ಅನುಪಿನಕಟ್ಟೆ ಶ್ರೀ ರಾಮಕೃಷ್ಣ ಶಾಲೆಯಲ್ಲಿ ಪೋಷಕರ ಪಾದಪೂಜೆ

| Published : Jan 02 2024, 02:15 AM IST

ಅನುಪಿನಕಟ್ಟೆ ಶ್ರೀ ರಾಮಕೃಷ್ಣ ಶಾಲೆಯಲ್ಲಿ ಪೋಷಕರ ಪಾದಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ತಂದೆ-ತಾಯಿಯೇ ಪ್ರತ್ಯಕ್ಷ ದೇವರು ಎಂಬ ನಂಬಿಕೆ ಹೊಂದಿರುವ ಭಾರತದಲ್ಲಿ ಮಕ್ಕಳು ಹೆತ್ತವರನ್ನು ಗೌರವ ಭಾವನೆಯಿಂದ ಕಾಣುತ್ತಾರೆ. ಇಂಥ ಸಂಸ್ಕಾರವನ್ನು ಮನೆಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ದಾಟಿಸಲಾಗುತ್ತಿದೆ. ಶಾಲೆಗಳಲ್ಲೂ ಹೆತ್ತವರಿಗೆ ಗೌರವಿಸುವ, ದೇವರಂತೆ ತಿಳಿದು ಪಾದಪೂಜೆ ಸಲ್ಲಿಸುವ ಪಾಠವೂ ಹೇಳಿಕೊಡಲಾಗುತ್ತದೆ. ಇಂಥ ಪಾಠ ಶಿವಮೊಗ್ಗದ ಅನುಪಿನಕಟ್ಟೆಯ ಶ್ರೀ ರಾಮಕೃಷ್ಣ ಶಾಲೆಯಲ್ಲಿ ನಡೆಸಲಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾಡಿನ ಜನತೆ ಹೊಸ ವರ್ಷವನ್ನು ನಾನಾ ರೀತಿಯಲ್ಲಿ ಆಚರಿಸಿಕೊಂಡರು. ಆದರೆ, ಶಿವಮೊಗ್ಗ ನಗರದ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿಗಳು ಮಾತ್ರ ವಿಭಿನ್ನ ಮತ್ತು ವಿಶಿಷ್ಟವಾಗಿ ಹೊಸ ವರ್ಷವನ್ನು ಬರಮಾಡಿಕೊಂಡರು.

ರಾಮಕೃಷ್ಣ ವಿದ್ಯಾನೀಕೇತನ ಶಾಲೆ ವಿದ್ಯಾರ್ಥಿಗಳು ಕಳೆದ ಹಲವಾರು ವರ್ಷಗಳಿಂದ ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ. ಆದರೆ, ಇವರು ಹೊಸ ವರ್ಷವನ್ನು ಬರಮಾಡಿಕೊಳ್ಳುವುದು ಮಾತ್ರ ಸ್ವಲ್ಪ ವಿಭಿನ್ನವಾಗಿತ್ತು. 12 ವರ್ಷಗಳಿಂದ ಇಲ್ಲಿನ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ, ತಮ್ಮ ತಂದೆ-ತಾಯಿಗೆ ಪಾದಪೂಜೆ ನೆರವೇರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಇದಕ್ಕೆ ಶಾಲೆ ಸಂಸ್ಥೆಯವರು ಸಹ ಸಾಥ್ ನೀಡುತ್ತಿದ್ದಾರೆ.

ಶಿವಮೊಗ್ಗ ಹೊರವಲಯದ ಅನುಪಿನಕಟ್ಟೆಯ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲ ವಸತಿ ವಿದ್ಯಾಲಯದಲ್ಲಿ ಸೋಮವಾರ ಹಬ್ಬದ ಸಡಗರವಿತ್ತು. 750 ಮಕ್ಕಳು ತಮ್ಮ ತಂದೆ-ತಾಯಿ ಪಾದಪೂಜೆ ನಡೆಸುವ ಸಂಭ್ರಮ. ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಮಕ್ಕಳು ಹಾಗೂ ಪೋಷಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ರಂಗು ಮೂಡಿಸಿದರು.

ಹೊಸ ವರ್ಷಕ್ಕೆ ಇಲ್ಲಿನ ಮಕ್ಕಳು ಮಾಡಿದ ಪಾದಪೂಜೆ ತಂದೆ, ತಾಯಿಯಂದಿರ ಹೃದಯಕ್ಕೆ ತಟ್ಟಿತು. ಎಲ್ಲ ಮಕ್ಕಳ ಪೋಷಕರು ತಮ್ಮ ತಮ್ಮ ಮಕ್ಕಳಿಂದ ಪೂಜೆಗೆ ಅರ್ಹರಾಗಿ ಮಕ್ಕಳ ಶ್ರೇಯಸ್ಸಿಗೆ ಕಾರಣರಾದರು.

