Anxiety among farmers who sowed kharif crops: Government should declare a drought.
- ಆಕಾಶದತ್ತ ಮುಖ ಮಾಡಿದ ರೈತ
---ಮಳೆ ಕೈಕೊಟ್ಟು ಸಂಕಷ್ಟಕ್ಕೆ ಸಿಲುಕಿದ ರೈತರು । ಸರ್ಕಾರ ರೈತನ ಬದುಕಿಗೆ ಅಗತ್ಯ ನೆರವು ನೀಡಬೇಕು
-----ಕನ್ನಡಪ್ರಭ ವಾರ್ತೆ ಕರಜಗಿ
ವಾರದಲ್ಲಿ ಉತ್ತಮ ಮಳೆಯಾದರೆ ಬಿತ್ತನೆ ಮಾಡಿದ ಬೆಳೆ ಉಳಿಯುತ್ತದೆ. ಇಲ್ಲದಿದ್ದರೆ ಎಲ್ಲವೂ ಕೈತಪ್ಪುತ್ತದೆ. ಇದು ಅಫಜಲಪುರ ತಾಲೂಕಿನ ರೈತರ ಬಾಯಲ್ಲಿ ಕೇಳಿ ಬರುತ್ತಿರುವ ಆತಂಕದ ಮಾತು.ಮುಂಗಾರು ಹಂಗಾಮಿನ ಆರಂಭದಲ್ಲಿ ಅಲ್ಲಲ್ಲಿ ಸುರಿದ ಮಳೆಯನ್ನು ನಂಬಿಕೊಂಡು ಬಿತ್ತನೆ ಮಾಡಿದ್ದ ರೈತರು, ಇದೀಗ ಮಳೆ ಕೈಕೊಟ್ಟ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ತೊಗರಿ, ಹತ್ತಿ, ಹೆಸರು, ಸೂರ್ಯ ಕಾಂತಿ, ಉದ್ದು ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ.ಆದರೆ, ಕಳೆದ ಕೆಲವು ದಿನಗಳಿಂದ ಮಳೆಯಾಗದ ಕಾರಣ ಹೊಲಗಳಲ್ಲಿನ ತೇವಾಂಶ ಕಡಿಮೆಯಾಗಿದ್ದು, ಬೆಳೆಗಳು ಬಿಸಿಲಿನ ತಾಪಕ್ಕೆ ಬಾಡತೊಡಗಿವೆ.
ಜೂನ್ ಮೊದಲ ವಾರದಲ್ಲಿ ಕೆಲವೆಡೆ ಮಳೆಯಾದ ಹಿನ್ನೆಲೆಯಲ್ಲಿ ರೈತರು ಅರ್ಧದಷ್ಟು ಬಿತ್ತನೆ ಕಾರ್ಯ ಕೈಗೊಂಡಿದ್ದರು.ಆದರೆ, ಶೇ.94ರಷ್ಟು ಮಳೆ ಕೊರತೆಯಾಗಿರುವುದರಿಂದ ಮೊಳಕೆಯ ಹಂತದಲ್ಲೇ ಬೆಳೆಗಳು ಮುರುಟಿ ಹೋಗುವ ಆತಂಕ ರೈತರನ್ನು ಕಾಡುತ್ತಿದೆ. ಸೆಕೆಯ ವಾತಾ ವರಣ ಬೇಸಿಗೆಯ ಬಿಸಿಲನ್ನು ನೆನಪಿಸುತ್ತಿದೆ. ಮೋಡ ಕವಿದ ವಾತಾವರಣ ಕಂಡರೂ ಮಳೆ ಹನಿಯಾಗಿ ಭೂಮಿಗೆ ಬೀಳದಿರುವುದು ರೈತರಲ್ಲಿ ನಿರಾಸೆ ಮೂಡಿಸಿದೆ.
ಭೂಮಿಯ ದಾಹ ನೀಗದಿದ್ದರೆ ಬೆಳೆಯುತ್ತಿರುವ ಬೆಳೆಗಳು ಹಾಳಾಗುವ ಸಾಧ್ಯತೆ ಇದೆ. ಬಿತ್ತನೆ ಬೀಜ, ರಸಗೊಬ್ಬರ, ಕಾರ್ಮಿಕರ ಕೂಲಿ ಸೇರಿದಂತೆ ಕೃಷಿ ವೆಚ್ಚಗಳು ರೈತರ ಮೇಲೆ ಹೆಚ್ಚುವರಿ ಹೊರೆಯಾಗಿವೆ.ಮುಂಗಾರು ಹಂಗಾಮಿನಲ್ಲಿ ಅಲ್ಲಲ್ಲಿ ಮಳೆಯಾದ ನಂತರ ರೈತರು ಹೆಸರು ಬಿತ್ತನೆ ಮಾಡಿದ್ದಾರೆ.
