ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಅಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘ ತಾಲೂಕಿನಲ್ಲೇ ಉತ್ತಮ ವಹಿವಾಟು ನಡೆಸಿ ಹೆಚ್ಚು ಲಾಭಗಳಿಸುತ್ತಿದೆ ಎಂದು ಡೇರಿ ಅಧ್ಯಕ್ಷ ಬೊಮ್ಮಯ್ಯ ತಿಳಿಸಿದರು.ಗ್ರಾಮದ ಡೇರಿ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಪ್ರತಿ ವರ್ಷವು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಉತ್ತಮ ಸಂಘವೆಂದು ಗುರುತಿಸಿಕೊಂಡು ಸುಮಾರು 974 ಸದಸ್ಯರನ್ನು ಹೊಂದಿ ಈ ವರ್ಷ 19.27 ಲಕ್ಷಕ್ಕೂ ಹೆಚ್ಚು ನಿವ್ವಳ ಲಾಭಗಳಿಸಿದೆ ಕಳೆದ ವರ್ಷ 17 ಲಕ್ಷಕ್ಕೂ ಹೆಚ್ಚು ಲಾಭಗಳಿಸಿದೆ ಎಂದರು.
ಸದಸ್ಯರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಓಜಿಐ ಗುಂಪು ವಿಮಾ ಯೋಜನೆಗೆ 425 ಸದಸ್ಯರನ್ನು ನೋಂದಾಯಿಸಲಾಗಿದೆ. ಸಂಘಕ್ಕೆ ಹಾಲು ಸರಬರಾಜು ಮಾಡುತ್ತಿರುವ ಸದಸ್ಯರಿಗೆ ಸದಸ್ಯರ ವಂತಿಕೆ ಬಾಬ್ತು 47,200 ರು. ಗಳನ್ನು ಸಂಘವೇ ಭರಿಸಿದೆ ಎಂದರು.ಹೈನುಗಾರಿಕೆ ಉತ್ತೇಜಿಸಲು ಸರ್ಕಾರ ಮತ್ತು ಸಹಕಾರ ಸಂಘ ಹಲವು ಯೋಜನೆ ರೂಪಿಸಿದೆ. ಮರಣ ಪರಿಹಾರ ನಿಧಿಯನ್ನು ಸಂಘ ಭರಿಸುತ್ತಿದೆ. ಜೊತೆಗೆ ಓಜಿಐ ಗುಂಪು ವಿಮೆ ಯೋಜನೆಯಿಂದ 1 ಲಕ್ಷ ರು. ಸಂದಾಯ ಮಾಡಲಾಗಿದೆ ಎಂದರು.
ಮನ್ಮುಲ್ ಮಾಜಿ ನಿರ್ದೇಶಕ ಎ.ಸಿ.ಸತೀಶ್ ಮಾತನಾಡಿ, ಒಕ್ಕೂಟದ ಆರ್.ಕೆ.ಟ್ರಸ್ಟ್‌ನಿಂದ 4 ಸದಸ್ಯನಿಗೆ ತಲಾ 15 ಸಾವಿರ ರು. ನೀಡಲಾಗಿದೆ. ರಾಸುಗಳಿಗೆ ವಿಮೆ ಮಾಡಿಸಿ 2 ರಾಸುಗಳು ಮರಣಹೊಂದಿದ್ದು, ವಿಮಾ ಕಂಪನಿಯಿಂದ 1 ಲಕ್ಷ ರು.ಗಳನ್ನು ರಾಸು ಮಾಲೀಕರಿಗೆ ಕೊಡಿಸಲಾಗಿದೆ. ಸಂಘದ 3 ಸದಸ್ಯರು ಮರಣ ಹೊಂದಿದ ಹಿನ್ನೆಲೆಯಲ್ಲಿ ತಲಾ 8 ಸಾವಿರ ರು ಗಳನ್ನು ನೀಡಲಾಗಿದೆ ಎಂದರು.ಈ ವೇಳೆ ವಾರ್ಷಿಕ ವರದಿಯನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಎನ್.ಪ್ರತಾಪ್‌ಗೌಡ ಮಂಡಿಸಿದರು. ನಂತರ ಕಳೆದ ವರ್ಷ ಸಂಘಕ್ಕೆ ಹೆಚ್ಚು ಹಸುವಿನ ಹಾಲು ಪೂರೈಕೆ ಮಾಡಿದ ನಾಗರತ್ನಮ್ಮ, ಎ.ಎಸ್.ದೊರೆಸ್ವಾಮಿ, ಕೆ.ಬಿ.ಗುಣ ಹಾಗೂ ಹೆಚ್ಚು ಎಮ್ಮೆ ಹಾಲು ಪೂರೈಕೆ ಮಾಡಿದ ರಾಜು, ಭಾಗ್ಯಮ್ಮ, ಎ.ಟಿ.ಸಿದ್ದರಾಮೇಗೌಡ ಅವರಿಗೆ ನಗದು ಬಹುಮಾನ ವಿತರಿಸಲಾಯಿತು.ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀಮಂಚಮ್ಮ ದೇವಸ್ಥಾನದ ಅಭಿವೃದ್ದಿಗೆ 1 ಲಕ್ಷ ಮತ್ತು ಮೈಕ್‌ಸೆಟ್‌ಗೆ 1 ಲಕ್ಷ ರು ಗಳನ್ನು ನೀಡಬೇಕೆಂದು ಸದಸ್ಯರು ಮುಂದಿಟ್ಟಾಗ ಇದಕ್ಕೆ ಅಧ್ಯಕ್ಷರು ಒಪ್ಪಿಗೆ ನೀಡಿದರು.
ಸಭೆಯಲ್ಲಿ ಮಂಡ್ಯ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಅಸ್ಪಾದ್ , ಸಂಘದ ಉಪಾಧ್ಯಕ್ಷ ಬೋರಯ್ಯ, ನಿರ್ದೇಶಕರಾದ ಟಿ.ಉಮೇಶ್, ಕೆ.ಶಿವಕುಮಾರ್, ಮರಂಕೇಗೌಡ, ಎಸ್.ಸುನೀಲ್, ರೇವಣ್ಣ, ಶಂಕರ್, ಎ.ಸುನೀಲ್, ಎಚ್.ಎನ್.ಆಶಾ, ಎಂ.ಸಿ.ನಾಗರತ್ನಮ್ಮ, ಸಿಬ್ಬಂದಿ ಕೆ.ಸುನೀಲ್, ಎಂ.ಮನೋಜ್, ಎ.ರವಿ ಸೇರಿದಂತೆ ಇತರರಿದ್ದರು.