ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಘಟಪ್ರಭ ಮತ್ತು ಕೃಷ್ಣಾ ನದಿಯ ನೀರಿನ ಪ್ರಮಾಣ ಪ್ರತಿದಿನ ಹೆಚ್ಚುತ್ತಲಿದ್ದು, ನದಿ ಪಾತ್ರದ ಜನರು ಆತಂಕ ಪಡುವಂತಾಗಿದೆ. ಜಿಲ್ಲೆಯ ನದಿ ಪಾತ್ರದ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಸ್ಥಳಾಂತರಗೊಂಡ ಕುಟುಂಬದ ಎಲ್ಲ ಸದಸ್ಯರಿಗೆ ಊಟ, ವಸತಿ, ಆರೋಗ್ಯ, ಶೌಚಾಲಯ, ಬಟ್ಟೆ, ಹಾಸಿಗೆ, ಹೊದಿಕೆ ಸೇರಿದಂತೆ ಸಕಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಜಿಲ್ಲಾ ಮತ್ತು ಆಯಾ ತಾಲೂಕಾ ಆಡಳಿತ ಸಕಲ ಸಿದ್ದತೆ ಮಾಡಿಕೊಳ್ಳಬೇಕು. ಅಲ್ಲದೇ, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಶನಿವಾರ ಸಂಜೆ ಪಟ್ಟಣದ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ, ಬೀಳಗಿ, ಬಾಗಲಕೋಟ ಸೇರಿದಂತೆ ಎಲ್ಲ ಅಧಿಕಾರಿಗಳು ಪ್ರವಾಹ ಎದುರಿಸಲು ಸನ್ನದ್ಧರಾಗಬೇಕು. ಮುಖ್ಯವಾಗಿ ಕಂದಾಯ, ಆರೋಗ್ಯ, ಪಶು ಇಲಾಖೆ ಸೇರಿದಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು, ಕಂಟ್ರೋಲ್ ರೂಂಗಳನ್ನು ತೆರೆದು ಆಗಾಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹಗಲಿರುಳು ಎನ್ನದೆ ತಮಗೆ ವಹಿಸುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಪ್ರವಾಹ ಪೀಡಿತರಿಂದ ದೂರುಗಳು ಬಂದರೆ ಅವರ ಮೇಲೆ ಸೂಕ್ತಕ್ರಮ ಜರುಗಿಸಬೇಕಾಗುತ್ತದೆ ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
2019ರಲ್ಲಿನ ಪ್ರವಾಹವನ್ನು ನೆನಪಿಸಿಕೊಂಡು 2019ರ ಮಾರ್ಗಸೂಚನೆಯನ್ನು ಗಮನದಲ್ಲಿಟ್ಟು ಕೆಲಸ ಮಾಡಬೇಕು, ಗ್ರಾಮದಲ್ಲಿ ವಾಸ್ತವ್ಯ ಮಾಡುವ ಪ್ರಸಂಗ ಒದಗಿ ಬಂದರೆ ಗ್ರಾಮದಲ್ಲಿಯೇ ವಾಸ್ತವ್ಯ ಮಾಡಿ. ಸಂತ್ರಸ್ಥರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದರು.ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರು ಸಲಹೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳು ತಮಗೆ ಒಪ್ಪಿಸಿರುವ ಕೆಲಸಗಳನ್ನು ಸರಿಯಾಗಿ ನಿರ್ವಹಿಸಬೇಕು.ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು.
ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಪರಶುರಾಮ ಸಿನೋಳ್ಕರ್, ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಕರ, ಜಿಲ್ಲಾ ನೋಡಲ್ ಅಧಿಕಾರಿ ಎನ್.ವೈ.ಬಸರಿಗಿಡದ ಹಾಗೂ ಎಲ್ಲ ತಹಸೀಲ್ದಾರ್‌ಗಳು ಹಾಜರಿದ್ದರು.