ಆದರೆ, ಈಗ ಮಳೆ ಇಲ್ಲದ ಕಾರಣ ಬೆಳೆ ಬಾಡುತ್ತಿದೆ. ರೈತರು ಸಾಲ ಮಾಡಿ ಕೃಷಿ ಮಾಡಿದ್ದಾರೆ. ಇನ್ನೂ ಎರಡು-ಮೂರು ದಿನಗಳಲ್ಲಿ ಮಳೆ ಬರದಿದ್ದರೆ ಮರುಬಿತ್ತನೆ ಮಾಡುವ ಪರಿಸ್ಥಿತಿ ಎದುರಾಗಬಹುದು. ಸರ್ಕಾರ ರೈತನ ಬದುಕಿಗೆ ಅಗತ್ಯ ನೆರವು ನೀಡಬೇಕು.ಪ್ರತಿದಿನ ಬೆಳಿಗ್ಗೆ ಎದ್ದಾಕ್ಷಣ ಆಕಾಶದತ್ತ ನೋಡುತ್ತೇವೆ. ಎರಡು-ಮೂರು ದಿನಗಳಲ್ಲಿ ಮಳೆ ಸುರಿದರೆ ರೈತನ ಬದುಕು ಹಸಿರಾಗಲಿದೆ. ಬಿತ್ತನೆ ಮಾಡದ ರೈತರಿಗೆ ಮಳೆ ಬಾರದಿದ್ದರೆ ಏನು ಮಾಡಬೇಕು ಎಂಬ ಚಿಂತೆ ಕಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಗಿ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ.
....ಕೋಟ್.....ರೈತರು ಸಾಲ ಮಾಡಿ ಬೀಜ, ಗೊಬ್ಬರ ಹಾಗೂ ಕೃಷಿ ಕಾರ್ಯಗಳಿಗೆ ಹಣ ವೆಚ್ಚ ಮಾಡಿದ್ದಾರೆ. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಆರಂಭವಾದ ಕೃಷಿ ಚಟುವಟಿಕೆಗಳು ಇದೀಗ ಅನಿಶ್ಚಿತತೆಯ ಅಂಚಿಗೆ ತಲುಪಿವೆ. ಹೊಲಗಳಿಗೆ ಹೋದಾಗ ಹಸಿರಾಗಿರಬೇಕಿದ್ದ ಬೆಳೆಗಳು ಬಾಡುತ್ತಿರುವ ದೃಶ್ಯ ರೈತರ ಆತಂಕ ಮತ್ತಷ್ಟು ಹೆಚ್ಚಿಸಿದೆ. ಮುಂಗಾರು ಹಂಗಾಮಿನ ಕೃಷಿಯ ಯಶಸ್ಸು ಈಗ ಸಂಪೂರ್ಣವಾಗಿ ಮಳೆಯ ಮೇಲೆ ನಿಂತಿದೆ.
-ಶಾಂತಪ್ಪ ವಾಯಿ, ರೈತ ಮುಖಂಡ----
....ಕೋಟ್.....ಮುಂದಿನ ಕೆಲ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಹೊಲಗಳಲ್ಲಿ ಮತ್ತೆ ಹಸಿರು ಚಿಗುರು ಮೂಡಲಿದೆ. ಇಲ್ಲದಿದ್ದರೆ ಅನ್ನದಾತನ ಶ್ರಮ ಮತ್ತು ಕನಸು ನುಚ್ಚು ನೂರಾಗುತ್ತದೆ. ಮಳೆಯ ಕೊರತೆ ಮುಂದುವರಿದರೆ ಬೆಳೆ ನಷ್ಟ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತಕ್ಷಣವೇ ಬೆಳೆ ಸಮೀಕ್ಷೆ ನಡೆಸಬೇಕು.
ಅಗತ್ಯವಿದ್ದರೆ ಮಧ್ಯಂತರ ಪರಿಹಾರ ಘೋಷಿಸಬೇಕು. ಮರುಬಿತ್ತನೆ ಅನಿವಾರ್ಯವಾದರೆ ಗುಣಮಟ್ಟದ ಬೀಜ ಹಾಗೂ ಅಗತ್ಯ ಕೃಷಿ ಸಾಮಗ್ರಿಗಳನ್ನು ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.-ಬಸವರಾಜ ಮಹಾದೇವ ಸಂಗೋಳಗಿ, ರೈತ ಮುಖಂಡ
