ಸಾರಾಂಶ
ಮುಂಡಗೋಡದ ಅರಣ್ಯ ಪ್ರದೇಶ ಗಡಿ ಭಾಗಕ್ಕೆ ನಿರ್ಮಿಸಿದ್ದ ಸಿಮೆಂಟ್ ತಡೆಗೋಡೆ ಕೆಲವೇ ತಿಂಗಳಲ್ಲಿ ಮುರಿದು ಬಿದ್ದಿದೆ. ಕಳಪೆ ಕಾಮಗಾರಿಗೆ ಇದೇ ಸಾಕ್ಷಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಡಗೋಡ: ಅರಣ್ಯ ಪ್ರದೇಶ ಗಡಿ ಭಾಗಕ್ಕೆ ನಿರ್ಮಿಸಿದ್ದ ಸಿಮೆಂಟ್ ತಡೆಗೋಡೆ ಕೆಲವೇ ತಿಂಗಳಲ್ಲಿ ಮುರಿದು ಬಿದ್ದಿದೆ. ಕಳಪೆ ಕಾಮಗಾರಿಗೆ ಇದೇ ಸಾಕ್ಷಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಹೊರ ವಲಯ ಕ್ಯಾಸನಕೇರಿ ರಸ್ತೆ ಅಂಚಿನಲ್ಲಿರುವ ಅರಣ್ಯ ಪ್ರದೇಶದ ಗಡಿ ಭಾಗಕ್ಕೆ ಇಲಾಖೆ ರೆಡಿಮೇಡ್ ಸಿಮೆಂಟ್ ಪ್ಲೇಟ್‌ನ ತಡೆಗೋಡೆ ನಿರ್ಮಿಸಿದೆ. ಇದನ್ನು ನಿರ್ಮಿಸಿದ ಕೆಲವೇ ತಿಂಗಳಲ್ಲಿ ಕೆಲವೆಡೆ ಪ್ಲೇಟ್ ಮುರಿದು ಬಿದ್ದಿದ್ದು, ಹಲವೆಡೆ ಬಿರುಕು ಕಾಣಿಸಿಕೊಂಡಿವೆ. ಮತ್ತಷ್ಟು ಕಡೆಗಳಲ್ಲಿ ಯಾವಾಗ ಮುರಿದು ಬಿಳುತ್ತವೆ ಎಂದು ಸಾರ್ವಜನನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ್ದ ತಡೆಗೋಡೆ ಈ ರೀತಿ ಮುರಿದು ಬಿದ್ದರೆ ಹೇಗೆ ಎಂದು ಪ್ರಶ್ನಿಸಿರುವ ಜನರು, ತಕ್ಷಣ ಮೇಲಾಧಿಕಾರಿಗಳು ತಡೆಗೋಡೆಯ ಗುಣಮಟ್ಟದ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತಡೆಗೋಡೆ ಮುರಿದು ಬಿದ್ದಿರುವುದರಿಂದ ಕಾಡು ಪ್ರಾಣಿಗಳು ಗದ್ದೆಯೊಳಗೆ ನುಗ್ಗುತ್ತಿವೆ. ಇದರಿಂದ ರಾತ್ರಿ ಗದ್ದೆಗೆ ಹೋಗಲು ಭಯವಾಗುತ್ತಿದೆ. ಅರಣ್ಯ ಇಲಾಖೆ ತಕ್ಷಣ ತಡೆಗೋಡೆ ದುರಸ್ತಿಗೊಳಿಸಿ ಕಾಡು ಪ್ರಾಣಿಗಳಿಂದ ರೈತರನ್ನು ರಕ್ಷಿಸಬೇಕು ಎಂದು ರೈತ ಬಾಳಾ ವೆರ್ಣೇಕರ ಆಗ್ರಹಿಸಿದ್ದಾರೆ.
ಇಲಾಖೆಯಿಂದ ನಿರ್ಮಿಸಿದ ತಡೆಗೋಡೆ ಕೆಲವೆಡೆ ಮುರಿದು ಬಿದ್ದಿರುವುದು ಗಮನಕ್ಕೆ ಬಂದಿದೆ. ಅದು ಯಾವ ಕಾರಣಕ್ಕೆ ಹಾಗಾಯಿತು ಎಂಬುವುದರ ಬಗ್ಗೆ ವರದಿ ಸಲ್ಲಿಸುವಂತೆ ಸಿಬ್ಬಂದಿಗೆ ತಿಳಿಸಲಾಗಿದೆ. ವರದಿ ಬಂದ ಬಳಿಕ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಂಡಗೋಡಿನ ವಲಯ ಅರಣ್ಯಾಧಿಕಾರಿ ವಾಗೀಶ ಬಾಚಿನಕೊಪ್ಪ ತಿಳಿಸಿದ್ದಾರೆ.