ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಹದಿನೈದು ನಿಮಿಷ ಕಾಲ ಆಸ್ಪತ್ರೆಯ ವಿದ್ಯುತ್ ಪೂರೈಕೆ ಕೈ ಕೊಟ್ಟು ಐಸಿಯೂ ರೋಗಿಗಳು ಪರದಾಡಿದ ಪ್ರಸಂಗ ಇನ್ನೂ ನೆನಪಲ್ಲಿರುವಾಗಲೇ ಕಲಬುರಗಿ ನಗರದಲ್ಲಿರುವ ಜಿಮ್ಸ್ ವೈದ್ಯ ವಿದ್ಯಾಲಯ ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು ನಡೆದಿದೆ.ಜಿಮ್ಸ್ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಹಠಾತ್ ಆಗಿ ಲಿಫ್ಟ್ ನಿಂತು ಅದರಲ್ಲಿದ್ದಂತಹ 9 ಜನರು ಒಂದುವರೆ ಗಂಟೆ ಕಾಲ ಲಿಫ್ಟ್ ಒಳಗೆ ಸಿಲುಕಿ ಪಡಬಾರದ ಯಾತನೆ ಪಟ್ಟು ಜೀವಭಯದಲ್ಲಿ ಕೈಯಲ್ಲೇ ಜೀವ ಹಿಡಿದು ನಿಂತು ಕಂಗಾಲಾದ ಘಟನೆ ಬೆಳಕಿಗೆ ಬಂದಿದೆ.
ನೆಲ ಮಹಡಿಯಿಂದ 6 ನೇ ಮಹಡಿಗೆ ಹೊರಟಿದ್ದ ಸಿಬ್ಬಂದಿಗಳು ಲಿಫ್ಟ್‌ನಲ್ಲಿ ಸಿಲುಕಿ ಪರದಾಡಿದ್ದಾರೆ.ಬೆಳಿಗ್ಗೆ 10 ಗಂಟೆಯಿಂದ 11. 30 ಗಂಟೆಯವರೆಗೆ ಲಿಫ್ಟ್ ನಲ್ಲಿ ಸಿಲುಕಿ ತೀವ್ರ ಪರದಾಟ ಮಾಡಿದಾಗ ವಿಷಯ ತಿಳಿದು ಇವರ ರಕ್ಷಣೆ ಕಾರ್ಯಾಚರಣೆ ನಡೆಸಲಾಗಿದ್ದು, ಜಿಮ್ಸ್ ಗೋಡೆ ಒಡೆದು ಲಿಫ್ಟ್ ಬಾಗಿಲು ಅನ್ ಲಾಕ್ ಮಾಡಿ ಒಳಗೆ ಸಿಲುಕಿದ್ದವರನ್ನು ಹೊರಗೆ ತೆಗೆಯಲಾಗಿದೆ.
ಜಿಮ್ಸ್ ಆಸ್ಪತ್ರೆಯ 3 ನೇ ಫ್ಲೋರ್ ನಲ್ಲಿ ಈ ಘಟನೆ ಸಂಭವಿಸಿದೆ. ಬರೋಬ್ಬರಿ ಒಂದೂವರೆ ಗಂಟೆಕಾಲ 9 ಜನ ಸಿಬ್ಬಂದಿ ಲಿಫ್ಟ್‌ನಲ್ಲಿ ಸಿಲುಕಿ ಜೀವಭಯದಲ್ಲಿ ಪರದಾಡಿದ್ದರು. ನೆಲ ಮಹಡಿಯಿಂದ ಲಿಫ್ಟ್ ಹತ್ತಿದ್ದವರು ಮೇಲೆ 6 ನೇ ಮಹಡಿಗೆ ಹೋಗೋದಿತ್ತು. ತಾಂತ್ರಿಕ ದೋಷದಿಂದ ಲಿಫ್ಟ್ 3 ನೇ ಮಹಡಿಗೆ ನಿಂತು ಬಿಟ್ಟಿತ್ತು. ಇದರಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಲಿಪ್ಟ್‌ನಲ್ಲಿ ಗಾಳಿ ಬೆಳಕಿಲ್ಲದೇ ಸಿಲುಕಿದ ಕಾರಣ ಆತಂಕದಲ್ಲಿದ್ದ 8 ಜನ ಸಿಬ್ಬಂದಿಗಳು ಜೀವ ಭಯದಲ್ಲಿ ಒದ್ದಾಡಿದ್ದಾರೆ ಜೊತೆಗೆ ಉಸಿರಾಟದ ತೊಂದರೆ ಎದುರಿಸಿದ್ದಾರೆ.