ಆನೆ ದಾಳಿಗೆ ಮತ್ತೋರ್ವ ರೈತ ಬಲಿ

| Published : Dec 16 2024, 12:46 AM IST

ಸಾರಾಂಶ

ಕನಕಪುರ: ರಾತ್ರಿ ವೇಳೆ ರಾಗಿ ಬೆಳೆ ಕಾವಲು ಕಾಯುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿ ಮೃತಪಟ್ಟಿರುವ ಘಟನೆ ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಹೆಗ್ಗನೂರುದೊಡ್ಡಿ ಗ್ರಾಮದಲ್ಲಿ ಸಂಭವಿಸಿದೆ.

ಕನಕಪುರ: ರಾತ್ರಿ ವೇಳೆ ರಾಗಿ ಬೆಳೆ ಕಾವಲು ಕಾಯುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿ ಮೃತಪಟ್ಟಿರುವ ಘಟನೆ ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಹೆಗ್ಗನೂರುದೊಡ್ಡಿ ಗ್ರಾಮದಲ್ಲಿ ಸಂಭವಿಸಿದೆ.

ಕರಿಯಪ್ಪ(66) ಮೃತಪಟ್ಟಿರುವ ದುರ್ದೈವಿ ರೈತ. ರಾಗಿ ಹೊಲಕ್ಕೆ ಆನೆಗಳು ನುಗ್ಗಿ ಬೆಳೆ ನಾಶ ಮಾಡುತ್ತಿದ್ದ ಕಾರಣ ಸುತ್ತಮುತ್ತಲ ರೈತರೆಲ್ಲಾ ಸೇರಿ ರಾತ್ರಿ ಕಾವಲಿಗೆ ಹೋಗಿ ಆನೆಗಳನ್ನು ಬೆದರಿಸುತ್ತಿದ್ದರು. ಎಂದಿನಂತೆ ಭಾನುವಾರ ಬೆಳಗಿನ ಜಾವ 2 ಗಂಟೆಯಲ್ಲಿ ಏಕಾಏಕಿ ಬಂದ ಕಾಡಾನೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿತ್ತು. ನೆರೆಹೊರೆಯ ಜಮೀನಿನಲ್ಲಿದ್ದ ರೈತರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಲಾಲ್ ಮಾತನಾಡಿ, ಕಾಡಾನೆ ಹಾವಳಿ ತಡೆಗಟ್ಟಲು ಸೋಲಾರ್ ತಂತಿ ಹಾಗೂ ರೈಲ್ವೆ ಬ್ಯಾರಿಕೇಡ್‌ಗಳನ್ನು ಹಾಕಲಾಗುತ್ತಿದೆ. ಕಾವೇರಿ ಸಂಗಮ ರೇಂಜ್‌ನಲ್ಲಿ ಸಾಕಷ್ಟು ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಆನೆಗಳು ಅರಣ್ಯಗಡಿ ಪ್ರದೇಶಗಳತ್ತ ಬರದಂತೆ ಕ್ರಮ ಕೈಗೊಳ್ಳಲಾಗಿದೆ. ಹೆಗ್ಗನೂರು ದೊಡ್ಡಿ ಗ್ರಾಮದ ಕಂದಾಯ ಜಮೀನು ಕಾಡಿನ ಒಳಗೆ ಯಾವುದೇ ಆನೆಗಳು ಬಾರದಂತೆ 8 ಕಿ.ಮೀ. ಸೋಲಾರ್ ಫೆನ್ಸಿಂಗ್ ಅಳವಡಿಸಿದರೆ ಆನೆಗಳ ಹಾವಳಿಯನ್ನು ತಪ್ಪಿಸಬಹುದು ಎಂದು ಸ್ಥಳೀಯ ಮುಖಂಡರು ನನ್ನ ಗಮನಕ್ಕೆ ತಂದಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಜತೆ ಮಾತನಾಡಿ ಅವರಿಂದ ಅನುಮತಿ ಪಡೆದು ಸೋಲಾರ್ ತಂತಿಯನ್ನು ಅಳವಡಿಸುವುದಾಗಿ ತಿಳಿಸಿದರು.

