ಲಿಂಗಾಯತರೆಲ್ಲರೂ ನಾವು ವಿರಕ್ತ ಮತ್ತು ಗುರು ಪರಂಪರೆ, ಬಸವಣ್ಣನವರ ತತ್ವಗಳನ್ನು ನಂಬಿದವರು. ಆದರೆ ವಚನಾನಂದ ಸ್ವಾಮೀಜಿಗಳು ಭಕ್ತರಿಗೆ ಆಶೀರ್ವಾದ ಮಾಡುವುದನ್ನು ಮರೆತು ಐಷಾರಾಮಿ ಜೀವನಕ್ಕೆ ಮೊರೆ ಹೋದರು. ಇಂತಹ ಸ್ವಾಮೀಜಿ ಪೀಠಕ್ಕೆ ಕರೆತಂದಿದ್ದಕ್ಕೆ ಸಮಾಜದವರಲ್ಲಿ ಕ್ಷಮೆ ಕೋರುತ್ತೇವೆ ಎಂದು ಟ್ರಸ್ಟಿ ಮಹೇಶ ಹಾವೇರಿ ಹೇಳಿದರು.

ಹಾವೇರಿ: ಡಂಬಾಚಾರಕ್ಕೆ ಮತ್ತೊಂದು ಹೆಸರೇ ವಚನಾನಂದ ಸ್ವಾಮೀಜಿ. ಹರಿಹರ ಪಂಚಮಸಾಲಿ ಪೀಠಕ್ಕೆ ಅವರನ್ನು ನಾವೇ ಕರೆದು ಪಟ್ಟಕ್ಕೆ ಏರಿಸಿ, ಈಗ ನಾವೇ ಉಚ್ಚಾಟನೆ ಮಾಡುವ ಪರಿಸ್ಥಿತಿ ಬಂದಿರುವುದು ಬೇಸರ ಮೂಡಿಸಿದೆ. ಆದರೆ, ಅವರ ನಡವಳಿಕೆಯಿಂದ ಬೇಸತ್ತು ಉಚ್ಚಾಟನೆ ಮಾಡಲಾಗಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹರಿಹರ ಪಂಚಮಸಾಲಿ ಪೀಠದ ಟ್ರಸ್ಟಿ ಮಹೇಶ ಹಾವೇರಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿ ಸಮಾಜವನ್ನು ಸಂಘಟನೆ ಮಾಡದೇ ಪೀಠದಲ್ಲಿದ್ದುಕೊಂಡು ವೈಯಕ್ತಿಕ ಕೆಲಸಗಳಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಅತಿಯಾಗಿ ವಿದೇಶಿ ಪ್ರವಾಸ ಮಾಡುವುದು, ಸಿನಿಮಾ ನಟ, ನಟಿಯರ ಜತೆಗೆ ಫೋಟೋ ತೆಗೆಸಿಕೊಂಡು ಮಠದಲ್ಲಿ ಹಾಕುವುದು, ರಾಣಿ ಚೆನ್ನಮ್ಮನ ಫೋಟೋ ಬಿಸಿಲಿನಲ್ಲಿ ಹಾಕುವುದು, ರಾಜಕಾರಣಿಗಳ ಜತೆಗೆ ಅತಿಯಾಗಿ ಒಡನಾಟ ಸೇರಿದಂತೆ ಸ್ವಾಮೀಜಿಗಳು ಹೇಗೆ ನಡೆದುಕೊಳ್ಳಬೇಕಿತ್ತೋ ಆ ರೀತಿ ನಡೆದುಕೊಳ್ಳದ್ದರಿಂದ ಬೇಸತ್ತು ಎಲ್ಲ ಟ್ರಸ್ಟಿಗಳು ಸ್ವಾಮೀಜಿಗಳನ್ನು ಪೀಠದಿಂದ ಉಚ್ಚಾಟನೆಗೆ ನಿರ್ಧಾರ ಕೈಗೊಂಡಿದ್ದಾರೆ ಎಂದರು.

ಲಿಂಗಾಯತರೆಲ್ಲರೂ ನಾವು ವಿರಕ್ತ ಮತ್ತು ಗುರು ಪರಂಪರೆ, ಬಸವಣ್ಣನವರ ತತ್ವಗಳನ್ನು ನಂಬಿದವರು. ಆದರೆ, ಸ್ವಾಮೀಜಿಗಳು ಅದನ್ನು ಬಿಟ್ಟು ಭಕ್ತರಿಗೆ ಆಶೀರ್ವಾದ ಮಾಡುವುದನ್ನು ಮರೆತು ಐಷಾರಾಮಿ ಜೀವನಕ್ಕೆ ಮೊರೆ ಹೋದರು. ವಿದೇಶಿಯರ ಕರೆದುಕೊಂಡು ಬಂದು ಹೋಳಿ ಆಡಿದರು. ಇದು ನಮ್ಮ ಸಂಸ್ಕೃತಿ ಅಲ್ಲ. ಆಚಾರ, ವಿಚಾರ ಮರೆತು ಸಿನಿಮಾ, ರಾಜಕಾರಣಿಗಳನ್ನು ಕರೆಸಿ ಹುಚ್ಚಾಟ ಆರಂಭಿಸಿದರು. ಅನೇಕ ಬಾರಿ ಎಚ್ಚರಿಸಿದರೂ ಯಾರ ಮಾತೂ ಕೇಳಲಿಲ್ಲ. ಅವರ ಸಮ್ಮುಖದಲ್ಲೇ ಎಲ್ಲ ವ್ಯವಹಾರ ನಡೆದರೂ, ಆಗ ಕೇಳದವರು, ಈಗ ಲೆಕ್ಕ ಕೇಳಿ ದಾರಿ ತಪ್ಪಿಸುವ ಕೆಲಸ ಆರಂಭಿಸಿದರು. ಮುಗ್ಧ ಭಕ್ತರ ಕಟ್ಟಿಕೊಂಡು ಟ್ರಸ್ಟ್ ವಿರುದ್ಧ ಎತ್ತಿಕಟ್ಟಿದ್ದಾರೆ. ಇಂತಹ ಸ್ವಾಮೀಜಿ ಪೀಠಕ್ಕೆ ಕರೆತಂದಿದ್ದಕ್ಕೆ ಸಮಾಜದವರಲ್ಲಿ ಕ್ಷಮೆ ಕೋರುತ್ತೇವೆ ಎಂದು ಭಾವುಕರಾದರು.

