ಸಾರಾಂಶ
ಯಾದಗಿರಿ: ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಕೋವಿಡ್ ಮುಂಜಾಗ್ರತೆ ಮತ್ತು ಆಸ್ಪತ್ರೆಗಳ ಮೂಲ ಸೌಕರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಬೇರೆ ರಾಜ್ಯಗಳಿಂದ ಬರುವ ಜನರ ಮೇಲೆ ನಿಗಾ ಇಡಿ, ಗ್ರಾಮ ಮತ್ತು ಪಟ್ಟಣಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಸಭೆಗಳನ್ನು ನಡೆಸಿ, ಡಂಗೂರ ಸಾರುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.ಹಿಂದಿನ ಹಲವು ಕಹಿಘಟನೆಗಳಿಂದ ಪಾಠ ಕಲಿತಿದ್ದೇವೆ. ಕ್ಷೇತ್ರದಲ್ಲಿ ಎಲ್ಲಿಯಾದರೂ ಒಂದೇ ಒಂದು ಪ್ರಕರಣ ಕಂಡು ಬಂದಲ್ಲಿ ಯಾವುದೇ ಕಾರಣಕ್ಕೂ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷಿಸಬಾರದು ತಕ್ಷಣದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ಮೆಡಿಕಲ್ ಆಫಿಸರ್‌ಗಳಿಗೆ ನೇಮಕ: ಗುರುಮಠಕಲ್ ಕ್ಷೇತ್ರದ ಸೈದಾಪೂರ, ಗುರುಮಠಕಲ್, ಹತ್ತಿಕುಣಿ ಸೇರಿದಂತೆ 6 ಆರೋಗ್ಯ ಕೇಂದ್ರಗಳಿಗೆ ರಾಜ್ಯ ಸರ್ಕಾರದಿಂದ ಆರೋಗ್ಯಧಿಕಾರಿಗಳ ನೇಮಕ ಮಾಡಿಸಲಾಗಿದ್ದು, ಗುರುಮಠಕಲ್ 50 ಬೆಡ್ ಆಸ್ಪತ್ರೆಯಲ್ಲಿ ಆಕ್ಸಿಜನ್, ಸೈದಾಪೂರ ಮತ್ತು ಅರಕೇರಾ (ಬಿ) ಆಸ್ಪತ್ರೆಯಲ್ಲಿ 30 ಬೆಡ್ ಜಂಬೋ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ. ಗುರುಮಠಕಲ್ ಸ್ಥಳಿಯ ಶಾಸಕರ ಅನುದಾನದಲ್ಲಿ ಕೃತಕ ಆಕ್ಸಿಜನ್ (ಕಾನ್ಸಂಟೇರ್) ನೀಡಲಾಗಿದೆ. ಅರಕೇರಾ(ಬಿ), ಸೈದಾಪೂರ, ಗುರಮಠಕಲ್ ಸಮುದಾಯ ಕೇಂದ್ರಗಳಲ್ಲಿ ಕೊವೀಡ್ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗಿದೆ ಎಂದರು.ಎನ್-95 ಮಾಸ್ಕ್ ಕೊರತೆ: ಸಭೆಯಲ್ಲಿ ಹಲವು ವೈದ್ಯರು ಎನ್-95 ಮಾಸ್ಕ್ ಕೊರತೆ ಇರುವುದನ್ನು ಶಾಸಕರ ಗಮನಕ್ಕೆ ತಂದರು. ಕೂಡಲೇ ಎನ್-95 ಮಾಸ್ಕ್ ಮತ್ತು ಸಾನಿಟೈಸರ್ ಎಲ್ಲ ಆಸ್ಪತ್ರೆಗಳಿಗೆ ಸರಬರಾಜು ಮಾಡಲು ಕ್ರಮಕೈಗೊಳ್ಳುವಂತೆ ಡಿಎಚ್‌ಓ ಅವರಿಗೆ ಸೂಚಿಸಿ, ಯಾವುದೇ ಕಾರಣಕ್ಕೂ ಹಳೆ ಮಾಸ್ಕ್ ಮತ್ತು ಸಾನಿಟೈಸರ್ ಉಪಯೋಗಿಸದಂತೆ ಎಚ್ಚರವಹಿಸಬೇಕು ಎಂದು ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಆಕ್ಸಿಜನ್ ಕೊರತೆ ಇಲ್ಲ: ರಾಜ್ಯದಲ್ಲಿ ಕಳೆದ ಬಾರಿ ಆಕ್ಸಿಜನ್ ಸಮಸ್ಯೆಯಿಂದ ಹಲವು ಕಹಿ ಘಟನೆಗಳು ಜರುಗಿದ ನಂತರ, ಸರ್ಕಾರ ಆಕ್ಸಿಜನ್ ಪ್ಲಾಂಟ್‌ಗೆ ಹೆಚ್ಚಿನ ಗಮನ ನೀಡಬೇಕೆಂದು ಜಿಲ್ಲಾಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಕೊರತೆ ಇಲ್ಲ, ಈಗಾಗಲೇ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಹಲವು ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್‌ಗಳ ಸ್ಥಾಪನೆ ಸೇರಿದಂತೆ ಹಲವು ಕ್ರಮಕೈಗೊಳ್ಳಲಾಗಿದ್ದು, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗದಮತೆ ಕ್ರಮ ಕೈಗೊಳ್ಳಲಾಗಿದೆ ಎಂದು ವೈದ್ಯಾಧಿಕಾರಿ ಡಾ.