ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ಈ ಹಿಂದೆ ನಡೆದು ಬಂದ ರೂಢಿ ಸಂಪ್ರದಾಯದಂತೆ ಶ್ರೀಕಂಠೇಶ್ವರ ಸ್ವಾಮಿಯವರ ಅಂಧಕಾಸುರ ಸಂಹಾರ ಕಾರ್ಯಕ್ರಮ ಜರುಗಬೇಕು ಎಂದು ಆಗ್ರಹಿಸಿ ಶ್ರೀಕಂಠೇಶ್ವರ ಭಕ್ತ ಮಂಡಳಿಯ ಸದಸ್ಯರು ದೇವಾಲಯದ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಯುವ ಬ್ರಿಗೇಡ್ ದಕ್ಷಿಣ ವಲಯ ಸಂಚಾಲಕ ಚಂದ್ರಶೇಖರ್ ಮಾತನಾಡಿ, ಕಳೆದ ವರ್ಷ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಅಂಧಕಾಸುರ ಸಂಹಾರ ಉತ್ಸವ ವೇಳೆ ಅಂಧಕಾಸುರನ ಚಿತ್ರಪಟ ಮಹಿಷನ ಚಿತ್ರ ಹೋಲುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಕಾರಣ ಗೊಂದಲ ಉಂಟಾಗಿ ಅಚಾತುರ್ಯ ಘಟನೆಗಳು ಸಂಭವಿಸಿದ್ದವು. ಈ ಗೊಂದಲ ನಿವಾರಣೆಗಾಗಿ ತಾಲೂಕು ಆಡಳಿತ ಜ. 9 ರಂದು ತಾಲೂಕು ಕಚೇರಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಆ ಸಭೆಯಲ್ಲಿ ಮಹಿಷಾಸುರನನ್ನು ಹೋಲುವ ಚಿತ್ರಪಟವನ್ನು ತೆಗೆದು ಶಿವ ಪುರಾಣದಲ್ಲಿನ ಅಂಧಕಾಸುರನ ವರ್ಣನೆಯಂತೆ ಚಿತ್ರ ಬಿಡಿಸಲಾಗಿದೆ ಆ ಚಿತ್ರಪಟವನ್ನು ಅಳವಡಿಸಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಾಲೂಕು ಆಡಳಿತ ಹೇಳಿದ್ದರಿಂದ ನಂಜುಂಡೇಶ್ವರನ ಭಕ್ತರಾದ ನಾವು ಸಮ್ಮತಿ ಸೂಚಿಸಿದ್ದೇವು.
ಆದರೇ ಅಂಧಕಾಸುರ ಸಂಹಾರದ ವಿರೋಧಿಗಳು ಅಂಧಕಾಸುರನ ನೂತನ ಚಿತ್ರವನ್ನು ಚಿಕ್ಕದಾಗಿ ಬರೆಯಬೇಕು, ಅದನ್ನು ಯಾರು ತುಳಿಯಬಾರದು ಎಂದು ಆಗ್ರಹಿಸಿದ್ದು, ಅಂಧಕಾಸುರನ ಸಂಹಾರದ ವಿರೋಧಿಗಳ ಆಗ್ರಹಕ್ಕೆ ತಾಲೂಕು ಆಡಳಿತ ಒಪ್ಪಿಗೆ ನೀಡಿರುವುದು ಖಂಡನೀಯ, ಇದರಿಂದಾಗಿ ನಮ್ಮ ರೂಢಿ ಸಂಪ್ರದಾಯ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದು, ಈ ಹಿಂದಿನ ಸಂಪ್ರದಾಯದಂತೆ ಹಾಗೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಸೆಕ್ಷನ್ 58 ರ ಪ್ರಕಾರ ನಮಗೆ ರೂಢಿ ಸಂಪ್ರದಾಯ ಪದ್ದತಿ ಈ ಹಿಂದೆ ಹೇಗೆ ನಡೆದುಕೊಂಡು ಬಂದಿತ್ತೋ ಹಾಗೆ ಆಚರಿಸಲು ಹಕ್ಕಿದೆ, ಅಲ್ಲದೆ ಸದರಿ ಆಚರಣೆ ನಡೆಯುವ ಕುರಿತು ರಾಜ್ಯ ಆಗಮ ಶಾಸ್ತ್ರದ ಪಂಡಿತರು ಜ. 6 ರಂದು ಶ್ರೀ ಕಂಠೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ನೀಡಿರುವ ಅಭಿಪ್ರಾಯದ ವರದಿಯಂತೆ ಮಹಿಷಾಸುರನ ಚಿತ್ರಕ್ಕೆ ಬದಲಾಗಿ ನೂತನವಾಗಿ ರಚಿಸಿರುವ ಅಂಧಕಾಸುರನ ಚಿತ್ರ ಪಟ ಮಾತ್ರ ಬದಲಿಸಿ ಉಳಿದ ಆಚರಣೆಯನ್ನು ಈ ಹಿಂದೆ ನಡೆಯುತ್ತಿದ್ದ ರೂಢಿ ಸಂಪ್ರದಾಯ ಪದ್ದತಿಯಂತೆ ನಡೆಸಬೇಕೆಂದು ಆಗ್ರಹಿಸುತ್ತೇವೆ, ಇಲ್ಲವಾದಲ್ಲಿ ಉಘ್ರ ಪ್ರತಿಭಟನೆ ರೂಪಿಸಲಾಗುವುದು ಎಂದು ಎಚ್ಚರಿಸಿದರು.ಶ್ರೀರಾಂಪುರ ಯಜಮಾನರಾದ ಶಿವಣ್ಣ, ಮಹದೇವು, ಮುಖಂಡರಾದ ರಾಚಪ್ಪ, ಶಿವನಾಗಪ್ಪ, ಉಮೇಶ್, ಲಾರ, ಅನಂತ್, ಎನ್.ಸಿ ಬಸವಣ್ಣ, ಅಂಬಿ, ಮಹದೇವ್, ನಾಗೇಶ್, ಜಯಕುಮಾರ್, ಗಿರೀಶ್, ಕೃಷ್ಣ ಜೋಯಿಸ್, ಸುನೀಲ್, ಶಿವನಾಗಪ್ಪ, ಪ್ರಕಾಶ್, ಕಿರಣ್, ಉಮೇಶ್, ನಗರಸಭಾ ಸದಸ್ಯರಾದ ಕಪಿಲೇಶ್, ಮಹಾದೇವಪ್ರಸಾದ್, ಸಿದ್ದರಾಜು, ಖಾಲಿದ್ ಅಹಮ್ಮದ್, ನೂರಾರು ಭಕ್ತರು ಇದ್ದರು.