ಅನುಭಾವ ಎಂಬುದು ಅನುಭವವನ್ನೂ ಮೀರಿದ್ದು: ಡಾ.ಬಿ. ಗುರುಬಸವರಾಜ

| Published : Dec 06 2024, 09:01 AM IST

ಸಾರಾಂಶ

ರೋಗವನ್ನು ಪ್ರತಿಬಂಧಿಸುವುದರಲ್ಲಿ ಯೋಗವೂ ಒಂದು. ಸಮಗ್ರ ಆರೋಗ್ಯ ಚಿಂತನೆಗೆ ಅನುಭಾವ ಚಿಂತಕರು ಬೇಕು. ಆರೋಗ್ಯ ದರ್ಪಣ ಕೃತಿ ಇಂದಿನ ದಿನಕ್ಕೆ ಬಹಳ ಮುಖ್ಯ. ಅದು ಸಮಗ್ರ ವೈದ್ಯಕೀಯ ಕ್ಷೇತ್ರಕ್ಕೆ ವಿಶಿಷ್ಟವಾದ ಗ್ರಂಥ. ಇಂದು ಆರೋಗ್ಯ ಕ್ಷೇತ್ರದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಅನುಭಾವ ಎಂಬುದು ಅನುಭವವನ್ನೂ ಮೀರಿದ್ದು ಎಂದು ಆಯುರ್ವೇದ ನಿವೃತ್ತ ಪ್ರಾಧ್ಯಾಪಕ ಡಾ.ಬಿ. ಗುರುಬಸವರಾಜ ತಿಳಿಸಿದರು.

ನಗರದ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ನಡೆದ ಶಿವಾನುಭವ ದಾಸೋಹ ಮಾಲಿಕೆಯ 319ನೇ ಕಾರ್ಯಕ್ರಮದಲ್ಲಿ ಆರೋಗ್ಯ ದರ್ಪಣ- ಒಂದು ಅನುಭಾವ ಚಿಂತನೆ ಕುರಿತು ಉಪನ್ಯಾಸ ನೀಡಿದ ಅವರು, ಅನುಭಾವ ಎಂಬುದು ಕೇವಲ ಸಾಹಿತ್ಯಕ್ಕೆ ಸಂಬಂಧಿಸಿದ್ದಲ್ಲ. ಅನುಭಾವ ತತ್ವವನ್ನು ಕಾಣಬೇಕೆಂದರೆ, ವೈದ್ಯ ಸಂಗಣ್ಣ, ಸರ್ವಜ್ಞ ಮತ್ತು ಇತರ ವಚನಕಾರರನ್ನು ಅರಿಯಬೇಕು ಎಂದರು.

ರೋಗಿಯ ಅಂತಃಕರಣದ ನೋವನ್ನು ವೈದ್ಯರಾದವರು ಅರ್ಥ ಮಾಡಿಕೊಳ್ಳಬೇಕು, ಅದು ಅನುಭಾವದ ಚಿಂತನೆಗಳಲ್ಲಿ ಒಂದು. ಅಂತರಂಗದ ಮಾತಿಗೆ ಕಿವಿಗೊಡದೇ ಇದ್ದರೆ ಅನುಭಾವದ ಕೊರತೆಯಾಗುತ್ತದೆ. ಆರೋಗ್ಯ ಪರಿಕಲ್ಪನೆ ಇಂದು ಬಹಳ ಮುಖ್ಯ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಸದೃಢವಾಗಿದ್ದರೆ ಮಾತ್ರ ಆರೋಗ್ಯವಂತರು. ಹೃದಯದ ಮಾತು ಕೇಳಿದರೆ ಬುದ್ದಿಯು ವಿಕಾಸವಾಗುತ್ತದೆ ಎಂದು ಅವರು ಹೇಳಿದರು.

ರೋಗವನ್ನು ಪ್ರತಿಬಂಧಿಸುವುದರಲ್ಲಿ ಯೋಗವೂ ಒಂದು. ಸಮಗ್ರ ಆರೋಗ್ಯ ಚಿಂತನೆಗೆ ಅನುಭಾವ ಚಿಂತಕರು ಬೇಕು. ಆರೋಗ್ಯ ದರ್ಪಣ ಕೃತಿ ಇಂದಿನ ದಿನಕ್ಕೆ ಬಹಳ ಮುಖ್ಯ. ಅದು ಸಮಗ್ರ ವೈದ್ಯಕೀಯ ಕ್ಷೇತ್ರಕ್ಕೆ ವಿಶಿಷ್ಟವಾದ ಗ್ರಂಥ. ಇಂದು ಆರೋಗ್ಯ ಕ್ಷೇತ್ರದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ ಎಂದು ಅವರು ಶ್ಲಾಘಿಸಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಹಣಕಾಸು ವಿಭಾಗದ ನಿರ್ದೇಶಕ ಎಸ್. ಪುಟ್ಟಸುಬ್ಬಪ್ಪ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಸಚಿವ ಡಾ.ಬಿ. ಮಂಜುನಾಥ ಅವರು ಕಾರ್ಯಕ್ರಮದ ಸೇವಾರ್ಥದಾರರಾಗಿದ್ದರು. ಎನ್. ಚೂಡಾಮಣಿ ವಚನಗಾಯನ ನಡೆಸಿಕೊಟ್ಟರು. ವೀರಭದ್ರಸ್ವಾಮಿ ನಿರೂಪಿಸಿದರು.