ಸಾರಾಂಶ
ಈ ಗುಹೆಯೊಳಗೆ ನೆಲ್ಲಿ ತೀರ್ಥ ಎಂಬ ಪ್ರವಿತ್ರ ಕೊಳ ಹಾಗೂ ಜಾಬಾಲೇಶ್ವರ ಎಂಬ ಶಿವಲಿಂಗ ಇದೆ. ಗುಹೆ ಪ್ರವೇಶಿಸಿ ತೀರ್ಥ ಸ್ನಾನ ಮಾಡಲು 200 ಮೀಟರ್ ಒಳಗೆ ಮುಂದುವರಿಯಬೇಕು. ಹೆಚ್ಚಿನ ಮಾಹಿತಿಗೆ ಎನ್.ವಿ.ಜಿ.ಕೆ.ಭಟ್ ನೆಲ್ಲಿತೀರ್ಥ 9980716611 ಇವರನ್ನು ಸಂಪರ್ಕಿಸಬಹುದು ಎಂದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯ ಆಡಳಿತಕ್ಕೆ ಒಳಪಟ್ಟ ನೆಲ್ಲಿತೀರ್ಥ ಶ್ರೀಸೋಮನಾಥೇಶ್ವರ ಗುಹಾಲಯದ ವಾರ್ಷಿಕ ‘ತೀರ್ಥ ಸ್ನಾನ’ ಅಕ್ಟೋಬರ್ 17ರಿಂದ ಏಪ್ರಿಲ್ 14ರ ವರೆಗೆ ನಡೆಯಲಿದೆ.ಮಂಗಳೂರು ತಾಲೂಕಿನ ನೀರುಡೆಯ ಕೊಂಪದವಿನಲ್ಲಿರುವ ಈ ಗುಹಾಲಯ ಕರ್ನಾಟಕದಲ್ಲೇ ಅತೀ ದೊಡ್ಡ ಗುಹಾಲಯಗಳಲ್ಲಿ ಒಂದಾಗಿದೆ. ಮಂಗಳೂರು ನಗರದಿಂದ 30 ಕಿ.ಮೀ. ದೂರದಲ್ಲಿದ್ದು, ಪ್ರತಿ ವರ್ಷ ತುಲಾ ಸಂಕ್ರಮಣದಿಂದ ಮೇಷ ಸಂಕ್ರಮಣ(ಜನವರಿ 14) ವರೆಗೆ ಗುಹಾಲಯ ಪ್ರವೇಶಿಸಿ ತೀರ್ಥ ಸ್ನಾನ ಮಾಡಲು ಭಕ್ತಾದಿಗಳಿಗೆ ಅವಕಾಶವಿರುತ್ತದೆ ಎಂದು ಕ್ಷೇತ್ರದ ಭಕ್ತರೂ ಆಗಿರುವ ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.17ರಂದು ಬೆಳಗ್ಗೆ 9.30 ಗಂಟೆ ಮುಹೂರ್ತದಲ್ಲಿ ಗುಹಾ ಪ್ರವೇಶ ಆರಂಭವಾಗಲಿದೆ. ಕ್ಷೇತ್ರದ ತಂತ್ರಿಗಳ ಜೊತೆ ಚಿತ್ರಾಪುರ ಮಠಾಧೀಶ ಶ್ರೀವಿದ್ಯೇಂದ್ರ ತೀರ್ಥ ಸ್ವಾಮೀಜಿ ಭಕ್ತರೊಂದಿಗೆ ಗುಹಾಲಯ ಪ್ರವೇಶಿಸಲಿದ್ದಾರೆ. ಸಾಂಪ್ರದಾಯಿಕ ದೀಪವನ್ನು ಹಿಡಿದುಕೊಂಡ ಮಾರ್ಗದರ್ಶಿಯೊಂದಿಗೆ ಗುಹೆ ಪ್ರವೇಶಕ್ಕೆ ಅವಕಾಶ ಇದೆ. ದಿನಂಪ್ರತಿ ಬೆಳಗ್ಗೆ 7.30ರಿಂದ ಮಧ್ಯಾಹ್ನ 1 ಗಂಟೆ ವರೆಗೂ ಭಕ್ತರು ಗುಹೆ ಪ್ರವೇಶಿಸಬಹುದು. ಪುರುಷರು ಪಂಚೆ, ಶಲ್ಯದೊಂದಿಗೆ ಹಾಗೂ ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಿ ಬರಬಹುದು. ಈ ಗುಹೆಯೊಳಗೆ ನೆಲ್ಲಿ ತೀರ್ಥ ಎಂಬ ಪ್ರವಿತ್ರ ಕೊಳ ಹಾಗೂ ಜಾಬಾಲೇಶ್ವರ ಎಂಬ ಶಿವಲಿಂಗ ಇದೆ. ಗುಹೆ ಪ್ರವೇಶಿಸಿ ತೀರ್ಥ ಸ್ನಾನ ಮಾಡಲು 200 ಮೀಟರ್ ಒಳಗೆ ಮುಂದುವರಿಯಬೇಕು. ಹೆಚ್ಚಿನ ಮಾಹಿತಿಗೆ ಎನ್.ವಿ.ಜಿ.ಕೆ.ಭಟ್ ನೆಲ್ಲಿತೀರ್ಥ 9980716611 ಇವರನ್ನು ಸಂಪರ್ಕಿಸಬಹುದು ಎಂದರು.ಮುಂದಿನ ವರ್ಷ ನೆಲ್ಲಿತೀರ್ಥ ದೇವಸ್ಥಾನದ ಬ್ರಹ್ಮಕಲಶೋತ್ಸವ ನೆರವೇರಿಸಲು ನಿರ್ಧರಿಸಲಾಗಿದೆ ಎಂದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಎನ್.ವೆಂಕಟರಾಜ್ ಭಟ್, ಪ್ರಸನ್ನ ಭಟ್, ದೀಪ್ ಕಿರಣ್ ಕರಂಬಾರ್ ಇದ್ದರು.