ಸಾರಾಂಶ
ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡಿರುವ ರೈತರಿಗೆ ಸರ್ಕಾರ ಭೂ ಪರಿಹಾರ ನೀಡದಿರುವ ಹಿನ್ನೆಲೆ ಸಿಂಗಟಾಲೂರು ಯೋಜನೆ ವಿಭಾಗ 1 ಕಚೇರಿ ಜಪ್ತಿಗೆ ಇಲ್ಲಿನ ಸಿವಿಲ್ ಜಡ್ಜ್ ಹಿರಿಯ ಶ್ರೇಣಿ ನ್ಯಾಯಾಲಯ ಆದೇಶಿಸಿದೆ.
ಹೂವಿನಹಡಗಲಿ: ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡಿರುವ ರೈತರಿಗೆ ಸರ್ಕಾರ ಭೂ ಪರಿಹಾರ ನೀಡದಿರುವ ಹಿನ್ನೆಲೆ ಸಿಂಗಟಾಲೂರು ಯೋಜನೆ ವಿಭಾಗ 1 ಕಚೇರಿ ಜಪ್ತಿಗೆ ಇಲ್ಲಿನ ಸಿವಿಲ್ ಜಡ್ಜ್ ಹಿರಿಯ ಶ್ರೇಣಿ ನ್ಯಾಯಾಲಯ ಆದೇಶಿಸಿದೆ.
ತಾಲೂಕಿನ ಕೆ. ಅಯ್ಯನಹಳ್ಳಿಯ ಬಂಡೆಪ್ಪನವರ ಪಾರ್ವತಮ್ಮ, ಅಲ್ಲಿಪುರದ ಬಿಕ್ಕಟ್ಟಿ ದ್ಯಾಮಪ್ಪ ಸೇರಿ ಏಳು ಜನ ರೈತರು ಹೆಚ್ಚುವರಿ ಭೂ ಪರಿಹಾರ ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ರೈತರ ಮನವಿ ಪುರಸ್ಕರಿಸಿದ ನ್ಯಾಯಾಲಯವು, ₹34.80 ಲಕ್ಷ ಭೂಪರಿಹಾರ ಪಾವತಿಸಲು ವಿಳಂಬ ಮಾಡಿರುವ ಹಿನ್ನೆಲೆ ಯೋಜನೆ ಕಚೇರಿಯ ಜಪ್ತಿಗೆ ಆದೇಶಿಸಿದೆ.
ರೈತರ ಪರ ವಕೀಲರಾದ ಕೆ. ರತ್ನಾಕರ ರಾವ್ ಮತ್ತು ನ್ಯಾಯಾಲಯ ಅಮೀನ್‌ದಾರರು ಶುಕ್ರವಾರ ನ್ಯಾಯಾಲಯ ಆದೇಶದೊಂದಿಗೆ ವಿಭಾಗೀಯ ಕಚೇರಿಗೆ ಆಗಮಿಸಿ, ಮೂರು ವಾಹನಗಳು, ಪೀಠೋಪಕರಣ ಜಪ್ತಿಗೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದರು.
ಈ ಸಂದರ್ಭದಲ್ಲಿ ಸಿಂಗಟಾಲೂರು ಯೋಜನೆ ವಿಭಾಗ- 1 ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಮೂರ್ತಿ ಅವರು, ಭೂ ಪರಿಹಾರದ ಹಣ ಠೇವಣಿ ಇರಿಸುವಂತಹ ಪ್ರಕ್ರಿಯೆ ನಡೆದಿರುವುದರಿಂದ ಸ್ವಲ್ಪ ಕಾಲಾವಕಾಶ ಕೇಳಿದರು. ಇದಕ್ಕೆ ಒಪ್ಪದ ವಕೀಲರು ನ್ಯಾಯಾಲಯ ಆದೇಶದಂತೆ ಜಪ್ತಿ ಮಾಡುತ್ತೇವೆ ಎಂದು ಪಟ್ಟು ಹಿಡಿದರು.
ಆಗ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಮೂರ್ತಿ ಅವರು, ಧಾರವಾಡದ ಕರ್ನಾಟಕ ನೀರಾವರಿ ನಿಗಮ ಕಚೇರಿಯ ಮುಖ್ಯ ಆಡಳಿತಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ ಬಳಿಕ 15 ದಿನದೊಳಗೆ ಪರಿಹಾರದ ಚೆಕ್ ನೀಡುತ್ತೇವೆ ಎಂದು ಹೇಳಿದರು.
ಈ ಕುರಿತು ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ನೀಡುವಂತೆ ಅಮಿನ್‌ದಾರರು ಹೇಳಿದಾಗ, ಎಂಜಿನಿಯರ್ ಲಿಖಿತ ಪತ್ರ ನೀಡಿದರು. ಆಗ ಜಪ್ತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ವಕೀಲ ಬಿ. ಶಿವಾನಂದ ಹಾಗೂ ಕರ್ನಾಟಕ ನೀರಾವರಿ ನಿಗಮದ ಪರ ವಕೀಲರಾದ ರಫೀಕ್ ಉಪಸ್ಥಿತರಿದ್ದರು.