ಬಳಿಕ ಲಿಫ್ಟ್ ಗೋಡೆ ಒಡೆದು ಸಿಬ್ಬಂದಿಗಳನ್ನು ಹೊರ ತರುವ ಕಾರ್ಯಾಚರಣೆ ನಡೆಸಲಾಯಿತು. ಮೂರನೇ ಫ್ಲೋರ್‌ಗೆ ಈ ಲಿಫ್ಟ್ ಅಗತ್ಯ ಇಲ್ಲದ ಕಾರಣ ಇಲ್ಲಿರುವ ಲಿಫ್ಟ್ ಬಾಗಿಲನ್ನು ಮುಚ್ಚಿ ಗೋಡೆ ಕಟ್ಟಲಾಗಿತ್ತು. ತಾಂತ್ರಿಕ ದೋಷ ಕಂಡುಬಂದ ಲಿಫ್ಟ್ ಇಲ್ಲೇ ಹೋಗಿ ನಿಂತಿದ್ದರಿಂದ ಬಾಗಿಲು ಒಡೆದು ಒಳಗಡೆ ಸಿಲುಕಿದ್ದವರನ್ನು ಹೊರತರಲಾಯಿತು.ಡ್ರಿಲ್ ಮಶೀನ್ ಮೂಲಕ ಗೋಡೆ ಒಡೆದು ಒಳಗಡೆ ಸಿಲುಕಿದ್ದವರ ರಕ್ಷಣೆ ಮಾಡಿದಾಗ ಒಂದು ಗಂಟೆಯ ನಂತರ ಹೊರ ಬಂದು ನಿಟ್ಟುಸಿರು ಬಿಟ್ಟ ಸಿಬ್ಬಂದಿಗಳು. ಹೊರ ಬಂದ ಸಿಬ್ಬಂದಿಗಳಿಗೆ ಉಪಚರಿಸಿ, ಆರೋಗ್ಯ ತಪಾಸಣೆ ನಡೆಸಿ ಕರ್ತವ್ಯಕ್ಕೆ ಹಾಜರಿ ಪಡಿಸಲಾಯಿತು ಎಂದು ಜಿಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಿಮ್ಸ್‌ನಲ್ಲಿ ಯಡವಟ್ಟುಗಳದ್ದೇ ಕಾರುಬಾರು!ಜಿಮ್ಸ್‌ನ ಈ ಕಟ್ಟಡದಲ್ಲಿಯೇ 8, 9 ಹಾಗೂ 10 ನೇ ಮಹಡಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೂ ಆರಂಭವಾಗಿದೆ. ಹೀಗಾಗಿ ಇಲ್ಲಿ ನಿತ್ಯ ಲಿಫ್ಟ್‌ನಲ್ಲಿ ನೂರಾರು ಜನ ಬಂದು ಹೋಗಿ ಮಾಡುತ್ತಿದ್ದಾರೆ. ಆದರಿಲ್ಲಿ ಲಿಫ್ಟ್ ಈ ರೀತಿ ತಾಂತ್ರಿಕ ದೋಷಕ್ಕೊಳಗಾಗಿ ಆತಂಕ ಮೂಡಿಸಿದೆ. ಈ ಮುಂಚೆಯೂ ಇಲ್ಲಿ ಲಿಫ್ಟ್ ಸಮಸ್ಯೆ ಇರೋದನ್ನು ಮಾಧ್ಯಮದವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶರ ಗಮನಕ್ಕೆ ತಂದಿದ್ದರು.
ಇಲ್ಲಿನ ಸೇಡಂ ಮತಕ್ಷೇತ್ರದ ಹಿರಿಯ ಶಾಸಕರು ಡಾ. ಶರಣಪ್ರಕಾಶ ಪಾಟೀಲರೇ ವೈದ್ಯಕೀಯ ಶಿಕ್ಷಣ ಖಾತೆ ಸಚಿವರು. ಇವರ ಇಲಾಖೆಯ ಅಡಿಯಲ್ಲಿಯೇ ಇಲ್ಲಿರುವ ಜಿಮ್ಸ್ ವೈದ್ಯ ವಿದ್ಯಾಲಯ, ಅದಕ್ಕೆ ಸಂಬಂಧಿತ ಜಿಮ್ಸ್ ಆಸ್ಪತ್ರೆ ಬರೋದು. ಹೀಗಿದ್ದರೂ ಜಿಮ್ಸ್ ಆಸ್ಪತ್ರೆಯಲ್ಲಿ ನಿರಂತರ ಇಂತಹ ಯಡವಟ್ಟುಗಳೇ ಘಟಿಸುತ್ತಿವೆ.ಆಗ ಸಚಿವರು ಖುದ್ದಾಗಿ ತಾವೂ ಈ ಸಮಸ್ಯೆ ಗಮನಿಸಿದ್ದಾಗಿ ಹೇಳಿದ್ದಲ್ಲದೆ, ಲಿಫ್ಟ್ ಹೆಚ್ಚಿಸುವ ಬಗ್ಗೆ ಹಾಗೂ ಇಲ್ಲಿ ಮೆಟ್ಟಿಲುಮೂಲಕ ಸುಗಮ ಸಂಚಾರಕ್ಕೂ ಅನುಕೂಲ ಮಾಡೋದಾಗಿ ಹೇಳಿದ್ದರು. ಆದರೆ ಇಂದಿಗೂ ಜಿಮ್ಸ್ ಆಸ್ಪತ್ರೆಯ ಈ ಕಟ್ಟಡದಲ್ಲಿ ಲಿಫ್ಟ್ ಸಮಸ್ಯೆ ಹಾಗೇ ಕಾಡುತ್ತಲೇ ಇರೋದು ಇಲ್ಲಿನ ಆಡಳಿತದವರು ಇಂತಹ ಸಮಸ್ಯೆ ಪರಿಹಾರದ ಬದಲು ಅಲಕ್ಷತನ ತೋರಿತ್ತಿದ್ದಾರೆನ್ನಲು ಇದೇ ಘಟನೆ ಕನ್ನಡಿ ಹಿದಿದೆ.