ಕಾಂಗ್ರೆಸ್‌ನಿಂದ ದಲಿತ ವಿರೋಧಿ ನೀತಿ: ಕಾಂತರಾಜು

| Published : Jul 11 2025, 11:48 PM IST

ಸಾರಾಂಶ

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ 11 ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು. ದಲಿತರ ಹೆಚ್ಚು ಮತ ಹಾಕಿಸಿಕೊಳ್ಳುವ ಕಾಂಗ್ರೆಸ್ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯದ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ. ಅಹಿಂದ ನಾಯಕ ಎನಿಸಿಕೊಳ್ಳುವ ಸಿದ್ದರಾಮಯ್ಯ ಅವರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಐಎಎಸ್‌- ಐಪಿಎಸ್ ಅಧಿಕಾರಿಗಳಿಗೆ ಕಾಂಗ್ರೆಸ್ ಸರ್ಕಾರ ಆಯಾಕಟ್ಟಿನ ಜಾಗದಲ್ಲಿ ಹುದ್ದೆ ನೀಡುವಲ್ಲಿ ವಿಫಲವಾಗಿದೆ ಎಂದು ಜೆಡಿಎಸ್ ಎಸ್‌ಸಿ, ಎಸ್‌ಟಿ ವಿಭಾಗದ ತಾಲೂಕು ಅಧ್ಯಕ್ಷ ಕಾಂತರಾಜು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 50ಕ್ಕೂ ಕೆಚ್ಚು ಮಂದಿ ಐಪಿಎಸ್, ಐಎಎಸ್ ಅಧಿಕಾರಿಗಳಿದ್ದಾರೆ. ಇಬ್ಬರು ಎಸ್‌ಪಿ ಹಾಗೂ ಒಬ್ಬರನ್ನು ಡಿಸಿಯನ್ನಾಗಿ ಮಾತ್ರ ಮಾಡಲಾಗಿದೆ. ಉಳಿದ ಅಧಿಕಾರಿಗಳಿಗೆ ಕೆಲವೊಂದು ಇಲಾಖೆ ಜವಾಬ್ದಾರಿ ವಹಿಸಿದೆ ಎಂದರು.

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ 11 ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು. ದಲಿತರ ಹೆಚ್ಚು ಮತ ಹಾಕಿಸಿಕೊಳ್ಳುವ ಕಾಂಗ್ರೆಸ್ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯದ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ. ಅಹಿಂದ ನಾಯಕ ಎನಿಸಿಕೊಳ್ಳುವ ಸಿದ್ದರಾಮಯ್ಯ ಅವರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರ ನೀಡಬೇಕೆಂದು ಆಗ್ರಹಿಸಿದರು.

ಮುಖಂಡ ಸುರೇಶ್ ಮಾತನಾಡಿ. ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳುವ ಕಾಂಗ್ರೆಸ್ ಸರ್ಕಾರ ಎಡ ಬಲ ಸಮುದಾಯದ ನಡುವೆ ದೊಡ್ಡ ಅಂತರನ್ನು ತಂದು ಪರಿಶಿಷ್ಟ ಸಮುದಾಯದ ಒಗ್ಗಟ್ಟನ್ನು ಹೊಡೆಯುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಗ್ರಾಮದಲ್ಲಿಯೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದರೂ ಕೂಡ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಮಹನೀಯರ ಪುತ್ಥಳಿಗಳಿಗೆ ಅಪಮಾನ ಮಾಡಿದ ದ್ರೋಹಿಗಳಿಗೆ ಕಠಿಣ ಶಿಕ್ಷಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

ಬಿಎಸ್‌ಪಿ ತಾಲೂಕು ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ರಾಜ್ಯದ 38 ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡದ ಶಾಸಕರು ಹಾಗೂ ಹಲವು ಸಚಿವರು ಇದ್ದರೂ ಕೂಡ ಸಮುದಾಯದ ಅಧಿಕಾರಿಗಳಿಗೆ ಉನ್ನತ ಅಧಿಕಾರ ಕೊಡಿಸಲು ಮುಂದಾಗದಿರುವುದು ವಿಷಾಧನೀಯ. ಕೂಡಲೇ ಅಧಿಕಾರಿಗಳಿಗೆ ನ್ಯಾಯ ಕೊಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಪುರಸಭೆ ಸದಸ್ಯ ಸಿದ್ದರಾಜು ಮಾತನಾಡಿ, ನಿಗಮಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಕಾಂಗ್ರೆಸ್ ಸರ್ಕಾರ ಕಡಿಮೆಗೊಳಿಸಿದೆ. ಕೂಡಲೇ ಸಂವಿಧಾನ ಬದ್ಧವಾಗಿ ಸಿಗಬೇಕಾದ ಸೌಲಭ್ಯವನ್ನು ಕೊಡಿಸಲಬೇಕು ಒತ್ತಾಯಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಲ್ಲಣ್ಣ, ಕೆಂಪರಾಜು, ಮಲ್ಲಿಕಾರ್ಜುನ, ನಾಗರಾಜು, ಮಲ್ಲೇಶ್ ಸೇರಿದಂತೆ ಇತರರು ಇದ್ದರು.