ಪೆರಿಫೆರಲ್‌ ರಿಂಗ್‌ ರಸ್ತೆಗೆ ಬಿಡ್‌ದಾರರ ನಿರಾಸಕ್ತಿ; 3ನೇ ಬಾರಿಯೂ ಟೆಂಡರ್‌ ಬಹುತೇಕ ವಿಫಲ?

| Published : Mar 21 2024, 01:46 AM IST

ಪೆರಿಫೆರಲ್‌ ರಿಂಗ್‌ ರಸ್ತೆಗೆ ಬಿಡ್‌ದಾರರ ನಿರಾಸಕ್ತಿ; 3ನೇ ಬಾರಿಯೂ ಟೆಂಡರ್‌ ಬಹುತೇಕ ವಿಫಲ?
Share this Article
  • FB
  • TW
  • Linkdin
  • Email

ಸಾರಾಂಶ

ಮಹತ್ವಾಕಾಂಕ್ಷೆಯ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ (ಪೆರಿಫೆರಲ್‌ ವರ್ತುಲ ರಸ್ತೆ) ಯೋಜನೆಯ ಜಾಗತಿಕ ಟೆಂಡರ್‌ನಲ್ಲಿ ಬಿಡ್‌ ಮಾಡಲು ಬಿಡ್‌ದಾರರು ಹೆಚ್ಚಿನ ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಮೂರನೇ ಬಾರಿಯೂ ಟೆಂಡರ್ ಪ್ರಕ್ರಿಯೆ ವಿಫಲವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹತ್ವಾಕಾಂಕ್ಷೆಯ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ (ಪೆರಿಫೆರಲ್‌ ವರ್ತುಲ ರಸ್ತೆ) ಯೋಜನೆಯ ಜಾಗತಿಕ ಟೆಂಡರ್‌ನಲ್ಲಿ ಬಿಡ್‌ ಮಾಡಲು ಬಿಡ್‌ದಾರರು ಹೆಚ್ಚಿನ ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಮೂರನೇ ಬಾರಿಯೂ ಟೆಂಡರ್ ಪ್ರಕ್ರಿಯೆ ವಿಫಲವಾಗಿದೆ.

ಈ ಹಿಂದೆ ಎರಡು ಬಾರಿ ಯೋಜನೆಗೆ ಟೆಂಡರ್ ಕರೆದಿದ್ದರೂ ಯಾವುದೇ ಸಂಸ್ಥೆ ಬಿಡ್‌ ಮಾಡಲು ಒಲವು ತೋರಿರಲಿಲ್ಲ. ಇತ್ತೀಚೆಗೆ ಬಿಡಿಎ ಪೆರಿಫೆರಲ್‌ ವರ್ತುಲ ರಸ್ತೆ-2 ಯೋಜನೆಯನ್ನು ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಎಂದು ಹೆಸರು ಬದಲಿಸಿ ಫೆ.27ರಂದು ಜಾಗತಿಕ ಟೆಂಡರ್‌ ಕರೆದಿತ್ತು. ಈ ಪ್ರಕಾರ ಟೆಂಡರ್‌ ಸ್ವೀಕರಿಸಲು ಏಪ್ರಿಲ್‌ 3 ಕಡೆಯ ದಿನವಾಗಿದೆ. ಒಂದು ಸಂಸ್ಥೆ ಮಾತ್ರ ಬಿಡ್‌ ಮಾಡಲು ಮುಂದೆ ಬಂದಿದ್ದು ಇತರೆ ಸಂಸ್ಥೆಗಳು ಬಿಡ್‌ ಮಾಡಲು ನಿರಾಸಕ್ತಿ ತೋರಿಸುತ್ತಿವೆ. ಇದರಿಂದ ಬಿಬಿಸಿ ಯೋಜನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಲಿದೆ.

ಪಿಆರ್‌ಆರ್‌ ನಿರ್ಮಾಣಕ್ಕಾಗಿ 2007ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆಗಲೇ ಯೋಜನೆ ಕಾಮಗಾರಿ ಆರಂಭಿಸಿದ್ದರೆ ವೆಚ್ಚದ ಗಾತ್ರವೂ ಕಡಿಮೆಯಾಗುತ್ತಿತ್ತು. ಆದರೆ, ಇದೀಗ ನಿರ್ಮಾಣ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಪರಿಹಾರದ ಮೊತ್ತವೂ ದುಬಾರಿಯಾಗಿದೆ. ಅಂದಾಜಿನ ಪ್ರಕಾರ ಯೋಜನೆ ಭೂಸ್ವಾಧೀನಕ್ಕೆ ಸುಮಾರು ₹20 ಸಾವಿರ ಕೋಟಿಗಳಷ್ಟು ಖರ್ಚಾಗಲಿದೆ. ಈ ಹಣವನ್ನು ಗುತ್ತಿಗೆದಾರರೇ ಠೇವಣಿ ಇಡಬೇಕೆಂದು ಬಿಡಿಎ ಷರತ್ತು ವಿಧಿಸಿದೆ. ಜೊತೆಗೆ ಕಾರಿಡಾರ್‌ ನಿರ್ಮಾಣಕ್ಕೆ ₹5-6 ಸಾವಿರ ಕೋಟಿ ವೆಚ್ಚವಾಗಲಿದೆ. ಹೀಗಾಗಿ ಬಿಡ್‌ದಾರರು ಬಿಡ್‌ನಲ್ಲಿ ಭಾಗವಹಿಸದೆ ದೂರ ಉಳಿಯುತ್ತಿದ್ದಾರೆ ಎನ್ನಲಾಗಿದೆ.

ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 100 ಮೀಟರ್ ಅಗಲದ, 73 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಸಿಲಿಕಾನ್ ಸಿಟಿ ಮೇಲಾಗುತ್ತಿರುವ ಸಂಚಾರ ದಟ್ಟಣೆ ತಗ್ಗಿಸಲು ಈ ಯೋಜನೆಗೆ ವೇಗ ಕೊಡಲು ತೀರ್ಮಾನಿಸಿ, ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾಮಗಾರಿ ಕೈಗೊಳ್ಳಲು ಬಿಡಿಎ ಜಾಗತಿಕ ಟೆಂಡರ್ ಕರೆದಿತ್ತು. ತಿಂಗಳಾದರೂ ಒಂದು ಸಂಸ್ಥೆ ಮಾತ್ರ ಅರ್ಜಿ ಸಲ್ಲಿಸಿದ್ದು ಯೋಜನೆಗೆ ಹಿನ್ನಡೆಯಾಗುತ್ತಿದೆ.

ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಎಂಟು ಪಥಗಳ ರಸ್ತೆಯಾಗಿದ್ದು, 73 ಕಿ.ಮೀ. ಇರಲಿದೆ. ಇದು ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ ವೇ ಆಗಿದ್ದು, ಹೆಸರುಘಟ್ಟ ರಸ್ತೆ, ದೊಡ್ಡಬಳ್ಳಾಪುರ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ರಸ್ತೆ, ಹಳೆ ಮದ್ರಾಸ್‌ ರಸ್ತೆ, ಹೊಸಕೋಟೆ ರಸ್ತೆ ಮತ್ತು ಸರ್ಜಾಪುರ ಸೇರಿದಂತೆ 77 ಗ್ರಾಮಗಳ ಮೂಲಕ ಸಾಗಿ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತದೆ. ಅದಕ್ಕಾಗಿ ಬಿಡಿಎ ಈಗಾಗಲೇ 2,596 ಎಕರೆ ಜಾಗವನ್ನು ಗುರುತಿಸಿದೆ.

ರೈತರ ಆಕ್ರೋಶ:

ಪಿಆರ್‌ಆರ್‌ ರಸ್ತೆಗೆಂದು ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಈವರೆಗೆ ಪರಿಹಾರ ನೀಡಿಲ್ಲ. ಈಗಾಗಲೇ ನೋಟಿಫಿಕೇಶನ್‌ ಆಗಿರುವುದರಿಂದ ಭೂಮಿಯನ್ನು ಮಾರಾಟ ಮಾಡಲು ಸಹ ಆಗುತ್ತಿಲ್ಲ. ಎಲ್ಲೆಡೆ ಭೂಮಿ ಬೆಲೆ ಗಗನಕ್ಕೆ ಏರಿದ್ದರೂ ಇನ್ನೂ ಹಳೆಯ ಬಿಡಿಎ ನಿಯಮದಲ್ಲಿ ಬಿಡಿಗಾಸು ಕೊಡಲು ಪ್ರಾಧಿಕಾರ ಯತ್ನಿಸುತ್ತಿದೆ. ಅದನ್ನು ವಿರೋಧಿಸಿ ನ್ಯಾಯಾಲಯಕ್ಕೂ ಸಹ ಅರ್ಜಿ ಹಾಕಿದ್ದು, 2013ರ ಭೂಸ್ವಾಧೀನ ನಿಯಮದಡಿ ಪರಿಹಾರ ಕೊಡುವಂತೆ ಒತ್ತಾಯಿಸುತ್ತಲೇ ಇದ್ದೇವೆ. ಬಿಡಿಎ ಯೋಜನೆ ಕೈಬಿಟ್ಟು ಭೂಮಿಯನ್ನು ರೈತರಿಗೆ ಹಿಂದಿರುಗಿಸಬೇಕು. ಇಲ್ಲವೇ ಭೂಮಿಗೆ ತಕ್ಕಂತೆ ಪರಿಹಾರ ಕೊಡಬೇಕೆಂದು ಪಿಆರ್‌ಆರ್‌ ರೈತ ಮತ್ತು ನಿವೇಶನದಾರರ ಸಂಘ ಆಗ್ರಹಿಸಿದೆ.