ಸರ್ಕಾರಿ ಯೋಜನೆ ಅನುಷ್ಠಾನದಲ್ಲಿ ಶ್ರಮಿಸುವ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ

| Published : Jan 20 2025, 01:31 AM IST

ಸರ್ಕಾರಿ ಯೋಜನೆ ಅನುಷ್ಠಾನದಲ್ಲಿ ಶ್ರಮಿಸುವ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಆಡಳಿತಕ್ಕೆ ಬರುವ ಪ್ರತಿ ಸರ್ಕಾರಗಳ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಶ್ರಮಿಸುವ ಶಿಕ್ಷಕರ ಸಮೂಹಕ್ಕೆ ಮತ್ತೊಂದು ಕಾರ್ಯಭಾರ ವಹಿಸಿ ಆದೇಶ ಮಾಡಿರುವುದರಿಂದ ರಾಜ್ಯ ಸರ್ಕಾರ ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.

- ವಿದ್ಯಾರ್ಥಿ ವೇತನ ನೀಡಲು ಶಿಕ್ಷಕರ ನೋಂದಣಿ । ಗೊಂದಲದಲ್ಲಿ ಶಿಕ್ಷಕರು

ಕನ್ನಡಪ್ರಭ ವಾರ್ತೆ ಕಡೂರು

ಆಡಳಿತಕ್ಕೆ ಬರುವ ಪ್ರತಿ ಸರ್ಕಾರಗಳ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಶ್ರಮಿಸುವ ಶಿಕ್ಷಕರ ಸಮೂಹಕ್ಕೆ ಮತ್ತೊಂದು ಕಾರ್ಯಭಾರ ವಹಿಸಿ ಆದೇಶ ಮಾಡಿರುವುದರಿಂದ ರಾಜ್ಯ ಸರ್ಕಾರ ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.

ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಈಗಾಗಲೇ ಬರುವ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಪರೀಕ್ಷೆ ಸಿದ್ಧತೆ ನಡೆಸುತ್ತಿರುವ ಶಿಕ್ಷಕರಿಗೆ ಸ್ಕಾಲರ್ ಶಿಪ್ ನೀಡಿಕೆಯ ಹೊಸ ಜವಾಬ್ದಾರಿ ನೀಡಿರುವುದರಿಂದ ಕಂಗಾಲಾಗಿದ್ದಾರೆ. ಹಿಂದಿನಂತೆ ಸರ್ಕಾರಿ, ಅನುದಾನಿತ, ಅನುದಾನ ರಹಿತ 1-10ನೇ ತರಗತಿವರೆಗೂ ಸಮಾಜ ಕಲ್ಯಾಣ ಇಲಾಖೆಯೇ ಮಕ್ಕಳಿಗೆ ವಿದ್ಯಾರ್ಥಿ ವೇತನ ಪಾವತಿ ಮಾಡುತ್ತಿತ್ತು. ಆದರೆ ಇದೀಗ ಇಲಾಖೆ ತನ್ನ ಕಾರ್ಯಭಾರವನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸಿ ನಿರುಮ್ಮಳವಾಗಿದೆ.

