ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳಿಂದ ಕಾರ್ಮಿಕರ ಬದುಕು ದುಸ್ತರವಾಗುತ್ತಿದೆ ಎಂದು ಸಿಐಟಿಯು ತಾಲೂಕು ಅಧ್ಯಕ್ಷ ಹರೀಂದ್ರ ತಿಳಿಸಿದರು.ನಗರದಲ್ಲಿ ಸಿಐಟಿಯು ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ಹಿತಾಸಕ್ತಿ ಮರೆಯುತ್ತಿದ್ದು, ಹೊಸ ನೀತಿಗಳ ಅನುಷ್ಠಾನದಿಂದ ಕಾರ್ಮಿಕರ ಬದುಕು ದುಸ್ತರವಾಗುತ್ತಿದೆ. ಅದನ್ನ ಖಂಡಿಸಿ ರಾಜ್ಯಾದ್ಯಂತ ಸಿಐಟಿಯು ಪ್ರತಿಭಟನೆಗಳನ್ನ ಹಮ್ಮಿಕೊಂಡಿದ್ದು ನಮ್ಮ ಬೇಡಿಕೆಗಳನ್ನ ಸರ್ಕಾರ ಈಡೇರಿಸಬೇಕು. ಪ್ರಮುಖವಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನ ಹಿಂಪಡೆಯಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಿ ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ಕಲ್ಪಿಸುವ ನೀತಿಗಳನ್ನ ಜಾರಿಗೆ ತರಬೇಕು. ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ಕೃಷಿ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತರಿ ಪಡಿಸಬೇಕು. ಎಪಿಎಂಸಿ ವ್ಯವಸ್ಥೆ ಬಲಗೊಳಿಸಬೇಕು. ಗೊಬ್ಬರ ಒಳಗೊಂಡಂತೆ ಕೃಷಿ ಇಡುವಳಿಗಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿಗಳನ್ನು ಕೈಬಿಡಬೇಕು. ದೇಶದ ಐಕ್ಯತೆಯನ್ನ ಚಿತ್ರ ಗೊಳಿಸುವ ಸೌಹಾರ್ದತೆಯನ್ನು ಹಾಳು ಮಾಡುವ ಕೃತ್ಯಗಳನ್ನು ಹಾಗೂ ಶಕ್ತಿಗಳನ್ನು ನಿಗ್ರಹಿಸಬೇಕು. ರೈಲ್ವೆ ವಿದ್ಯುತ್ ಒಳಗೊಂಡು ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಎಲ್ಲಾ ಸ್ವರೂಪದ ಖಾಸಗೀಕರಣ ಕೈಬಿಡಬೇಕು. ಸಾರ್ವಜನಿಕ ರಂಗದ ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸಬೇಕು. ಆ ಕುಶಲ ಕಾರ್ಮಿಕರಿಗೆ ಕನಿಷ್ಠ ವೇತನವನ್ನು 31 ಸಾವಿರ ಹಾಗೂ ಹೆಚ್ಚಿನ ಕೌಶಲ್ಯದ ಪ್ರತಿ ಹಂತಕ್ಕೆ ಶೇ.15ರಷ್ಟು ಹೆಚ್ಚಳದೊಂದಿಗೆ ನಿಗದಿಪಡಿಸಬೇಕು. ಹೀಗೆ ಹಲವಾರು ಬೇಡಿಕೆಗಳನ್ನ ಮುಂದೆ ಇಟ್ಟಿದ್ದು ಸರ್ಕಾರ ತ್ವರಿತವಾಗಿ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ರಾಜ್ಯ ಕಾರ್ಯದರ್ಶಿ ಮುನಿರಾಜು ಮಾತನಾಡಿ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಕಾನೂನುಗಳು ಕಾರ್ಮಿಕರ ಹಿತಾಸಕ್ತಿ ಮರೆಯುವಂತಿದೆ. ಅಷ್ಟೇ ಅಲ್ಲದೆ ಇದರಿಂದ ಕಾರ್ಮಿಕರ ಹಕ್ಕುಗಳನ್ನು ಪ್ರಶ್ನೆ ಮಾಡುವಂತಿಲ್ಲದಂತಾಗಿದೆ. ಆದ್ದರಿಂದ ಈ ಹೋರಾಟ ರೂಪಿಸಿದ್ದು ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ದೊಡ್ಡ ಮಟ್ಟಕ್ಕೆ ಹೋಗಲಿದೆ ಎಂದರು.ಈ ಸಂದರ್ಭದಲ್ಲಿ ಸಿಐಟಿಯು ತಾಲೂಕು ಕಾರ್ಯದರ್ಶಿ ಮೋಹನ್ ಬಾಬು, ಕಾರ್ಮಿಕ ಮುಖಂಡ ಆನಂದ್, ವೆಂಕಟರಾಜು ಇತರರಿದ್ದರು.