ದೇಶದಲ್ಲಿ ಪರಿಸರ ಕೂಡ ಆಡಿಟ್ ಆಗಬೇಕಿದೆ: ಎಂಪ್ರಿ ಮಹಾ ನಿರ್ದೇಶಕ ಬಿ.ಪಿ. ರವಿ

| Published : Dec 06 2024, 09:01 AM IST

ದೇಶದಲ್ಲಿ ಪರಿಸರ ಕೂಡ ಆಡಿಟ್ ಆಗಬೇಕಿದೆ: ಎಂಪ್ರಿ ಮಹಾ ನಿರ್ದೇಶಕ ಬಿ.ಪಿ. ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರ ಲೆಕ್ಕ ಪರಿಶೋಧನೆಯಲ್ಲಿ ಪರಿಸರ ವಿಜ್ಞಾನ ವಿದ್ಯಾರ್ಥಿಗಳ ಪಾತ್ರ ಹಾಗೂ ಸಾರ್ವಜನಿಕರ ಪಾತ್ರ ಪ್ರಮುಖವಾಗಿದೆ. ಇಂಧನ, ಶಕ್ತಿಮೂಲಗಳ ಸದ್ಬಳಕೆ ಹಾಗೂ ಉಳಿತಾಯ ಆಗಬೇಕಿದೆ. ಕರ್ನಾಟಕವು ದೇಶದಲ್ಲಿ ಎರಡನೇ ಒಣಭೂಮಿ ಹೊಂದಿರುವ ರಾಜ್ಯ. ನೀರಿನ ನಿರ್ವಹಣೆಯಲ್ಲಿ ಹಿಂದೆ ಬಿದ್ದಿದ್ದೇವೆ. ಆದರೆ, ನಗರೀಕರಣ ಹೆಚ್ಚುತ್ತಲೇ ಇದ್ದು, ಅಂತರ್ಜಲ ಬರಿದಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ದೇಶದಲ್ಲಿ ಆರ್ಥಿಕ ಲೆಕ್ಕ ಪರಿಶೋಧನೆಯು (ಆಡಿಟ್) ಪಾರದರ್ಶಕ ಆಗಿರುವಂತೆ ಪರಿಸರ ಲೆಕ್ಕ ಪರಿಶೋಧನೆ ಕೂಡ ಆಗಬೇಕಿದೆ ಎಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಮಹಾ ನಿರ್ದೇಶಕ ಬಿ.ಪಿ. ರವಿ ತಿಳಿಸಿದರು.

ನಗರದ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಪ್ರೊ.ಎಸ್. ಗೋಪಾಲ್ ಮೆಮೋರಿಯಲ್ ಫೌಂಡೇಷನ್ ಮತ್ತು ಪರ್ಯವರೀನ್ ಎಂಜಿನಿಯರ್ಸ್ ಅ್ಯಂಡ್ ಕನ್ಸಲ್ಟೆಂಡ್ಸ್ ಪ್ರೈ.ಲಿ. ಸಹಯೋಗದಲ್ಲಿ ಆಯೋಜಿಸಿರುವ ಪರಿಸರ ಲೆಕ್ಕ ಪರಿಶೋಧನೆ- ಹಸಿರು ಭವಿಷ್ಯಕ್ಕಾಗಿ ನಿರ್ಮಾಣ ಕುರಿತು 3 ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಅವರು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಪರಿಸರ ಲೆಕ್ಕ ಪರಿಶೋಧನೆಯಲ್ಲಿ ಪರಿಸರ ವಿಜ್ಞಾನ ವಿದ್ಯಾರ್ಥಿಗಳ ಪಾತ್ರ ಹಾಗೂ ಸಾರ್ವಜನಿಕರ ಪಾತ್ರ ಪ್ರಮುಖವಾಗಿದೆ. ಇಂಧನ, ಶಕ್ತಿಮೂಲಗಳ ಸದ್ಬಳಕೆ ಹಾಗೂ ಉಳಿತಾಯ ಆಗಬೇಕಿದೆ. ಕರ್ನಾಟಕವು ದೇಶದಲ್ಲಿ ಎರಡನೇ ಒಣಭೂಮಿ ಹೊಂದಿರುವ ರಾಜ್ಯ. ನೀರಿನ ನಿರ್ವಹಣೆಯಲ್ಲಿ ಹಿಂದೆ ಬಿದ್ದಿದ್ದೇವೆ. ಆದರೆ, ನಗರೀಕರಣ ಹೆಚ್ಚುತ್ತಲೇ ಇದ್ದು, ಅಂತರ್ಜಲ ಬರಿದಾಗುತ್ತಿದೆ. ನಮ್ಮ ಸಂಪನ್ಮೂಲಕ್ಕೆ ತಕ್ಕಂತೆ ನಮ್ಮ ಬಳಕೆ ಇರಬೇಕು ಎಂಬುದೇ ಪರಿಸರ ಆಡಿಟ್ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಕಟ್ಟು ನೀರು ಪದ್ಧತಿಯಿಂದ ರೈತರಿಗೆ ಅನುಕೂಲ ಆಗಿದ್ದು, ನೀರು ಉಳಿತಾಯ ಆಗಿದೆ. ಇದನ್ನು ರೈತರು ಹಾಗೂ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಅಗತ್ಯ ಇದೆ. ಜಲಾಶಯಗಳ ನೀರಿನ ಸದ್ಬಳಕೆ ಬಗ್ಗೆ ಸಂಶೋಧನೆ ಅಗತ್ಯ ಇದೆ. ಕರ್ನಾಟಕದಲ್ಲಿ 40 ಸಾವಿರ ಕೆರೆಗಳಿವೆ. ಆದರೆ, ಕೆರೆಗಳಿಗೆ ನೀರು ಬರುತ್ತಿಲ್ಲ. ಮಳೆ ನೀರಿನ‌ ಕಾಲುವೆಗಳ ಒತ್ತುವರಿ ತೆರವು ಹಾಗೂ ನವೀಕರಣ, ಹೂಳು ತೆಗೆಯುವ ಕಾರ್ಯ ಆಗಬೇಕಿದೆ. ವೈಜ್ಞಾನಿಕವಾಗಿ ಈ ಕಾಮಗಾರಿಗಳು ನಡೆದಾಗ ಮಾತ್ರ ನೀರು ಉಳಿಸಿಕೊಳ್ಳಲು ಸಾಧ್ಯ. ಇದಕ್ಕೆ ಸರ್ಕಾರದ ಸಣ್ಣ ನೀರುವಾರಿ ಇಲಾಖೆ ಮತ್ತು ಕಂದಾಯ ಇಲಾಖೆಗಳ ನಡುವೆ ಸಮನ್ವಯದ ಜೊತೆಗೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ ಎಂದರು.