ಶಿಕ್ಷಣ ಇಲಾಖೆ ಆಯುಕ್ತರು ನೀಡಿರುವ ಆದೇಶದಂತೆ 1- 10ನೇ ತರಗತಿ ಮಕ್ಕಳಿಗೆ ಸ್ಕಾಲರ್ ಶಿಪ್ ಪೊರ್ಟಲ್‍ನಲ್ಲಿ ಕಡ್ಡಾಯ ವಾಗಿ ಶಾಲೆಯ ಮುಖ್ಯಶಿಕ್ಷಕರು ಅಥವಾ ಸಹ ಶಿಕ್ಷಕರು ಐಎನ್‍ಒ (ಇನ್ಸಿಟ್ಯೂಟ್ ನೋಡಲ್ ಅಧಿಕಾರಿ) ಎಂದು ನೇಮಕ ಮಾಡಿ ಸಮಾಜ ಕಲ್ಯಾಣ ಇಲಾಖೆ ಪೊರ್ಟ್‍ಲ್‍ನಲ್ಲಿ ಐಎನ್‍ಒಗಳು ಲಾಗಿನ್ ಆಗಿ ಈ ಕೆವೈಸಿ ಮತ್ತು ಬಯೋಮೆಟ್ರಿಕ್ ಮಾಡಿಸಬೇಕು. ಈ ಆದೇಶ ನೀಡಿದ್ದರ ಪರಿಣಾಮ ನೋಂದಣಿಗಾಗಿ ಇಲಾಖೆ ಮುಂದೆ ಶಿಕ್ಷಕರು ಸರತಿ ಸಾಲಿನಲ್ಲಿ ನಿಂತು ಹೈರಾಣಾಗುತ್ತಿದ್ದಾರೆ. ಇದು ರಾಜ್ಯಾದ್ಯಂತ ಸಮಸ್ಯೆಯಾಗಿದ್ದು, ಕಡೂರು ತಾಲೂಕಿನಲ್ಲಿ ಎರಡು ಶೈಕ್ಷಣಿಕ ವಲಯಗಳಾದ ಕಡೂರು-ಬೀರೂರು ಶೈಕ್ಷಣಿಕ ವಲಯಗಳ ಸುಮಾರು 550 ಕ್ಕೂ ಹೆಚ್ಚಿನ ಶಾಲೆಗಳ 36 ಸಾವಿರಕ್ಕೂ ಹೆಚ್ಚಿನ ಮಕ್ಕಳು 1- 10ನೇ ತರಗತಿ ಯಲ್ಲಿದ್ದಾರೆ. ಇವರಲ್ಲಿ ಪರಿಶಿಷ್ಟ ಜಾತಿ ಮಕ್ಕಳನ್ನು ಗುರುತಿಸಿ ಐಎನ್‌ಒಗಳು ಸಮಾಜ ಕಲ್ಯಾಣ ಇಲಾಖೆಗೆ ತೆರಳಿ ಪ್ರತಿಯೊಬ್ಬ ಮಕ್ಕಳ ಮಾಹಿತಿಯನ್ನು ಪೊರ್ಟಲ್‍ನಲ್ಲಿ ನೋಂದಾಯಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಅದರಂತೆ ಮುಖ್ಯ ಶಿಕ್ಷಕರು ಅಥವಾ ಓರ್ವ ಶಿಕ್ಷಕರು ಐಎನ್‍ಒ ಪತ್ರ ಹಿಡಿದು ಇಲಾಖೆಗೆ ತೆರಳಿ ನೋಂದಣಿಗೆ ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಶಿಕ್ಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶಿಕ್ಷಕರು ಆಡಳಿತಕ್ಕೆ ಬರುವ ಎಲ್ಲ ಸರ್ಕಾರಗಳ ಯೋಜನೆಗಳನ್ನು ಯಶಸ್ವಿ ಯಾಗಿ ಜಾರಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಭವಿಷ್ಯದ ಪ್ರಜೆಗಳನ್ನು ತಯಾರು ಮಾಡುವ ಜೊತೆಗೆ ಈಗಾಗಲೇ ಮತ ದಾರರ ಪಟ್ಟಿ ಪರಿಷ್ಕರಣೆ, ಜನಗಣತಿ, ಚುನಾವಣೆ, ಬಿಸಿಯೂಟ, ಬಿಎಲ್‍ಒ, ನಿರಂತರ ಸಭೆ ಮತ್ತಿತರ ಕಾರ್ಯಗಳನ್ನು ಮಾಡುವ ಶಿಕ್ಷಕರು ತೀವ್ರ ಒತ್ತಡ ಅನುಭವಿಸುತ್ತಿದ್ದಾರೆ. ಈವರೆಗೂ ಸಮಾಜ ಕಲ್ಯಾಣ ಇಲಾಖೆ ಮಾಡುತ್ತಿದ್ದ ಕೆಲಸವನ್ನು ಶಿಕ್ಷಣ ಇಲಾಖೆ ಹೆಗಲಿಗೆ ಹಾಕಿದ್ದು ಏಕೆ? ಈಗ ಆಗಿರುವ ಸಮಸ್ಯೆ ಏನೆಂದು ಶಿಕ್ಷಕರು ಪ್ರಶ್ನಿಸಿದ್ದಾರೆ.

