ಸಾರಾಂಶ
ಪ್ರವಾಸಿಗರಿಗೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಸ್ವಚ್ಛತೆ ಪಾಠ ಹೇಳಿದ್ದಾರೆ. ರಸ್ತೆಗೆ ಎಸೆದ ಕಸ ಅವರಿಂದಲೇ ತೆರವು ಮಾಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಳೆಗಾಲದಲ್ಲಿ ಕೊಡಗಿನ ಸೌಂದರ್ಯ ಆಸ್ವಾದಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗೆ ಪ್ರವಾಸಕ್ಕೆ ಬರುವವರು ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಬಿಸಾಡಿ ಜಿಲ್ಲೆಯ ಅಂದಗೆಡಿಸಿವುದು ಮಾಮೂಲಿ ಆಗಿದೆ. ಇದೇ ರೀತಿ ಕಸ ಎಸೆದು ಹೋಗುತ್ತಿದ್ದ ಪ್ರವಾಸಿಗರಿಗೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಸ್ವಚ್ಛತೆ ಪಾಠ ಹೇಳಿದ್ದು, ರಸ್ತೆಗೆ ಎಸೆದ ಕಸವನ್ನ ಅವರಿಂದಲೇ ತೆರವು ಮಾಡಿಸಿದ್ದಾರೆ.ಈ ವೀಡಿಯೋ ದೃಶ್ಯ ಈಗ ವೈರಲ್ ಆಗಿದೆ.
ಮಡಿಕೇರಿ ನಗರದ ಮೈಸೂರು ರಸ್ತೆಯಲ್ಲಿ ಇತ್ತೀಚೆಗೆ ಪ್ರವಾಸಿಗರು ಕಾರಿನಿಂದ ಕಸ ಪ್ಲಾಸ್ಟಿಕ್ ಎಸೆದು ಹೋಗುತ್ತಿದ್ದರು. ಇದನ್ನು ಕಂಡ ಮಾಜಿ ಶಾಸಕ ಅಪ್ಪಚ್ಚು ರಂಜನ್, ಪ್ರವಾಸಿಗರ ಕಾರನ್ನು ತಡೆದು ರಸ್ತೆಗೆ ಎಸೆದ ಪ್ಲಾಸ್ಟಿಕ್ ತೆಗೆಸಿದ್ದಾರೆ.ಕೊಡಗು ಡಸ್ಟ್ ಬಿನ್ನಾ..?: ವೀಕೆಂಡ್‌ನಲ್ಲಿ ಕೊಡಗಿನತ್ತ ಬರುವ ಪ್ರವಾಸಿಗರಿಂದ ಪ್ರಕೃತಿ ಮೇಲೆ ದೌರ್ಜನ್ಯ, ಕೊಡಗಿಗೆ ಬಂದು ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸ ಎಸೆಯುತ್ತಿದ್ದೀರಾ. ಗಾಡಿ ಸೀಜ್ ಮಾಡಿಸಲಾ ಎಂದು ರಂಜನ್ ಪ್ರವಾಸಿಗರ ವಿರುದ್ಧ ಆಕ್ರೋಶಗೊಂಡರು.
ಇನ್ನೊಂದು ಪ್ರಕರಣದಲ್ಲಿ, ಮತ್ತೊಂದೆಡೆ ರಾಷ್ಟೀಯ ಹೆದ್ದಾರಿ- 275ರಲ್ಲಿ ಬೋಯಿಕೇರಿಯಲ್ಲಿ ಪ್ಲಾಸ್ಟಿಕ್ ಎಸೆದ ಪ್ರವಾಸಿಗರಿಂದ ಸ್ಥಳೀಯರು ಕಸ ತೆಗೆಸಿದ್ದಾರೆ. ಮಡಿಕೇರಿ ಸಮೀಪದ ಬೋಯಿಕೇರಿ ಬಳಿ ನಡೆದ ಘಟನೆ ನಡೆದಿದ್ದು, ಗೋಪಿನಾಥ್ ಎಂಬವರು ಕಸ ಎಸೆದ ವಾಹನವನ್ನ ತಡೆದು ಅವರಿಂದಲೇ ಕಸ ತೆಗೆಸಿದ್ದಾರೆ. ಪ್ಲಾಸ್ಟಿಕ್ ಎಸೆಯಬೇಡಿ ಅಂತ ಹೇಳಿದ ಸ್ಥಳೀಯರ ಮೇಲೆಯೇ ಪ್ರವಾಸಿಗರ ದರ್ಪ ತೋರುತ್ತಾರೆ. ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಬನ್ನಿ ಆದರೆ ಕೊಡಗಿನ ಪ್ರಕೃತಿಗೆ ಹಾನಿ ಮಾಡ ಬೇಡಿ ಎಂದು ಸ್ಥಳೀಯರು ಮನವಿ ಮಾಡಿರುವುದು ಇನ್ನೊಂದು ವಿಡಿಯೋ ದೃಶ್ಯದಲ್ಲಿ ದಾಖಲಾಗಿದೆ.