ಈ ಪ್ರದೇಶದ ಸುತ್ತಮುತ್ತ 4 ಒಂಟಿ ಸಲಗಗಳು ಓಡಾಡುತ್ತಿವೆ. ಅವು ಒಮ್ಮೊಮ್ಮೆ ಸೋಲಾರ್ ತಂತಿ, ರೈಲ್ವೆ ಬ್ಯಾರಿಕೇಡ್‌ಗಳನ್ನು ಮುರಿದು ಒಳನುಗ್ಗಿ ರೈತರ ಮೇಲೂ ದಾಳಿ ಮಾಡುತ್ತಿವೆ. ಈ ನಾಲ್ಕು ಕಾಡಾನೆಗಳ ಕಾರ್ಯಾಚರಣೆ ಮಾಡಿ ಬೇರೆಡೆ ಸ್ಥಳಾಂತರಿಸಲು ಅನುಮತಿ ನೀಡಿದ್ದಾರೆ. ಶೀಘ್ರದಲ್ಲೇ ಕಾಡಾನೆಗಳ ಕಾರ್ಯಾಚರಣೆಗೂ ಕ್ರಮ ಕೈಗೊಳ್ಳುತ್ತೇವೆ. ಹಾಗೆಯೇ ಸರ್ಕಾರದಿಂದ ಮೃತ ರೈತನ ಕುಟುಂಬಕ್ಕೆ ನೀಡುವ ಎಲ್ಲಾ ಪರಿಹಾರಗಳನ್ನು ಶೀಘ್ರವೇ ಕೊಡಿಸುವುದಾಗಿ ತಿಳಿಸಿದರು.

ಸ್ಥಳಕ್ಕೆ ಡಿಸಿಎಫ್‌ ಸುರೇಂದ್ರ ಭೇಟಿ ನೀಡಿ ಮಾತನಾಡಿ, ಆನೆ ದಾಳಿ ಮಾಡಿರುವ ಮಾಹಿತಿ ಬಂದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಬರುವ ₹15 ಲಕ್ಷ ಪರಿಹಾರ ಹಾಗೂ ಅವರ ಕುಟುಂಬದ ಒಬ್ಬರಿಗೆ ಪ್ರತಿ ತಿಂಗಳು ನಾಲ್ಕು ಸಾವಿರ ರುಪಾಯಿಗಳಂತೆ ಐದು ವರ್ಷ ನೀಡಲಾಗುವುದು. ಶವ ಸಂಸ್ಕಾರಕ್ಕಾಗಿ ಐವತ್ತು ಸಾವಿರ ರುಪಾಯಿ ನೀಡುವುದಾಗಿ ತಿಳಿಸಿದರು.

ಸ್ಥಳೀಯ ಮುಖಂಡರ ಸಂತಾಪ:

ಸ್ಥಳೀಯ ಮುಖಂಡ ಎಚ್.ಕೆ.ರವಿ ಮಾತನಾಡಿ, ರೈತ ಕರಿಯಪ್ಪ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರ ಸಾವಿನ ಸುದ್ದಿ ಕೇಳಿ ನಮಗೆಲ್ಲರಿಗೂ ನೋವುಂಟಾಗಿದೆ. ನಮ್ಮ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಕುಟುಂಬಕ್ಕೆ ನೋವನ್ನು ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ತಿಳಿಸಿದರು.

ಇದೇ ವೇಳೆ ಇಡಿಸಿ ಸಂಘದಿಂದ ಮೃತ ರೈತ ಕರಿಯಪ್ಪನವರ ಕುಟುಂಬಕ್ಕೆ ಐವತ್ತು ಸಾವಿರ ರುಪಾಯಿಗಳ ಚೆಕ್ ಅನ್ನು ಸಂಘದ ಅಧ್ಯಕ್ಷ ಕುಮಾರ್ ನಾಯ್ಕ ವಿತರಿಸಿದರು.

ಉಪ ತಹಸೀಲ್ದಾರ್ ಶಿವಕುಮಾರ್, ಎಸಿಎಫ್ ನಾಗೇಂದ್ರ ಆರ್‌ಎಫ್‌ಒ ಅನಿಲ್, ಡಿಆರ್‌ಎಫ್‌ಒ ಸದಾಶಿವ, ಗ್ರಾಮದ ಮುಖಂಡರಾದ ಜಗದೀಶ್, ಪಿ.ರಮೇಶ್, ತಾಪಂ ಮಾಜಿ ಸದಸ್ಯ ದೇವರಾಜ್, ಶಿವಲಿಂಗಯ್ಯ, ಮುತ್ತುರಾಜ್, ಶಿವಲಿಂಗಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಕೆ ಕೆ ಪಿ ಸುದ್ದಿ 01(2)ಕನಕಪುರ

ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಹೆಗ್ಗನೂರುದೊಡ್ಡಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಬಲಿಯಾಗಿರುವ ರೈತ ಕರಿಯಪ್ಪ ಅಂತಿಮ ದರ್ಶನ ಪಡೆದ ಮಾಜಿ ಸಂಸದ ಡಿ.ಕೆ.ಸುರೇಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.