ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಚಿತ್ರದುರ್ಗ ನಗರದಲ್ಲಿ ಕೋಟ್ಯಂತರ ರು. ವೆಚ್ಚ ಮಾಡಿ ನಿರ್ಮಿಸಲಾದ ಅವೈಜ್ಞಾನಿಕ ಡಿವೈಡರ್‌ಗಳ ತೆರವುಗೊಳಿಸುವ ಮತ್ತೊಂದು ಸುತ್ತಿನ ಕಾರ್ಯಾಚರಣೆ ನಡೆಯಲಿದೆಯೇ ?ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಇಂತಹದ್ದೊಂದು ಸುಳಿವು ನೀಡಿದೆ.
ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ಬೇಜವಾಬ್ದಾರಿ ರಸ್ತೆ ನಿರ್ವಹಣೆಯಿಂದ ಅಪಘಾತಗಳು ಉಂಟಾಗಿ, ಸಾವು ನೋವು ಸಂಭವಿಸಿದರೆ, ಸಂಬಂಧಪಟ್ಟ ಅಧಿಕಾರಿಯ ಮೇಲೆ ಎಫ್ಐಆರ್ ದಾಖಲಿಸಲಾಗುವುದು. ನಿರ್ಲಕ್ಷ್ಯತನ ಕಂಡು ಬಂದರೆ, ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನೀಡಿರುವ ಎಚ್ಚರಿಕೆ ಡಿವೈಡರ್‌ನ ಪ್ರಧಾನವಾಗಿ ಕೇಂದ್ರೀಕರಿಸಿದೆ.ಈ ಹಿಂದೆ ನಡೆದ ಹಲವು ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಡಿವೈಡರ್ ಸಂಗತಿ ಪ್ರಸ್ತಾಪವಾಗಿತ್ತಾದರೂ ಅವೈಜ್ಞಾನಿಕವೆಂಬ ಅಂಶ ಅಧಿಕಾರಿಗಳು ನಿರಾಕರಿಸಿದ್ದರು. ಆದರೆ ರಾಜ್ಯ ಮಟ್ಟದ ವಿಚಕ್ಷಣ ದಳ ಚಿತ್ರದುರ್ಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ತರುವಾಯ ಡಿವೈಡರ್‌ಗಳು ಅವೈಜ್ಞಾನಿಕವೆಂಬ ಸಂಗತಿ ಸಾಬೀತಾಗಿತ್ತು. ಅವೈಜ್ಞಾನಿಕವೆಂಬ ವಾಸ್ತವವ ಕನ್ನಡಪ್ರಭ ಸರಣಿ ರೂಪದಲ್ಲಿ ಪ್ರಕಟಿಸಿತ್ತು.
ಗುರುವಾರ ನಡೆದ ಸಭೆಯಲ್ಲಿ ತುಸು ಗರಂ ಆಗಿದ್ದ ಜಿಲ್ಲಾಧಿಕಾರಿ ವೆಂಕಟೇಶ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮದ ಚಾಟಿ ಬೀಸಿದರು. ರಸ್ತೆ ಸುರಕ್ಷತಾ ಸಮಿತಿ ನೀಡಿದ ಸೂಚನೆಗಳನ್ನು ಅಧಿಕಾರಿಗಳು ತಪ್ಪದೆ ಪಾಲಿಸಬೇಕು. ಜಿಲ್ಲೆಯಲ್ಲಿ ಉಂಟಾಗುತ್ತಿರುವ ಅಪಘಾತಗಳ ಪ್ರಮಾಣ ಇಳಿಕೆಯಾಗಬೇಕು. ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ರಸ್ತೆಗಳ ಸುರಕ್ಷತಾ ಲೆಕ್ಕ ಪರಿಶೋಧನೆಯನ್ನು ಮಾಡಿಸಬೇಕು. ನಿರ್ವಹಣೆ ತೊಂದರೆಯಿಂದ ರಸ್ತೆಯಲ್ಲಿ ಅಪಘಾತ ಉಂಟಾದರೆ, ಸಂಬಂಧಿಸಿದ ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆ ಹೊಣೆ ಹೊತ್ತ ಇಲಾಖೆ ಹಾಗೂ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.ಮುಂದಿನ ಮೂರು ತಿಂಗಳ ನಂತರ ಸಭೆ ಸೇರುವ ವೇಳೆಗೆ ಪರಿಸ್ಥಿತಿ ಸುಧಾರಣೆ ಆಗಿರಬೇಕು. ಎಲ್ಲಾ ಇಲಾಖೆಗಳಲ್ಲಿ ರಸ್ತೆ ನಿರ್ಮಾಣದ ಕಾಮಗಾರಿಗೆ ಟೆಂಡರ್ ನೀಡುವ ವೇಳೆ, ರಸ್ತೆ ಸುರಕ್ಷತೆಯನ್ನು ಧ್ಯಾನದಲ್ಲಿರಿಸಿ ನಿಯಮಗಳನ್ನು ವಿಧಿಸಬೇಕು. ವಸ್ತುಗಳ ಸಾಗಣೆ ಮಾಡುವ ವಾಹನಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ಅವಕಾಶ ನೀಡಬಾರದು. ಸಾರಿಗೆ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ನಿಗಾವಹಿಸಬೇಕು. ರಸ್ತೆ ಹಾಗೂ ವಾಹನ ಸಾಮರ್ಥ್ಯಕ್ಕಿಂತ ಅಧಿಕ ಭಾರ ಹೊತ್ತು ಸಾಗುವ ಅದಿರು ಸಾಗಾಟ ಲಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ ಸೂಚನೆ ನೀಡಿದರು.
ವಾರ್ಷಿಕ 500 ಜನರ ಸಾವು: ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ 500ಕ್ಕೂ ಅಧಿಕ ಅಮಾಯಕ ಜನರು ಸಾವಿಗೀಡಾಗುತ್ತಿದ್ದಾರೆ. ಅವೈಜ್ಞಾನಿಕ ರಸ್ತೆ ನಿರ್ಮಾಣ, ಸಂಚಾರ ಚಿಹ್ನೆಗಳು ಇಲ್ಲದಿರುವುದು. ವಿವಿಧ ಇಲಾಖೆಗಳ ಸಮನ್ವಯತೆ ಕೊರತೆ. ಸಂಬಂಧ ಪಟ್ಟ ನಿರ್ವಹಣೆಯ ಹೊಣೆ ಹೊತ್ತ ಇಲಾಖೆ ಅಧಿಕಾರಿಗಳು ಹಾಗೂ ವಾಹನ ಚಾಲಕರ ನಿರ್ಲಕ್ಷ್ಯ ಕಾರಣ. ಹಾಗಾಗಿ ಚಿತ್ರದುರ್ಗ ಜಿಲ್ಲೆ ಅಪಘಾತದಲ್ಲಿ ಸಾವು ನೋವು ಉಂಟಾಗುವುದಕ್ಕೆ ಅಪಖ್ಯಾತಿಗಳಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮಮೇಂದ್ರ ಕುಮಾರ್ ಮೀನಾ ಬೇಸರ ವ್ಯಕ್ತ ಪಡಿಸಿದರು.