ರಾಯಚೂರಕರ್ ಮತ್ತು ಡಾ. ಎಂ.ಎಸ್.ಪಾಟೀಲ ಸಭೆಯ ಗಮನಕ್ಕೆ ತಂದರು.ಹಾರಿಕೆ ಉತ್ತರ ಬೇಡ: ಬೆಂಗಾಲಿಯವರು ರಾಮಸಮುದ್ರ ಗ್ರಾಮದಲ್ಲಿ ಬಂದು ಖಾಸಗಿಯಾಗಿ ಚಿಕಿತ್ಸೆ ನೀಡಿದ್ದು, ಅವರ ಮೇಲೆ ಕ್ರಮತೆಗೆದುಕೊಳ್ಳಿ, ಆರ್‌ಎಂಪಿ ವೈದ್ಯರಿಗೆ ವ್ಯಾಪ್ತಿ ಮೀರದಂತೆ ಸೂಚನೆ ನೀಡಿ ಎಂದು ಶಾಸಕ ಕಂದಕೂರು ಹೇಳಿದಾಗ, ಮಾಹಿತಿ ಇಲ್ಲವೆಂದ ತಾಲೂಕು ವೈದ್ಯಾಧಿಕಾರಿ ಡಾ.ಹಣಮಂತ ಅವರ ಉತ್ತರಕ್ಕೆ ಕೆರಳಿದ ಶಾಸಕ ಶರಣಗೌಡ ಕಂದಕೂರ ಅವರು, ಹಾರಿಕೆ ಉತ್ತರ ಕೊಡಬಾರದು ಎಂದು ಕೋಪಗೊಂಡರು. ನೋಡುತ್ತೇನೆ, ಕ್ರಮಕೈಗೊಳ್ಳುತ್ತೇನೆ. ಅನ್ನೋ ಭಾವನೆ ಒಳ್ಳೆಯದಲ್ಲ. ಎಲ್ಲರೂ ಸರಿಯಾಗಿ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.
100 ಬೆಡ್ ಆಸ್ಪತ್ರೆ ನನ್ನ ಕನಸು: ಗುರುಮಠಕಲ್‌ನಲ್ಲಿ 100 ಬೆಡ್‌ಗಳ ಆಸ್ಪತ್ರೆ ನನ್ನ ಬಹುದಿನಗಳ ಕನಸಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಕೂಡ ಮಾಡಿದ್ದೇನೆ. ಈ ಕುರಿತು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲಿಯೇ ಗುರುಮಠಕಲ್ ಪಟ್ಟಣದಲ್ಲಿ 100 ಬೆಡ್ ಆಸ್ಪತ್ರೆ ಪ್ರಾರಂಭವಾಗಲಿದೆ ಎಂದು ಶಾಸಕ ಕಂದಕೂರು ಹೇಳಿದರು. ಮತಕ್ಷೇತ್ರದ ಪ್ರತಿಯೊಂದು ಆಸ್ಪತ್ರೆಗೆ ಮೂಲಸೌಲಭ್ಯ ಒದಗಿಸಲು ಬದ್ಧನಾಗಿದ್ದು, ಆಸ್ಪತ್ರೆಗೆ ಬೇಕಾದ ಸೌಲಭ್ಯದ ಲಿಸ್ಟ್ ಕೊಟ್ಟರೆ, ಕೂಡಲೇ ಒದಗಿಸುವ ಕೆಲಸ ಮಾಡುತ್ತೇನೆ. ಯಾರೊಬ್ಬರೋಗಿಯಿಂದ ಆಸ್ಪತ್ರೆಗಳ ವೈದ್ಯಾಧಿಕಾರಿಗಳ ವಿರುದ್ಧ ದೂರು ಬರದಂತೆ ನೋಡಿಕೊಳ್ಳುವುದು ಜವಾಬ್ದಾರಿ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಭುಲಿಂಗ ಮಾನಕರ್, ಯಾದಗಿರಿ ತಹಸೀಲ್ದಾರ್ ಸುರೇಶ್ ಅಂಕಲಗಿ, ಗುರುಮಠಕಲ್ ಉಪತಹಶೀಲ್ದಾರ್ ನರಸಿಂಹ ಸ್ವಾಮಿ, ತಾಲೂಕ ಆರೋಗ್ಯಾಧಿಕಾರಿ ಡಾ.ಹಣಮಂತರಡ್ಡಿ, ಆರೋಗ್ಯ ಇಲಾಖೆಯ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಾಜಿದ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜ್ಯೋತಿ, ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿ ಭಾರತಿ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ, ಜಿಲ್ಲಾ ಆರ್‌ಸಿಎಚ್ಓ ಮಲ್ಲಪ್ಪ ಮುಂತಾದವರಿದ್ದರು.