ಬೆಂಗಳೂರಿನಲ್ಲಿ ಪ್ರತಿ ವರ್ಷ ಪ್ರವಾಹಕ್ಕೆ ಕೆರೆಗಳ ವಿನಾಶ ಕಾರಣ. ಕಟ್ಟಡ ತ್ಯಾಜ್ಯಗಳನ್ನು ಕೆರೆ, ನಾಲೆಗಳಿಗೆ ಸುರಿಯಲಾಗಿದೆ. ಘನತ್ಯಾಜ್ಯ ವಿಲೇವಾರಿ ಕಟ್ಟಡ ನಿರ್ಮಾತೃಗಳ‌ ಕರ್ತವ್ಯ. ಬೆಂಗಳೂರಿನ ವೃಷಭಾವತಿಯಂತಹ ನದಿಗಳ ಶುದ್ಧೀಕರಣ ಆಗಬೇಕಿದೆ. ಯುಜಿಡಿ ನೀರಿನ ಪುನರ್ ಬಳಕೆ ಆಗಬೇಕು. ನದಿ ನೀರಿನ ಮೇಲಿನ ಅವಲಂಬನೆ ಕಡಿಮೆ ಆಗಬೇಕು ಎಂದು ಅವರು ತಿಳಿಸಿದರು.

ಇದೇ ವೇಳೆ ರಾಜ್ಯ ಮುಕ್ತ ವಿವಿ ಮತ್ತು ಎಂಪ್ರಿ ಪರಿಸರ ಸಂರಕ್ಷಣೆಯ ಒಡಂಬಡಿಕೆಗೆ ಸಹಿ ಹಾಕಲಾಯಿತು. ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಶೈಕ್ಷಣಿಕ ಡೀನ್ ಪ್ರೊ.ಎನ್. ಲಕ್ಷ್ಮೀ, ಪರಿಸರ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ.ಟಿ.ಎಸ್. ಹರ್ಷ, ಸಹಾಯಕ ಪ್ರಾಧ್ಯಾಪಕರಾದ ಡಾ.ಜೆ.ಎಸ್. ಚಂದ್ರಶೇಖರ್, ಡಾ.ಎಚ್.ಆರ್. ಮೀನಾಕುಮಾರಿ, ಡಾ.ಎನ್.ಆರ್. ಪ್ರಿಯದರ್ಶಿನಿ, ಡಾ.ಜೆ. ಗಿರೀಶ ಇದ್ದರು. ಮೇಘನಾ ಪ್ರಾರ್ಥಿಸಿದರು.

----

‘ಪ್ರಕೃತಿ ತತ್ವಗಳನ್ನು ಅರಿತು ಅದಕ್ಕೆ ‌ತಕ್ಕಂತೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ‌ಪ್ಲಾಸ್ಟಿಕ್ ಮುಕ್ತ ಪ್ರದೇಶಗಳು ಆಗಬೇಕು‌. ಪರಿಸರ ಸಂರಕ್ಷಣೆ ಕೇವಲ‌ ಕಾನೂನಿನಲ್ಲಿ ಮಾತ್ರವಲ್ಲ, ಪ್ರತಿಯೊಬ್ಬರ ಕರ್ತವ್ಯ ಆಗಬೇಕು. ಸಮುದಾಯ ಇದರ ಜವಾಬ್ದಾರಿ ವಹಿಸಿಕೊಳ್ಳಬೇಕು. ಶುದ್ಧ ನೀರು, ಗಾಳಿ ಬಗ್ಗೆ ಪ್ರತಿಯೊಬ್ಬರಿಗೂ ಸಮಾನ ಹಕ್ಕಿದೆ.’

- ಬಿ.ಪಿ. ರವಿ, ಮಹಾ ನಿರ್ದೇಶಕ, ಎಂಪ್ರಿ