ಸಾರಾಂಶ
ಬೆಳಗ್ಗೆ 10:30ಕ್ಕೆ ಆರಂಭವಾಗಬೇಕಿದ್ದ ಮೆರವಣಿಗೆ ಎರಡು ಗಂಟೆ ತಡವಾಗಿ ಆರಂಭವಾಯಿತು. ರಾಮ ರಹೀಮ್ ನಗರ ಬಡಾವಣೆಯಿಂದ ಹೊಸ ಮಸೀದಿ ರಸ್ತೆ, ತಾಲೂಕು ಕ್ರೀಡಾಂಗಣ, ಪೇಟೆಬೀದಿ, ಹೊಸ ಮಸೀದಿ ಮೂಲಕ ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಸಿದ ಹಿಂದೂಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಸಂಜೆ ಶಿಂಷಾ ನದಿಯಲ್ಲಿ ವಿಸರ್ಜನೆ ಮಾಡಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಚನ್ನೇಗೌಡ ಬಡಾವಣೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಮತ್ತೆ ಮೂರು ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ಗುರುವಾರ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ನಡೆಯಿತು.ಪಟ್ಟಣದ ರಾಮ್ ರಹೀಮ್ ನಗರಕ್ಕೆ ಹೊಂದಿಕೊಂಡಿರುವ ಚನ್ನೇಗೌಡ ಬಡಾವಣೆಯ ಕೊಳಗೇರಿ ಪ್ರದೇಶ ಹಾಗೂ ಹೊಸ ಮಸೀದಿ ಪಕ್ಕ ಪ್ರತಿಷ್ಠಾಪನೆ ಮಾಡಲಾಗಿದ್ದ ಮೂರು ಗಣೇಶ ಮೂರ್ತಿಗಳ ಮೆರವಣಿಗೆ ನಂತರ ಶಿಂಷಾ ನದಿಯಲ್ಲಿ ಸಂಜೆ ವಿಸರ್ಜನೆ ಮಾಡಲಾಯಿತು.
ಬೆಳಗ್ಗೆ 10:30ಕ್ಕೆ ಆರಂಭವಾಗಬೇಕಿದ್ದ ಮೆರವಣಿಗೆ ಎರಡು ಗಂಟೆ ತಡವಾಗಿ ಆರಂಭವಾಯಿತು. ರಾಮ ರಹೀಮ್ ನಗರ ಬಡಾವಣೆಯಿಂದ ಹೊಸ ಮಸೀದಿ ರಸ್ತೆ, ತಾಲೂಕು ಕ್ರೀಡಾಂಗಣ, ಪೇಟೆಬೀದಿ, ಹೊಸ ಮಸೀದಿ ಮೂಲಕ ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಸಿದ ಹಿಂದೂಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಸಂಜೆ ಶಿಂಷಾ ನದಿಯಲ್ಲಿ ವಿಸರ್ಜನೆ ಮಾಡಿದರು.ಗಣೇಶ ಮೂರ್ತಿ ಮೆರವಣಿಗೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೆಲವು ಮುಸ್ಲಿಂ ಮುಖಂಡರು ತಮ್ಮ ಅಂಗಡಿ- ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದರು. ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ಹಿಂದೆ ಗಲಾಟೆ ನಡೆದಿದ್ದ ಮಸೀದಿ ಮುಂದೆ ಡಿಜೆ, ತಮಟೆ ಸೌಂಡ್ ನಿಲ್ಲಿಸಿ ಗಣೇಶನ ಮೆರವಣಿಗೆ ಸಾಗಿತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಏರಿಯಾದಲ್ಲಿ ಕರೆಂಟ್ ತೆಗೆಸಿದ್ದರು. ಮೆರವಣಿಗೆಯುದ್ಧಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಪೊಲೀಸರು ಮೆರವಣಿಗೆಯ ವಿಡಿಯೋ ಚಿತ್ರೀಕರಣ ಮಾಡಿಕೊಂಡರು.ಭದ್ರತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿಗಳಾದ ತಿಮ್ಮಯ್ಯ ಗಂಗಾಧರಸ್ವಾಮಿ, ಡಿವೈಎಸ್ಪಿ ಗಳಾದ ಕೃಷ್ಣಪ್ಪ, ಲಕ್ಷ್ಮೀನಾರಾಯಣ ಪ್ರಸಾದ್, ಶಿವಮೂರ್ತಿ, ಸಿಪಿಐ ವೆಂಕಟೇಗೌಡ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಠಾಣೆಗಳ ಪಿ.ಎಸ್. ಐ. ಒಳಗೊಂಡಂತೆ ಸುಮಾರು 500 ಮಂದಿ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸಿದ್ದರು.
ಗಣೇಶಮೂರ್ತಿ ವಿಸರ್ಜನೆ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗೃತ ಕ್ರಮವಾಗಿ ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಬೆಳಗ್ಗೆ 6 ಗಂಟೆವರೆಗೆ ಪಟ್ಟಣ ವ್ಯಾಪ್ತಿಯ ಸುತ್ತಾಮುತ್ತ 5 ಕಿ.ಮೀ ಎಲ್ಲಾ ಮಾದರಿಯ ಮದ್ಯದ ಅಂಗಡಿಗಳು, ಬಾರ್ ಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ, ಸಾಗಾಣಿಕೆ ಮತ್ತು ಶೇಖರಣೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.