ಎಸ್ಸಿ, ಎಸ್ಟಿ ಹಣ ದುರ್ಬಳಕೆ ದಲಿತ ವಿರೋಧಿ

| Published : Jul 22 2024, 01:24 AM IST

ಎಸ್ಸಿ, ಎಸ್ಟಿ ಹಣ ದುರ್ಬಳಕೆ ದಲಿತ ವಿರೋಧಿ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಕ್ಕೆ ಬರುವ ಎಲ್ಲಾ ಸರ್ಕಾರಗಳು ಎಸ್‍ಸಿ, ಎಸ್‍ಟಿ ಜನಾಂಗದ ಅಭಿವೃದ್ಧಿಗೆ ಮೀಸಲು ಇಟ್ಟಿರುವ ಹಣವನ್ನು ಇತರೆ ಯೋಜನೆಗಳಿಗೆ ಬಳಸಿಕೊಳ್ಳುತ್ತಿವೆ

ಕನ್ನಡಪ್ರಭ ವಾರ್ತೆ ಶಿರಾ

ಅಧಿಕಾರಕ್ಕೆ ಬರುವ ಎಲ್ಲಾ ಸರ್ಕಾರಗಳು ಎಸ್‍ಸಿ, ಎಸ್‍ಟಿ ಜನಾಂಗದ ಅಭಿವೃದ್ಧಿಗೆ ಮೀಸಲು ಇಟ್ಟಿರುವ ಹಣವನ್ನು ಇತರೆ ಯೋಜನೆಗಳಿಗೆ ಬಳಸಿಕೊಳ್ಳುತ್ತಿವೆ, ಇದರಿಂದ ದಲಿತರ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಇದು ದಲಿತರ ವಿರೋಧಿ ನೀತಿಯಾಗಿದೆ ಎಂದು ಸ್ವಾಭಿಮಾನಿ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಸಂಚಾಲಕ, ಬಿಎಸ್‍ಪಿ ಜಿಲ್ಲಾಧ್ಯಕ್ಷ ಜೆ.ಎನ್.ರಾಜಸಿಂಹ ಆರೋಪಿಸಿದರು.

ಸ್ವಾಭಿಮಾನಿ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ನಗರದ ಮಿನಿ ವಿಧಾನಸೌಧದಲ್ಲಿ ಎಸ್‌ಸಿ, ಎಸ್ಟಿ ಮೀಸಲು ಹಣವನ್ನು ಇತರೆ ಯೋಜನೆಗಳಿಗೆ ಉಪಯೋಗಿಸಬಾರದು ಎಂದು ಆಗ್ರಹಿಸಿ ತಹಸೀಲ್ದಾರ್ ಡಾ.ದತ್ತಾತ್ರೆಯ ಗಾದಾ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹಕ್ಕುಗಳನ್ನು ಆಳವಡಿಸಿದ ಮೇಲೆ ಶೋಷಿತರು ಬೆಳಕು ಕಾಣಲು ಸಾಧ್ಯವಾಯಿತು. ಆದರೆ ಎಲ್ಲಾ ಸರ್ಕಾರಗಳು ಎಸ್‍ಸಿ, ಎಸ್‍ಟಿ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿರುವ ಹಣವನ್ನು ಬೇರೆ ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದಲೇ ಎಸ್‍ಸಿ, ಎಸ್ಟಿ ಜನಾಂಗದವರು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತಿಲ್ಲ. 2023-24ನೇ ಸಾಲಿನಲ್ಲಿ 29,000 ಕೋಟಿ ರುಪಾಯಿಗಳಲ್ಲಿ 11066 ಕೋಟಿ ರು. ಅನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. 2024-25ನೇ ಸಾಲಿನಲ್ಲಿ 39129.4 ಕೋಟಿ ರು.ನಲ್ಲಿ 14282 ಕೋಟಿ ರುಪಾಯಿಗಳನ್ನು ಗ್ಯಾರಂಟಿಗಳಿಗಾಗಿ ಉಪಯೋಗಿಸಿದ್ದು ಪರಿಶಿಷ್ಟ ಸಮುದಾಯಗಳಿಗೆ ಮಾಡಿದ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು. ಅಕ್ರಮ ವರ್ಗಾವಣೆ ಮಾಡಿ ಅದರಲ್ಲಿ 94.73 ಕೋಟಿ ರುಪಾಯಿಗಳನ್ನು ಹೊರ ರಾಜ್ಯಗಳ 18 ಖಾತೆಗಳು ಹಾಗೂ 700 ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ಹಣ ದುರ್ಬಳಕೆ ಮಾಡಿರುವ ಬಗ್ಗೆ ಎಸ್‌ಐಟಿ ಮತ್ತು ಇಡಿ ಹಾಗೂ ಸಿಬಿಐ ತನಿಖೆ ನಡೆಸುತ್ತಿದೆ. ಎಸ್‍ಸಿ, ಎಸ್‍ಟಿ ಅನುದಾನ ದುರ್ಬಳಕೆ ಮಾಡಿರುವುದು ಘೊರ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಎಸ್‍ಸಿ, ಎಸ್‍ಟಿ ಜನಾಂಗದ ಅಭಿವೃದ್ಧಿ ಹಣವನ್ನು ಯಾವುದೇ ಗ್ಯಾರಂಟಿ ಯೋಜನೆಗೆ ಬಳಸಬಾರದು, ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮುಂದುವರೆಸಬೇಕು. ಎಸ್‍ಸಿ, ಎಸ್‍ಟಿ ಅನುದಾನ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಎಸ್‌ಐಟಿ ಮತ್ತು ಇಡಿ ಹಾಗೂ ಸಿಬಿಐ ತನಿಖೆ ನಡೆಸಬೇಕು. ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ವಾಭಿಮಾನಿ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯ ಸಂಯೋಜಕ ಸಿ.ದಾಸಪ್ಪ, ರಂಗನಾಥಪ್ಪ, ಬೊಮ್ಮಯ್ಯ, ತಿಮ್ಮರಾಜ, ರಾಜಣ್ಣ, ಶೃತಿ, ಶಂಕರ, ಹಿತೇಶ್, ಶಕುಂತಲ, ರಂಗಪ್ಪ, ಶ್ರೀಧರ, ರಂಗರಾಜು ಸಿ., ಹಲವರು ಹಾಜರಿದ್ದರು.