ಈ ಘಟನೆಯಿಂದ ಪೀಠದ ಭಕ್ತರಿಗೆ ನೋವು ಉಂಟು ಮಾಡಿದೆ. ಶ್ವಾಸ ಪೀಠ ಅಥವಾ ಪಂಚಮಸಾಲಿ ಪೀಠ ಎರಡರಲ್ಲಿ ಒಂದನ್ನು ಬಿಡಿ ಎಂದಾಗ ಲೆಕ್ಕ ಕೊಡಿ ಎಂದು ಗಲಾಟೆ ಎಬ್ಬಿಸಿದರು. ಪೀಠದ ನಿಯಮ ಮೀರಿದ್ದರಿಂದ ಉಚ್ಚಾಟನೆ ಮಾಡಲಾಗಿದೆ. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲಲ್ಲ. ಹೊಸ ಸ್ವಾಮೀಜಿ ನೇಮಕ ಮಾಡುವ ಕುರಿತು ಹಿರಿಯರೊಂದಿಗೆ ಚರ್ಚಿಸಲಾಗುವುದು ಎಂದರು.

ರಾಜಣ್ಣ ಪಾಟೀಲ ಮಾತನಾಡಿ, ರಾಜಕಾರಣಿಗಳಿಗೆ ಟಿಕೆಟ್ ಕೊಡಿಸಲು ಓಡಾಟ, ಶೋಕಿ ಜೀವನ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆ, ಕುಲಪತಿಗಳ ನೇಮಕಾತಿಗೆ ಡೀಲ್ ಮಾಡಲು ಪೀಠ ದುರ್ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತಮ್ಮ ಹುಲ್ಲತ್ತಿ, ರಾಜ್ಯ ಉಪಾಧ್ಯಕ್ಷ ಶಂಕರ ಬಿಸರಳ್ಳಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಗಡಿ, ಕಾನೂನು ಸಲಹೆಗಾರ ಸೋಮಶೇಖರ ಕೊತಂಬ್ರಿ, ರಾಜಣ್ಣ ಪಾಟೀಲ, ನಿಜಲಿಂಗಪ್ಪ ಮುದಿಯಣ್ಣವರ, ಜಗದೀಶ ಕನವಳ್ಳಿ, ಸದಾನಂದ ಹಾದಿಮನಿ, ಬಸವರಾಜ ಹಾವಕ್ಕನವರ, ಜಗದೀಶ ಕನವಳ್ಳಿ ಇತರರು ಇದ್ದರು.

ಬಹಿರಂಗವಾಗಿ ಲೆಕ್ಕ ಕೊಡಲು ಆಗದು: ಸರ್ಕಾರದಿಂದ ₹25 ಕೋಟಿ ಅನುದಾನ ಪೀಠಕ್ಕೆ ಬಂದಿದೆ. ಪೀಠದ ಭಕ್ತರು ₹10ರಿಂದ ಹಿಡಿದು ₹50 ಲಕ್ಷ ವರೆಗೆ ದೇಣಿಗೆ ಕೊಟ್ಟಿದ್ದಾರೆ. ಕೆಲವರು ಗುಪ್ತದಾನ ಕೊಟ್ಟಿದ್ದಾರೆ. ಎಲ್ಲದಕ್ಕೂ ಲೆಕ್ಕ ಇದೆ. ಬಹಿರಂಗವಾಗಿ ಎಲ್ಲವನ್ನೂ ಲೆಕ್ಕ ಕೊಡಲು ಆಗದು. ಪೀಠದ ಪರಿಮಿತಿಯಲ್ಲಿ ಬಂದು ಭಕ್ತರು ಕೇಳಿದರೆ ಎಲ್ಲ ಲೆಕ್ಕ ಕೊಡಲು ಈಗಲೂ ಸಿದ್ಧವಿದ್ದೇವೆ ಎಂದು ಹರಿಹರ ಪಂಚಮಸಾಲಿ ಪೀಠದ ಹಿರಿಯ ಧರ್ಮದರ್ಶಿ ಪಿ.ಡಿ. ಶಿರೂರ ಹೇಳಿದರು.