ಹಿರಿಯೂರಿನಿಂದ ಭರಮಸಾಗರದವರೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ಅಪಘಾತ ಸಂಭವಿಸಿ ಜನರು ಸಾವಿಗೆ ಈಡಾಗುತ್ತಿದ್ದಾರೆ. ಇದರೊಂದಿಗೆ ಹಿರಿಯೂರು-ಬಳ್ಳಾರಿ ಹೆದ್ದಾರಿ, ಚಿತ್ರದುರ್ಗ-ಶಿವಮೊಗ್ಗ ಹೆದ್ದಾರಿಗಳು ಸಹ ಅಪಘಾತ ವಲಯಗಳನ್ನು ಹೊಂದಿವೆ. ರಸ್ತೆ ನಿರ್ಮಾಣ ಮಾಡುವುದು ಮಾತ್ರವಲ್ಲದೇ, ರಸ್ತೆ ಸುರಕ್ಷತೆ ಕುರಿತು ಗಮನಹರಿಸುವುದು ಮುಖ್ಯವಾಗಿದೆ. ವಾಹನಗಳ ಮಾಲೀಕರು ರಸ್ತೆ ತೆರಿಗೆ, ಹೆದ್ದಾರಿ ಶುಲ್ಕ ಸೇರಿದಂತೆ ಇತ್ಯಾದಿ ಎಲ್ಲಾ ತೆರಿಗೆ ಪಾವತಿಸುತ್ತಾರೆ. ಹಾಗಾಗಿ ರಸ್ತೆಯಲ್ಲಿ ಸುರಕ್ಷಿತವಾಗಿ ಚಲಿಸಲು ಅನುಕೂಲ ಮಾಡಿಕೊಡಬೇಕು. ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಯನ್ನು ಸಂಬಂಧಪಟ್ಟ ಇಲಾಖೆಯವರು ಯಾವುದೇ ಇಂಜಿನಿಯರಿಂಗ್ ತೊಂದರೆಗಳು ಬಾರದಂತೆ ನಿರ್ಮಿಸಬೇಕು.
ಚಿತ್ರದುರ್ಗ ನಗರದಲ್ಲಿ ಹಾದು ಹೋಗಿರುವ ಹಳೆಯ ಹೆದ್ದಾರಿ ರಸ್ತೆ ನಿರ್ವಹಣೆ ಇಲ್ಲದೇ ಅಪಘಾತ ಪ್ರಮಾಣ ಹೆಚ್ಚಾಗುತ್ತಿದೆ. ಈಗಾಗಲೇ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದೆ. ತಕ್ಷಣವೇ ಹೆದ್ದಾರಿ ಮಧ್ಯದ ಡಿವೈಡರ್‌ಗಳಲ್ಲಿ ಬೆಳೆದಿರುವ ಗಿಡಗಳನ್ನು ಕಡಿಯುವ ಕೆಲಸವಾಗಬೇಕು. ಇಲ್ಲವಾದರೆ ಚಾಲಕರಿಗೆ ರಸ್ತೆ ಸಂಚಾರಿ ಫಲಕಗಳು, ಯೂಟರ್ನ್ ಸ್ಥಳಗಳು ಗೊತ್ತಾಗದೆ ಅಪಘಾತ ಸಂಭವಿಸುತ್ತದೆ. ಕಳೆದ ತಿಂಗಳಿನಲ್ಲಿ ದಾವಣಗೆರೆ ರಸ್ತೆಯಲ್ಲಿನ ಭೋವಿ ಮಹಾಸಂಸ್ಥಾನ ಮಠದ ಸಮೀಪದ ಯೂಟರ್ನ್ ಬಳಿ ಇನೋವಾ ಕಾರು, ತಿರುವು ಪಡೆಯುತ್ತಿದ್ದ ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಎಸ್ಪಿ ಧರ್ಮಮೇಂದ್ರ ಕುಮಾರ್ ಮೀನಾ ತಿಳಿಸಿದರು.ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್.ಎಂ.ಕಾಳೆಸಿಂಘೆ, ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ನಗರಸಭೆ ಆಯುಕ್ತೆ ಎಂ.ರೇಣುಕಾ ಸೇರಿದಂತೆ ಹೆದ್ದಾರಿ ಪ್ರಾಧಿಕಾರ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
----------- 7 ಸಿಟಿಡಿ2--
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾ್ಂಗಣದಲ್ಲಿ ಗುರುವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.