ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಮುಂಬರುವ ಕರ್ನಾಟಕ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರಿದ ಆರೋಪದಡಿ, ನಗರಸಭೆಯ ಕಂದಾಯ ಅಧಿಕಾರಿ, ಮತಗಟ್ಟೆ ಮೇಲ್ವಿಚಾರಕ ವೆಂಕಟೇಶ ಹಾಗೂ ಕಬಾಡಗೇರಿ ಸರಕಾರಿ ಹಿರಿಯ ಪ್ರಾಥಮಿಕ ಮುಖ್ಯಶಿಕ್ಷಕ ಈರಣ್ಣ ಡಂಬಳ ಅವರನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ಸುಶೀಲಾ ಅವರು ಅಮಾನತುಗೊಳಿಸಿದ್ದಾರೆ.ಸುರಪುರ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 93-ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಎಡ ಭಾಗ) ಕಬಡಿಗೇರಾದಲ್ಲಿ ನಡೆಯಲಿರುವ ಮತದಾನ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅವರು ಇತ್ತೀಚೆಗೆ ಮೂಲಭೂತ ಸೌಕರ್ಯಗಳ ಪರಿಶೀಲನೆಗೆ ಭೇಟಿ ನೀಡಿದ್ದರು. ಆಗ ಕಟ್ಟಡ ನೆಲಸಮ ಆಗಿರುವುದು ಕಂಡುಬಂದಿದೆ. ಇದರ ಕುರಿತು ತಹಸೀಲ್ದಾರ್ ಮತಗಟ್ಟೆ ನೆಲಸಮಕ್ಕೆ ಸಂಬಂಧಿಸಿದಂತೆ ಚುನಾವಣಾ ಕಚೇರಿಗೆ ಮತಗಟ್ಟೆ ಮೇಲ್ವಿಚಾರಕರು ಹಾಗೂ ಮುಖ್ಯಶಿಕ್ಷಕರು ಯಾವುದೇ ವರದಿ ಅಥವಾ ಮಾಹಿತಿ ನೀಡಿಲ್ಲ ಎಂಬುದಾಗಿ ವರದಿ ನೀಡಿದ್ದರು.
ಮತದಾನ ಕೇಂದ್ರಕ್ಕೆ ನಿಯೋಜಿಸಿದ ಮತಗಟ್ಟೆ ಸಿಬ್ಬಂದಿಗೆ ಹಾಗೂ ಮತದಾರರಿಗೆ ತೊಂದರೆ ಉಂಟಾಗುವುದು. ಚುನಾವಣಾ ಆಯೋಗದಿಂದ ಎಲ್ಲ ಮತಗಟ್ಟೆಗಳಲ್ಲಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಲು, ಮತಗಟ್ಟೆಗಳ ಸುರಕ್ಷತೆಯ ಕುರಿತು ಮಾಹಿತಿ ಸಲ್ಲಿಸಬೇಕಿದೆ. ಆದರೆ, ಹಲವು ಬಾರಿ ಕಾರ್ಯಾಲಯದಿಂದ ನಿರ್ದೇಶನಗಳು ನೀಡಿದರೂ ಮತಗಟ್ಟೆ ಮೇಲ್ವಿಚಾರಕರು ಹಾಗೂ ಮುಖ್ಯಶಿಕ್ಷಕರು ನಿರ್ದೇಶನಗಳಂತೆ ಅಗತ್ಯ ಕ್ರಮ ಕೈಗೊಳ್ಳಲು ವಿಫಲರಾಗಿರುತ್ತಾರೆ.ಸರಕಾರಿ ನೌಕರರು ಚುನಾವಣಾ ಕರ್ತವ್ಯವನ್ನು ನಿರ್ವಹಿಸದೇ ಹಾಗೂ ಮೇಲಾಧಿಕಾರಿಗಳ ಆದೇಶವನ್ನು ಹಾಗೂ ಮೌಖಿಕ ಆದೇಶಗಳನ್ನು ನಿರ್ವಹಿಸದೇ ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷತನ ಹಾಗೂ ಬೇಜಾಬ್ದಾರಿತನ ತೋರಿದ್ದಾರೆ. ಕರ್ನಾಟಕ ನಾಗರೀಕ ಸೇವಾ ನಿಯಮಗಳು, ಪ್ರಜಾ ಪ್ರತಿನಿಧಿ ಕಾಯ್ದೆ-1951 ರ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಮತಗಟ್ಟೆ ಮೇಲ್ವಿಚಾರಕ ಹಾಗೂ ಮುಖ್ಯಶಿಕ್ಷಕರನ್ನು ಕರ್ನಾಟಕ ನಾಗರೀಕ ಸೇವಾ(ನಿಯಂತ್ರಣ, ವರ್ಗಿಕರಣ ಮತ್ತು ಮೇಲ್ಮನವಿ) ನಿಯಮಗಳು-1957 ರಡಿಯಲ್ಲಿ ಅಮಾನತುಗೊಳಿಸಿ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.