ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಲೆಮಹದೇಶ್ವರ ಬೆಟ್ಟದಲ್ಲಿ ಕರೋಕೆ ಹಾವಳಿ ತಪ್ಪಿಸಿ, ವೃತ್ತಿ ಹಾಗೂ ಹವ್ಯಾಸಿ ಕಲಾವಿದರಿಗೆ ತಿಂಗಳ ಅಮಾವಾಸ್ಯೆ ಕಾರ್ಯಕ್ರಮದ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಜಿಲ್ಲೆಯ ಕಲಾವಿದರು ನಗರದಲ್ಲಿ ಗುರುವಾರ ಮನವಿ ಸಲ್ಲಿಸಿದರು.ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್‌ಗೆ ಮನವಿ ಪತ್ರ ಸಲ್ಲಿಸಿದರು. ರಂಗವಾಹಿನಿ ಜಿಲ್ಲಾಧ್ಯಕ್ಷ ಸಿ.ಎಂ ನರಸಿಂಹಮೂರ್ತಿ ಮಾತನಾಡಿ, ಕನ್ನಡ ಜನಪದ ಕಾವ್ಯ ಲೋಕದ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವಂಥ ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ ಕಾವ್ಯಗಳನ್ನು ಜಗತ್ತಿಗೆ ನೀಡಿದ ಜಿಲ್ಲೆ ಚಾಮರಾಜನಗರ. ಜಗತ್ತಿಗೆ 2ನೇ ಮಹಾಕಾವ್ಯವೆಂದು ಪ್ರಸಿದ್ಧಿ ಹೊಂದಿದ ಮಲೆಮಹದೇಶ್ವರ ಕಾವ್ಯವನ್ನು ಗುಡ್ಡರು ಕಂಸಾಳೆ ಕಲಾವಿದರು ನೀಲಗಾರರು ಎಂಬ ವೃತ್ತಿ ಗಾಯಕರು ಹಾಡುತ್ತಾರೆ. ಇವರೆಲ್ಲ ಕಲೆಯನ್ನೇ ಅವಲಂಬಿಸಿಯೇ ಜೀವನ ನಡೆಸುತ್ತಿದ್ದಾರೆ ಎಂದರು.
ಇಂತಹ ಜನಪದ ಕಲಾವಿದರು ಉಪದಾನದ ಮೂಲಕ ತಮ್ಮ ಕಾವ್ಯ ಪರಂಪರೆಯನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಉಳಿಸಿ ಬೆಳೆಸುತ್ತಿದ್ದಾರೆ. ಮಹದೇಶ್ವರ ಕಾವ್ಯ ಹಾಡುವ ಇಲ್ಲಿನ ಸ್ಥಳೀಯ ಜನಪದ ಕಲಾವಿದರು ಉಪದಾನದ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಮಹದೇಶ್ವರ ಬೆಟ್ಟದಲ್ಲಿ ಕಾನೂನು ನೆಪ ಮಾಡಿ ಉಪದಾನ ನಿಲ್ಲಿಸಿದ್ದಾರೆ ಇದನ್ನು ಸ್ವಾಗತಿಸೋಣ. ಆದರೆ ಉಪದಾನ ನಿಲ್ಲಿಸುವಂತೆ ಹೇಳಿದ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಈ ಜಾನಪದ ಕಲಾವಿದರಿಗೆ ಪರ್ಯಾಯ ಮಾರ್ಗ ತೋರದೆ ಅನ್ಯಾಯ ಮಾಡಿದೆ ಎಂದು ತಿಳಿಸಿದರು.ನಮ್ಮ ಅಕ್ಕ ಪಕ್ಕದ ರಾಜ್ಯಗಳಲ್ಲಿ ಆ ಪ್ರದೇಶದ ಕಲಾವಿದರಿಗೆ ಅನುಕೂಲ ಮಾಡಲು ಪ್ರತ್ಯೇಕ ವೇದಿಕೆ ನಿರ್ಮಿಸಿ ಪ್ರೋತ್ಸಾಹಿಸುತ್ತಾರೆ. ಆದರೆ ನಮ್ಮ ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ಜಾನಪದ ಕಲಾವಿದರಿಗೆ ಯಾವುದೇ ಪ್ರೋತ್ಸಾಹ ಇರುವುದಿಲ್ಲ. ಹಬ್ಬ ಹರಿ ದಿನಗಳಲ್ಲಿ ಮಾತ್ರ ಇವರಿಗೆ ಅವಕಾಶ ನೀಡಿ ನಂತರ ಕೈ ಚೆಲ್ಲಿ ಬಿಡುತ್ತಾರೆ ಎಂದು ದೂರಿದರು.ಇತ್ತೀಚೆಗೆ ಕರೋಕೆ ಹಾಡುವ ಕಲಾವಿದರಿಗೆ ಹೆಚ್ಚು ಅವಕಾಶ ನೀಡುತ್ತಿದ್ದಾರೆ ಇದು ನಿಲ್ಲಬೇಕು. ಇದು ನಿಜವಾದ ವೃತ್ತಿ ಜಾನಪದ ಕಲಾವಿದರಿಗೆ ಮಾಡುವ ಅವಮಾನ. ಪ್ರತಿ ಅಮಾವಾಸ್ಯೆ ಮತ್ತು ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ವೃತ್ತಿ ಹಾಗೂ ಹವ್ಯಾಸಿ ಜಾನಪದ ಕಲಾವಿದರಿಗೆ ಪ್ರತ್ಯೇಕ ಅವಕಾಶ ನೀಡಿ ಮಲೆ ಮಹದೇಶ್ವರ ಸ್ವಾಮಿಯ ಸಮಗ್ರ ಕಾವ್ಯ ಕಲೆಯ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿದರು.
ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ನಮ್ಮ ಮೂಲ ಜಾನಪದ ಕಲೆಗಳ ಪರಿಚಯ ಮತ್ತು ಜಾಗೃತಿ ಮೂಡಿಸಬೇಕು. ಈ ಬಗ್ಗೆ ಸರ್ಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲೆಯ ಸಮಸ್ತ ಜಾನಪದ ಕಲಾವಿದರು ಒತ್ತಾಯಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ದೊಡ್ಡಗವಿ ಬಸಪ್ಪ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೀಲಗಾರ ನಿಂಗಶೆಟ್ಟಿ, ಜಾನವಿ ಜಾನಪದ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೈಲಾಸ ಮೂರ್ತಿ ಎಂ, ಜಾನಪದ ಕಲಾವಿದರಾದ ಗೌರಿಶಂಕರ, ಆಲ್ಕೆರೆ ಶಿವಕುಮಾರ್, ಕುಮಾರನಪುರ ಶಿವಕುಮಾರ್, ನಂಜರಾಜಪುರ ಮಹೇಶ್ ಇತರರು ಇದ್ದರು.