ಸಮಾಜದಲ್ಲಿ ಸನಾತನ ಧರ್ಮ ವಿರೋಧಿಗಳು ಹೆಚ್ಚಳ: ಡಾ.ಈ.ಸಿ.ನಿಂಗರಾಜ್‌ಗೌಡ

| Published : Mar 08 2024, 01:45 AM IST

ಸಮಾಜದಲ್ಲಿ ಸನಾತನ ಧರ್ಮ ವಿರೋಧಿಗಳು ಹೆಚ್ಚಳ: ಡಾ.ಈ.ಸಿ.ನಿಂಗರಾಜ್‌ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳುನಾಡಿನ ನಾಯಕನೊಬ್ಬ ಸನಾತನ ಧರ್ಮದ ಬಗ್ಗೆ ಟೀಕಿಸುತ್ತ ಹಿಂದುಗಳ ಭಾವನೆಗಳಿಗೆ ಧಕ್ಕೆತರುತ್ತಿರುವುದು ಹೆಚ್ಚಾಗುತ್ತಿದೆ. ರಾಷ್ಟ್ರಭಕ್ತಿ ರಾಷ್ಟ್ರ ಗೌರವವಿಲ್ಲದೆ ಭಾರತ ದೇಶ ದೇಶವೇ ಅಲ್ಲ ಎನ್ನುವ ದೇಶದ್ರೋಹಿ ಹೇಳಿಕೆ ನೀಡುತ್ತಿರುವುದು ಭಾರತೀಯರ ಭಾವನೆಗಳ ಜೊತೆ ಆಟವಾಡುತ್ತಿರುವುದು ಖಂಡನೀಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ಸನಾತನ ಧರ್ಮ ವಿರೋಧಿಗಳು ಮತ್ತು ರಾಷ್ಟ್ರದ್ರೋಹಿಗಳು ಹೆಚ್ಚಾಗುತ್ತಿದ್ದಾರೆ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿರುವ ಗಾಂಧಿ ಭವನದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆ, ಕದಂಬ ಚಕ್ರವತ್ರಿ ಮಯೂರವರ್ಮ-ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ ಹೋರಾಟ ಸಮಿತಿ ಸಹಕಾರದಲ್ಲಿ ಆಯೋಜಿಸಿದ್ದ ಕದಂಬ-ಚಾಲುಕ್ಯ ಸಂಸ್ಮರಣಾ ಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಅಭಿನಂದಿಸಿ ಅವರು ಮಾತನಾಡಿದರು.

ಸಂವಿಧಾನಾತ್ಮಕ ಕಾನೂನುಗಳು ಜಾರಿಯಾಗುವ ವಿಧಾನಸೌದದ ಅಂಗಳದಲ್ಲಿ ರಾಜ್ಯಸಭಾ ಸದಸ್ಯರ ಸಮ್ಮುಖದಲ್ಲಿ ಪಾಕಿಸ್ತಾನ್‌ ಜಿಂದಾಬಾದ್ ಘೋಷಣೆ ಕೂಗಿದರೂ ಕಾನೂನು ಕ್ರಮ ಕೈಗೊಳ್ಳದೇ ಉದಾಸೀನ ಮನೋಭಾವ ತೋರುವ ಆಡಳಿತ ಪಕ್ಷವು ಕಳೆದ ೨ವರ್ಷಗಳ ಹಿಂದೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ಥಾನ ವಿರೋಧಿಸಿ ಪ್ರತಿಭಟನೆ ಮಾಡುವಾಗ ಗ್ರಾಮೀಣ ಭಾಗದ ವ್ಯಕ್ತಿಯೊಬ್ಬ ಹಿಂದಿ ಪದದ ಅರ್ಥ ತಿಳಿಯದೆ ಘೋಷಣೆ ಕೂಗಿದ್ದನ್ನೇ ದೊಡ್ಡದು ಮಾಡಿರುವುದು ಸಮಂಜಸವಲ್ಲ ಎಂದು ನುಡಿದರು.

ತಮಿಳುನಾಡಿನ ನಾಯಕನೊಬ್ಬ ಸನಾತನ ಧರ್ಮದ ಬಗ್ಗೆ ಟೀಕಿಸುತ್ತ ಹಿಂದುಗಳ ಭಾವನೆಗಳಿಗೆ ಧಕ್ಕೆತರುತ್ತಿರುವುದು ಹೆಚ್ಚಾಗುತ್ತಿದೆ. ರಾಷ್ಟ್ರಭಕ್ತಿ ರಾಷ್ಟ್ರ ಗೌರವವಿಲ್ಲದೆ ಭಾರತ ದೇಶ ದೇಶವೇ ಅಲ್ಲ ಎನ್ನುವ ದೇಶದ್ರೋಹಿ ಹೇಳಿಕೆ ನೀಡುತ್ತಿರುವುದು ಭಾರತೀಯರ ಭಾವನೆಗಳ ಜೊತೆ ಆಟವಾಡುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.

ವಿಶ್ವವೇ ಮೆಚ್ಚುವಂತಹ ಭಾರತ ದೇಶದ ಸಮಗ್ರ ಅಭಿವೃದ್ಧಿಗೆ ನಾಂದಿಯಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಟೀಕಿಸುವವರು ಹೆಚ್ಚಾಗುತ್ತಿದ್ದಾರೆ, ಹತ್ತಾರು ವರ್ಷಗಳಲ್ಲಿ ಭಾರತ ದೇಶವು ವಿಶ್ವಮಟ್ಟದಲ್ಲಿ ವಿಶ್ವಗುರು ಸ್ಥಾನ ಪಡೆದು ಅಭಿವೃದ್ಧಿರಾಷ್ಟ್ರ ಎನ್ನಿಸಿಕೊಳ್ಳುವ ದಿನಗಳು ದೂರವಿಲ್ಲ ಎಂದರು.

ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನೂ ಮತ್ತೊಮ್ಮೆ ಬೆಂಬಲಿಸುವುದರ ಮೂಲಕ ರಾಷ್ಟ್ರೀಯ ವಿಚಾರಧಾರೆಯೂ ಬೆಳೆಯಲೂ ನಾವೇಲ್ಲಾ ಕಟೀಬದ್ದರಾಗಬೇಕಿದೆ ಎಂದರು.

ವಿಶ್ವಮಾನವ ಸಂದೇಶ ಸಾರಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿಶ್ವಮಾನವ ಕುವೆಂಪು ಅವರು ರಚಿತ ಜೈ ಭಾರತ ಜನನಿಯ ತನುಜಾತೆ ಜಯಯೇ ಕರ್ನಾಟಕ ಮಾತೆ ಎನ್ನುವ ಗೀತೆಯಲ್ಲಿ ಅಖಂಡ ಭಾರತದ ಸಾಂಸ್ಕೃತಿಕ ಜಗತ್ತನ್ನೇ ಪರಿಚಯಿಸಿದ್ದಾರೆ. ಇಂತಹ ಭಾರತ ದೇಶದಲ್ಲಿ ಹುಟ್ಟಿದವರು ದೇಶವನ್ನೇ ದೇಶವಲ್ಲ ಎನ್ನುವ ಕೀಳು ಮನೋಭಾವಕ್ಕೆ ತಕ್ಕ ಶಿಕ್ಷೆಯಾಗಬೇಕಿದೆ ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಕದಂಬಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿರಮೇಶ್, ದಸಂಸ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ ಮತ್ತಿತರರಿದ್ದರು.