ಸೋಮವಾರ ಬೆಳಗ್ಗೆ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಮುಖ್ಯ ಘಟವಾದ ಜನ್ಮದಾತರ ಪಾದಪೂಜೆ ಸಮಾರಂಭ ಅತ್ಯಂತ ವ್ಯವಸ್ಥಿತವಾಗಿ ನಡೆಯಲು ಶಾಲೆ ಆಡಳಿತ ಮಂಡಳಿ ಕ್ರಮಕೈಗೊಂಡಿತ್ತು. ಮಕ್ಕಳು ಜನ್ಮದಾತರಿಗೆ ವಿಶೇಷವಾಗಿ ಶ್ರದ್ಧಾ ಭಕ್ತಿಯಿಂದ ಮಂತ್ರಾಕ್ಷತೆಯೊಂದಿಗೆ ಪಾದಪೂಜೆ ಮಾಡಿ ನಮಸ್ಕರಿಸಿದರು.

ಸಮಾರಂಭದಲ್ಲಿ ಜಡೆ ಸಂಸ್ಥಾನ ಮಠದ ಡಾ.ಮಹಾಂತ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಾಗರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮೀಜಿ ಜ್ಞಾನನಂದಜೀ ಮಹಾರಾಜ್ ಉಪಸ್ಥಿತರಿದ್ದರು. ಪಾದಪೂಜೆ ಜೊತೆಗೆ ಮೆರಿಟ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾ ಸಾಧಕ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದ ವಿಶೇಷವಾಗಿದ್ದವು.

ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ ಸದಸ್ಯ ಡಿ.ಎಂ.ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ನಿರಂತರವಾಗಿ ನಡೆಯುತ್ತಾ ಬಂದಿರುವ ಜನ್ಮದಾತರ ಪಾದಪೂಜೆ ಇಡೀ ರಾಜ್ಯದಲ್ಲಿ ಮಾದರಿ ಹಾಗೂ ವಿಶೇಷವೆಂದರು. ವ್ಯವಸ್ಥಾಪಕ ಟ್ರಸ್ಟಿ ಶೋಭಾ ವೆಂಕಟರಮಣ, ಅರುಣ್, ತೀರ್ಥೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

- - - ಕೋಟ್‌ ನನ್ನ ತಂದೆಯವರ ಬಹುದೊಡ್ಡ ಆಸೆಯಾಗಿದ್ದ ಶ್ರೀ ರಾಮಕೃಷ್ಣ ಆಶ್ರಮದ ಕಲಿಕೆ ಶಿವಮೊಗ್ಗದ ರಾಮಕೃಷ್ಣ ಶಾಲೆ ನನ್ನ ಪಾಲಿಗೆ ವರದಾನವಾಯಿತು. ಮೈಸೂರು ಸೇರಿದಂತೆ ಹಲವೆಡೆ ರಾಮಕೃಷ್ಣ ಆಶ್ರಮದ ಶಾಲೆಗೆ ಸೇರಲು ಕರೆದುಕೊಂಡು ಹೋಗಿದ್ದರು. ಆದರೆ, ಅಲ್ಲಿನ ಆರಂಭಿಕ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದೆ. ಇಲ್ಲಿಗೆ ಹೋಗಲು ತಿಳಿಸಿದ್ದರು. ಇಲ್ಲಿಯೂ ಅನುತ್ತೀರ್ಣನಾಗಿದ್ದೆ. ಈ ಸಂಸ್ಥೆಯ ಸಂಸ್ಥಾಪಕರಾದ ಡಿ.ಎಂ.ವೆಂಕಟರಮಣ ಅವರನ್ನು ವಿನಂತಿಸಿದರ ಮೇರೆಗೆ ನನಗೆ ಪ್ರವೇಶ ದೊರೆಯಿತು. ಅದು ನನ್ನ ಪಾಲಿಗೆ ಅದೃಷ್ಟವೇ ಹೌದು. ಬಿಜಾಪುರ ಮೂಲದಿಂದ ಬಂದ ನಾನು ಎಲ್ಲೆಡೆ ಸೋತು, ಇಲ್ಲಿ ಗೆದ್ದು ಹೋಗಿದ್ದೇನೆ. ವೈದ್ಯಕೀಯ ಪದವಿ ಪಡೆಯಲು ಈ ಶಾಲೆ ನೀಡಿದ ಆರಂಭಿಕ ಅಡಿಪಾಯವೇ ಕಾರಣ

- ಡಾ.ವಿನಯ್ ಕೆ. ಅಲಗುಂಡಿಗೆ, ಹಳೆಯ ವಿದ್ಯಾರ್ಥಿ

- - - -1ಎಸ್ಎಂಜಿಕೆಪಿ04:

ಶಿವಮೊಗ್ಗ ಹೊರವಲಯದ ಅನುಪಿನಕಟ್ಟೆಯ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲ ವಸತಿ ವಿದ್ಯಾಲಯದಲ್ಲಿ ಸೋಮವಾರ ವಿದ್ಯಾರ್ಥಿಗಳು ತಮ್ಮ ತಂದೆ, ತಾಯಿಗಳಿಗೆ ಪಾದಪೂಜೆ ನೆರವೇರಿಸಿದರು.