ಸಾರಾಂಶ
ಮಂಡ್ಯ : ಮಂಡ್ಯ ತಾಲೂಕಿನ ಹಾಡ್ಯ ಸಮೀಪದ ಆಲೆಮನೆಯಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿದ ಬೆನ್ನಲ್ಲೇ ಇದೀಗ ಪಾಂಡವಪುರದಲ್ಲಿ ಮತ್ತೊಂದು ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿರುವುದು ಆತಂಕ ಸೃಷ್ಟಿಸಿದೆ. ಪಾಂಡವಪುರ ತಾಲೂಕು ಆರೋಗ್ಯ ಇಲಾಖೆ ವಸತಿ ಗೃಹದಲ್ಲೇ ಇಂಥ ಹೀನಕೃತ್ಯ ನಡೆದಿರುವುದು ಅಚ್ಚರಿ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ.
ಆಂಬ್ಯುಲೆನ್ಸ್ ಚಾಲಕ ಆನಂದ್ (37), ಹೊರಗುತ್ತಿಗೆ ಡಿ-ಗ್ರೂಪ್ ಸಿಬ್ಬಂದಿ ಅಶ್ವಿನಿ (32), ಆಕೆಯ ತಾಯಿ ಸತ್ಯಮ್ಮ (54 ), ಹಿಂದೆ ಪಾಂಡವಪುರ ಖಾಸಗಿ ನರ್ಸಿಂಗ್ ಹೋಂನಲ್ಲಿ ಡಿ-ಗ್ರೂಪ್ ಸಿಬ್ಬಂದಿಯಾಗಿದ್ದ ಗಿರಿಜಮ್ಮ (48) ಬಂಧಿತರು.
ಪ್ರಕರಣವೇನು?: ಆಂಬ್ಯುಲೆನ್ಸ್ ಚಾಲಕನಾಗಿದ್ದ ಆನಂದ್‌ಗೆ ಪಾಂಡವಪುರ ತಾಲೂಕು ಆರೋಗ್ಯ ಇಲಾಖೆಗೆ ಸೇರಿದ ವಸತಿ ಗೃಹವನ್ನು ವಾಸಕ್ಕೆ ನೀಡಲಾಗಿತ್ತು. ಆನಂದ್, ಪತ್ನಿ ಅಶ್ವಿನಿ, ಆಕೆ ತಾಯಿ ಸತ್ಯಮ್ಮ ಅಲ್ಲಿ ವಾಸವಿದ್ದರು. ಅಶ್ವಿನಿ ಆರೋಗ್ಯ ಇಲಾಖೆಯಲ್ಲೇ ಹೊರಗುತ್ತಿಗೆ ಆಧಾರದ ಮೇಲೆ ಡಿ-ಗ್ರೂಪ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ವಸತಿ ಗೃಹದಲ್ಲಿ ವಾಸವಿದ್ದ ಆನಂದ್ ಮತ್ತು ಅಶ್ವಿನಿ ರಹಸ್ಯವಾಗಿ ಹೊರಗಿನಿಂದ ಗರ್ಭಿಣಿಯರನ್ನು ಕರೆತಂದು ಹೆಣ್ಣು ಭ್ರೂಣಹತ್ಯೆ ನಡೆಸುತ್ತಿದ್ದರು. ಕಳೆದ ಆರು ತಿಂಗಳಿಂದ ದಂಪತಿ ಈ ಕೃತ್ಯದಲ್ಲಿ ತೊಡಗಿದ್ದರು. ಇದಕ್ಕೆ ಖಾಸಗಿ ನರ್ಸಿಂಗ್ ಹೋಂನಲ್ಲಿ ಡಿ-ಗ್ರೂಪ್ ನೌಕರೆಯಾಗಿ ಕೆಲಸ ನಿರ್ವಹಿಸಿ ಅನುಭವ ಹೊಂದಿದ್ದ ಗಿರಿಜಮ್ಮ ಸಾಥ್ ನೀಡಿದ್ದರು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು.
ಸ್ಥಳೀಯರಿಂದ ಮಾಹಿತಿ: ಅದೇ ರೀತಿ ಭಾನುವಾರ ತಡರಾತ್ರಿ ಮೈಸೂರು ಮೂಲದ ಗರ್ಭಿಣಿಯೊಬ್ಬರು ವಸತಿ ಗೃಹಕ್ಕೆ ಆಗಮಿಸಿದ್ದರು. ಇದನ್ನು ನೋಡಿದ ಸ್ಥಳೀಯರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಮೋಹನ್ ಅವರಿಗೆ ರಾತ್ರಿ ೧೧ ಗಂಟೆಗೆ ವಿಷಯ ತಿಳಿಸಿದ್ದರು. ಕೂಡಲೇ ಅವರು ತಾಲೂಕು ಆರೋಗ್ಯಾಧಿಕಾರಿ ಡಾ.ಅರವಿಂದ್ ಅವರಿಗೆ ಮಾಹಿತಿ ನೀಡಿ ದಾಳಿ ನಡೆಸುವಂತೆ ಸೂಚಿಸಿದರು. ಡಾ.ಅರವಿಂದ್ ಅವರು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದಾಗ ಗರ್ಭಿಣಿಗೆ ಅಬಾರ್ಷನ್ ಮಾಡುವ ಪ್ರಕ್ರಿಯೆ ನಡೆದಿತ್ತು ಎನ್ನಲಾಗಿದೆ.
ನಂತರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಅವರು ಸ್ಥಳಕ್ಕೆ ಧಾವಿಸಿ ಬಂದರು. ವಸತಿ ಗೃಹದಲ್ಲಿ ಪರಿಶೀಲನೆ ನಡೆಸಿದಾಗ ಗರ್ಭಪಾತದ ಮಾತ್ರೆಗಳು, ಸಿರಿಂಜ್, ಡ್ರಿಪ್ ಸೇರಿ ಭ್ರೂಣ ಸುಗಮವಾಗಿ ಹೊರಬರುವಂತೆ ನೀಡುವ ಔಷಧಗಳು ಪತ್ತೆಯಾಗಿವೆ. ನಂತರ ಪೊಲೀಸರು ದಂಪತಿಯನ್ನು ಸ್ಥಳದಲ್ಲೇ ಬಂಧಿಸಿದರಲ್ಲದೆ, ಈ ಕೃತ್ಯಕ್ಕೆ ನೆರವಾಗಿದ್ದ ಶಶಿಕಲಾ ಮತ್ತು ಗಿರಿಜಾಂಬ ಅವರನ್ನೂ ವಶಕ್ಕೆ ತೆಗೆದುಕೊಂಡು ಕರೆದೊಯ್ದರು.
ಮೂರನೇ ಮಗುವೂ ಹೆಣ್ಣು: ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಬಂದಿದ್ದ ಗರ್ಭಿಣಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗುವಿನ ಬಯಕೆಯಲ್ಲಿದ್ದ ಕುಟುಂಬದವರು ಮತ್ತೆ ಹೆಣ್ಣು ಮಗು ಹುಟ್ಟುವ ವಿಷಯವನ್ನು ಬೇರೆಲ್ಲೋ ಸ್ಕ್ಯಾನಿಂಗ್ ಮಾಡಿಸಿ ತಿಳಿದುಕೊಂಡು ಗರ್ಭಪಾತಕ್ಕೆ ಇಲ್ಲಿಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಗರ್ಭಪಾತದ ಮಾತ್ರೆ ನೀಡಿ ಅರ್ಧಂಬರ್ಧ ಅಬಾರ್ಷನ್ ಆಗಿದ್ದ ಗರ್ಭಿಣಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಸುಗಮವಾಗಿ ಅಬಾರ್ಷನ್ ಆಗುವಂತೆ ಮಾಡಲಾಯಿತು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದರು.
ಜಿಲ್ಲಾಧಿಕಾರಿ, ಎಸ್ಪಿ ಭೇಟಿ: ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದ್ದ ವಸತಿ ಗೃಹಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಸೇರಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ತಾಲೂಕು ಆಸ್ಪತ್ರೆಯಲ್ಲಿ ಸಭೆ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು.
ತಾಲೂಕು ಆಸ್ಪತ್ರೆ ಹಿಂಭಾಗದಲ್ಲೇ ಈ ದಂಧೆ ನಡೆಯುತ್ತಿದ್ದರೂ ಯಾರೊಬ್ಬರಿಗೂ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಇದನ್ನು ನೋಡಿದರೆ ಹೆಣ್ಣು ಭ್ರೂಣ ಹತ್ಯೆ ದಂಧೆಯಲ್ಲಿ ಸ್ಥಳೀಯ ವೈದ್ಯರು ಮತ್ತು ಅಧಿಕಾರಿಗಳು ಭಾಗಿಯಾಗಿರುವ ಕುರಿತು ಶಂಕೆ ವ್ಯಕ್ತಪಡಿಸಿದರು.
ಹೆಣ್ಣು ಭ್ರೂಣ ಹತ್ಯೆ ಸಂಬಂಧ ಸ್ಥಳೀಯರಿಂದ ದೊರೆತ ಮಾಹಿತಿಯಂತೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಗರ್ಭಿಣಿಯೊಬ್ಬರಿಗೆ ಅಬಾರ್ಷನ್ ನಡೆಯುತ್ತಿದ್ದುದು ಕಂಡುಬಂದಿದ್ದು, ದಂಪತಿ ಸೇರಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೇರೆಲ್ಲೋ ಭ್ರೂಣಲಿಂಗ ಪತ್ತೆ ಮಾಡಿಸಿಕೊಂಡು ಬಂದು ಇಲ್ಲಿ ಗರ್ಭಪಾತ ಮಾಡಿಸಿಕೊಳ್ಳುತ್ತಿದ್ದರು. ಗರ್ಭಿಣಿ ಮತ್ತು ಕುಟುಂಬದವರ ವಿರುದ್ಧವೂ ಕಾನೂನು ಕ್ರಮಕ್ಕೆ ದೂರಿನಲ್ಲಿ ತಿಳಿಸಲಾಗಿದೆ.
- ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯ ಅಧಿಕಾರಿ
ಮೈಸೂರು ಮೂಲದ ಗರ್ಭಿಣಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದು, ಮೂರನೆಯದೂ ಹೆಣ್ಣಾಗಿದ್ದರಿಂದ ಅದನ್ನು ಗರ್ಭಪಾತ ಮಾಡಿಸಿ ತೆಗೆಸಲು ಇಲ್ಲಿಗೆ ಬಂದಿದ್ದಾರೆ. ಇಲ್ಲಿ ಯಾವುದೇ ಆಪರೇಷನ್ ನಡೆಸುತ್ತಿದ್ದುದರ ಬಗ್ಗೆ ಪತ್ತೆಯಾಗಿಲ್ಲ. ಗರ್ಭಿಣಿ ಎಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ರು. ಇಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುವ ಬಗ್ಗೆ ಮಾಹಿತಿ ನೀಡಿದವರು ಯಾರು ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ.
- ಡಾ.ಬೆಟ್ಟಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