ಭಕ್ತಿಯಿಂದ ಜ್ಞಾರ್ನಾಜನೆಯಲ್ಲಿ ಪಾಲ್ಗೊಳ್ಳಬೇಕು

| Published : Feb 08 2024, 01:31 AM IST

ಸಾರಾಂಶ

ತಂದೆ - ತಾಯಿ, ಗುರುಗಳು ಯಾವುದನ್ನು ಫಲಾಪೇಕ್ಷೆ ಬಯಸದೇ ಮಕ್ಕಳ ಬದುಕು ಸುಂದರವಾಗಿಸಲು ನಿರಂತರ ಪ್ರಯತ್ನ ಪಡುತ್ತಾರೆ. ವಿದ್ಯಾರ್ಥಿಗಳಲ್ಲಿ ಗುರುಭಕ್ತಿ ಇದ್ದರೆ ಮಾತ್ರ ಸಾಧನೆ ಮೆಟ್ಟಿಲು ದಾಟಲು ಸಾಧ್ಯ

ಕನ್ನಡಪ್ರಭ ವಾರ್ತೆ ಮೂಡಲಗಿ

ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸರಳವಾಗಿ ಸ್ವೀಕರಿಸದೆ ಸರಿ ಮಾರ್ಗದಲ್ಲಿ ನಡೆದು ಪರಿಪೂರ್ಣತೆ ಸಂಪಾದಿಸುವತ್ತ ಗಮನ ನೀಡಬೇಕು ಎಂದು ಹಳ್ಳೂರಿನ ಸರ್ಕಾರಿ ಪ. ಪೂ ಕಾಲೇಜಿನ ಉಪನ್ಯಾಸಕ ವೈ.ಬಿ.ಕಳ್ಳಿಗುದ್ದಿ ಹೇಳಿದರು.

ಪಟ್ಟಣದ ಆರ್‌.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ತಂದೆ - ತಾಯಿ, ಗುರುಗಳು ಯಾವುದನ್ನು ಫಲಾಪೇಕ್ಷೆ ಬಯಸದೇ ಮಕ್ಕಳ ಬದುಕು ಸುಂದರವಾಗಿಸಲು ನಿರಂತರ ಪ್ರಯತ್ನ ಪಡುತ್ತಾರೆ. ವಿದ್ಯಾರ್ಥಿಗಳಲ್ಲಿ ಗುರುಭಕ್ತಿ ಇದ್ದರೆ ಮಾತ್ರ ಸಾಧನೆ ಮೆಟ್ಟಿಲು ದಾಟಲು ಸಾಧ್ಯ ಎಂದರು.

ಚಿಮ್ಮಡದ ಭೂಮಿಕಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮುತ್ತು ಢವಳೇಶ್ವರ ಮಾತನಾಡಿ, ವಿದ್ಯಾರ್ಥಿಗಳ ಜೀವನ ಆರಂಭದಲ್ಲಿ ಕಷ್ಟ ಎನ್ನಿಸಿದರೂ ಮುಂದಿನ ಜೀವನಕ್ಕೆ ಸ್ಪೂರ್ತಿ ನೀಡುತ್ತದೆ. ಗುರುಗಳಿಗೆ ಗೌರವ ಕೊಡುವ ವ್ಯಕ್ತಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗೌರವಿಸಲ್ಪಡುತ್ತಾನೆ. ವಿದ್ಯಾರ್ಥಿಗಳು ಕೇವಲ ವಿಷಯಕ್ಕೆ ಆಧ್ಯತೆ ನೀಡದೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆಯ ಅಧ್ಯಕ್ಷ ಸಂತೋಷ ತಮ್ಮಣ್ಣಾ ಪಾರ್ಶಿ ವಹಿಸಿದ್ದರು. ಬಿಇಒ ಕಚೇರಿ ಇಸಿಒ ಕರಿಬಸವರಾಜು ಟಿ, ರಮೇಶ ಪಾಟೀಲ, ಡಾ. ಪ್ರಕಾಶ ನಿಡಗುಂದಿ, ಗಿರಿಗೌಡ ಪಾಟೀಲ, ಸಸಾಲಟ್ಟಿಯ ಹಾಸ್ಯ ಕಲಾವಿದ ಚಪಾತಿ ಪಾಂಡು ಖ್ಯಾತಿಯ ಎಸ್.ಪಿ.ಹೊಸಪೇಟಿ, ಅನ್ವರ ನದಾಫ ಹಾಗೂ ವಿವಿಧ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಸೇರಿದಂತೆ ಮತ್ತಿತರಿದ್ದರು. ಕ್ರೀಡೆ ಸಾಂಸ್ಕೃತಿಕ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಉಪನ್ಯಾಸಕ ಸಂಜೀವ ವಾಲಿ ಸ್ವಾಗತಿಸಿದರು, ಎಂ.ಐ. ಜಾಡರ ನಿರೂಪಿಸಿದರು, ಜಿ.ಎಸ್.ಮನ್ನಾಪೂರ ವಂದಿಸಿದರು.