ ಕೊಳ್ಳುರ ಹಾಗೂ ಬೀದರ್ ಕ್ರಿಕೆಟ್ ಅಸೋಸಿಯೇಷನ್ ಅವರ ನೇತೃತ್ವದಲ್ಲಿ ಡಿಸೆಂಬರ್ 25 ರಿಂದ 30 ರವರೆಗೆ ಆಯೋಜಿಸಲಾಗಿತ್ತು.ಡಿ. 25ರಂದು ಬೀದರ್ ನಗರದ ನೆಹರು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗಳಿಗೆ ಮಾಜಿ ಶಾಸಕರಾದ ಸುಭಾಷ ಕಲ್ಲೂರ, ಅಟಲ್ ಫೌಂಡೇಶನ್ ಅಧ್ಯಕ್ಷರಾದ ಗುರುನಾಥ ಕೊಳ್ಳುರ ಅವರು ಪಂದ್ಯಾವಳಿಗೆ ಚಾಲನೆ ನೀಡಿದ್ದರು ಎಂದು ಅಟಲ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 86 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಹನ್ನೊಂದು ತಂಡಗಳು ತಾಲೂಕು ಮಟ್ಟದಲ್ಲಿ ವಿಜೇತರಾಗಿದ್ದು ಆ ತಂಡಗಳ ನಡುವೆ 6, 7, 8 ರಂದು ಹೊನಲು ಬೆಳಕಿನ (ಡೇ ನೈಟ್) ಕ್ವಾಟರ್ ಫೈನಲ್, ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾವಳಿ ನಡೆಯಲಿವೆ.ಅಂತಿಮವಾಗಿ ವಿಜೇತರಾದ ವಿನ್ನರ್ಸ್ ತಂಡಕ್ಕೆ 1 ಲಕ್ಷ ರುಪಾಯಿ ಹಾಗೂ ರನ್ನರ್ಸ್ ತಂಡಕ್ಕೆ50 ಸಾವಿರ ರುಪಾಯಿ ಬಹುಮಾನವನ್ನ ಅಟಲ್ ಫೌಂಡೇಶನ್ ವತಿಯಿಂದ ವಿತರಿಸಲಾಗುತ್ತಿದೆ.
ಹಬ್ಬದ ವಾತಾವರಣದ ರೀತಿಯಲ್ಲಿ ನೇಹರು ಕ್ರೀಡಾಂಗಣದಲ್ಲಿ ಪಂದ್ಯಾವಳಿ ಜರುಗಲಿವೆ. ಪಟಾಕಿ, ಭಾಜಾ, ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತಿದ್ದು ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಕೋರಿದ್ದಾರೆ.ತಾಲೂಕು ಮಟ್ಟದಲ್ಲಿ ವಿಜೇತ ತಂಡಗಳು: ಬಸವಕಲ್ಯಾಣ ಸ್ಕೈವೀವ್, ಔರಾದ್ ಹಾಸ್ಟೆಲ್ ಬಾಯ್ಸ್, ಭಾಲ್ಕಿ ಕರ್ನಾಟಕ ಕ್ರಿಕೆಟ್ ಕ್ಲಬ್ ಧನ್ನೂರಾ, ಹುಮನಾಬಾದ ಎಲೆವೆನ್ ಕ್ರಿಕೆಟ್ ಕ್ಲಬ್, ಚಿಂಚೋಳಿ ಸ್ಟಾರ್ಸ್ ಕ್ರಿಕೆಟ್ ಕ್ಲಬ್, ಬೀದರ್ ದಕ್ಷಿಣ ಸಂಗುಳಗಿ ತಾಂಡಾ ಕ್ರಿಕೆಟ್ ಕ್ಲಬ್, ಆಳಂದ ಸಿದ್ರಾಮೇಶ್ವರ ಫೈನಾನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಬೀದರ್‌ನ ಮನು ವಾರಿಯರ್ಸ ಕ್ರಿಕೆಟ್ ಕ್ಲಬ್, ಶ್ರೇಯಶ್ರೀ ಕ್ರಿಕೆಟ್ ಕ್ಲಬ್, ಅಮನ್ ಕ್ರಿಕೆಟ್ ಕ್ಲಬ್, ಚಾಲೆಂಜರ್ ಬಾಯ್ಸ್ ಕ್ರಿಕೆಟ್ ಕ್ಲಬ್ ವಿಜೇತಗಳಾಗಿವೆ.
ಜ.6ರಿಂದ ಹೊನಲು ಬೆಳಕಿನ ಪಂದ್ಯಾವಳಿ: ಬೀದರ್ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಹಂತದ ಆಟಗಳು ಜನವರಿ 6,7 ಮತ್ತು 8 ರಂದು ಸಂಜೆ 5 ಗಂಟಗೆ ಬೀದರ ನಗರದ ನೇಹರು ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ (ಡೇ ಅಂಡ್ ನೈಟ್) ನಡೆಯಲಿದೆ. ಎಲ್ಲಾ ರೀತಿಯ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ. ಹೊನಲು ಬೆಳಕಿನ ಪಂದ್ಯಾವಳಿ ನಡೆಯುತ್ತಿರುವುದು ಬೀದರ ಜಿಲ್ಲೆಯಲ್ಲಿಯೆ ಇದೆ ಮೊದಲ ಬಾರಿಗೆ ಎಂಬುದು ವಿಶೇಷ.ಪಂದ್ಯಾವಳಿಯ ಅಂತಿಮ ಹಂತದ ಸಿದ್ಧತೆಯನ್ನು ಅಟಲ್ ಫೌಂಡೇಶನ್ ಅಧ್ಯಕ್ಷರಾದ ಗುರುನಾಥ ಕೊಳ್ಳುರ, ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಬೀದರ ಕ್ರಿಕೆಟ್ ಅಸೋಸಿಯೇಷನ್ ಪ್ರಮುಖರಾದ ಅನೀಲ ದೇಶಮುಖ, ಸಂಜಯ ಜಾಧವ ಸೇರಿದಂತೆ ಇತರರಿದ್ದರು.