ಶಿಕ್ಷಣ ಇಲಾಖೆ ಇಂತಹ ವಿಷಯಗಳ ಬಗ್ಗೆ ಶಿಕ್ಷಕರ ಸಂಘಟನೆಗಳ ಜೊತೆ ಚರ್ಚಿಸಬೇಕಿತ್ತು. ಈ ನಿಟ್ಟಿನಲ್ಲಿ ಸಂಭಂಧಿಸಿದ. ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಕ ಸಮೂಹ ಆಗ್ರಹಿಸಿದೆ.

ಈ ಹೊಸ ಕ್ರಮದಂತೆ ಸ್ಕಾಲರ್‌ಶಿಪ್‌ಗೆ ಈ ವರ್ಷದಿಂದ ಸೇರ್ಪಡೆಯಾಗ ಬೇಕಾದ ಮಕ್ಕಳನ್ನು ಗುರುತಿಸಿ ಈ ನೋಂದಾಯಿತ ಶಿಕ್ಷಕರೇ ಪೋರ್ಟಲ್‌ನಲ್ಲಿ ಸೇರ್ಪಡೆ ಗೊಳಿಸಬೇಕಾಗುತ್ತದೆ. -- ಹೇಳಿಕೆ 1--

1- 10ನೇ ತರಗತಿ ವರೆಗೆ ವಿದ್ಯಾರ್ಥಿ ವೇತನ ನೀಡಲು ಶಿಕ್ಷಣ ಇಲಾಖೆ ಐಎನ್‍ಒಗಳು (ಶಿಕ್ಷಣ ಇಲಾಖೆಯಿಂದ ನೇಮಕ ಮಾಡಿದ ಶಿಕ್ಷಕರು) ಸಮಾಜ ಕಲ್ಯಾಣ ಇಲಾಖೆಯಲ್ಲಿ ನೋಂದಣಿಣೆಯಾಗಿ ಆಯಾ ಶಾಲೆಗಳ ಮಕ್ಕಳನ್ನು ಗುರುತಿಸಿ ನೋಂದಾಯಿಸಿದ ಮಕ್ಕಳಿಗೆ ಇಲಾಖೆ ಸ್ಕಾಲರ್ ಶಿಪ್ ನೀಡುತ್ತದೆ. ಹಾಗಾಗಿ ಐಎನ್‍ಒ ನೋಂದಣಿಗೆ ಶಿಕ್ಷಕರು ನಮ್ಮ ಇಲಾಖೆಗೆ ಬಂದಿದ್ದಾರೆ. ಇದೇ ಮೊದಲ ಭಾರಿಗೆ ಐಎನ್‍ಒ ನೋಂದಣಿ ನಡೆಯುತ್ತಿದೆ.

ನಟರಾಜ್

ತಾಲೂಕು ಸಮಾಜ ಕಲ್ಯಾಣಾಧಿಕಾರಿ

-- ಹೇಳಿಕೆ 2.--

ಸರಕಾರದ ತೀರ್ಮಾನದಂತೆ ಇಲಾಖೆ ಆದೇಶವನ್ನು ಪಾಲಿಸಲೇ ಬೇಕು. ಪ್ರತಿಯೊಂದು ಶಾಲೆಯಲ್ಲಿ ಐಎನ್‍ಒ ಗಳನ್ನು ಗುರುತಿಸಿ ಸಮಾಜ ಕಲ್ಯಾಣ ಇಲಾಖೆ ಪೊರ್ಟಲ್‍ನಲ್ಲಿ ನೋಂದಣಿಗೆ ಕಳುಹಿಸಿದ್ದೇವೆ. ಸ್ವಲ್ಪಮಟ್ಟಿಗೆ ಗೊಂದಲವಾಗಿದ್ದು ಎಲ್ಲವೂ ಸರಿಯಾಗಲಿದೆ.-- ಸಿದ್ದರಾಜನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ, ಕಡೂರು

--

18ಕೆಕೆಡಿಯು1.

ಕಡೂರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಪೊರ್ಟಲ್‍ನಲ್ಲಿ ನೋಂದಣಿ ಮಾಡಿಸಲು ಶಿಕ್ಷಕರು ಸರತಿ ಸಾಲಿನಲ್ಲಿ ನಿಂತಿರುವುದು.

19ಕೆಕೆಡಿಯು1ಎ. ಬಿಇಒ ಸಿದ್ದರಾಜು ನಾಯ್ಕ್.