ಕಾರವಾರ: ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಕ್ರಮ ಗೋ ಸಾಗಣೆ ಹಾಗೂ ಗೋ ಹತ್ಯೆ ಪ್ರಕರಣಗಳಿಗೆ ತಕ್ಷಣವೇ ಕಡಿವಾಣ ಹಾಕುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರವಾರ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು.

''ಗೋ ಹತ್ಯೆ ನಿಷೇಧ ಮತ್ತು ಸಂರಕ್ಷಣಾ ವಿಧೇಯಕ-2020''ರ ಅಡಿಯಲ್ಲಿ ಅಕ್ರಮಕೋರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಅಕ್ರಮ ಸಾಗಣೆ ತಡೆಯಲು ಜಿಲ್ಲೆಯ ಗಡಿಭಾಗಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಜತೆಗೆ ಮುಂದಿನ ಒಂದು ತಿಂಗಳ ಕಾಲ ಜಾನುವಾರು ಸಂತೆಗಳನ್ನು ತಾತ್ಕಾಲಿಕವಾಗಿ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಕಾರವಾರ ತಾಲೂಕಿನ ಕಡವಾಡ ಪ್ರದೇಶದಲ್ಲಿ ರಾತ್ರಿ ವೇಳೆ ಗೋ ಸಾಗಣೆಯಂತಹ ಅಕ್ರಮ ಚಟುವಟಿಕೆ ನಡೆಯದಂತೆ ವಿಶೇಷ ನಾಕಾಬಂದಿ ಹಾಕಬೇಕು. ಇದಲ್ಲದೆ, ಗೋ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಕ್ರಮ ಗೋ ಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ತಾಲೂಕು ಸಮಿತಿಯ ವತಿಯಿಂದ ಕಾರವಾರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಮತ್ತೊಂದೆಡೆ, ಗ್ರಾಮೀಣ ಸಮಿತಿಯ ವತಿಯಿಂದ ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್‌ಐ ಅವರಿಗೆ ಮನವಿ ನೀಡಿ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಲಾಯಿತು.


ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಎನ್.ಆರ್. ಮುಕ್ರಿ, ಜಿಲ್ಲಾ ಸಹಕಾರ್ಯದರ್ಶಿ ಸೂರಜ್ ನಾಯ್ಕ, ಸಂತೋಷ್ ನಾಯ್ಕ, ಜಿಲ್ಲಾ ಗೋರಕ್ಷಾ ಪ್ರಮುಖ ಶ್ರೀನಿವಾಸ ಗುನಗಿ, ತಾಲೂಕು ಸಹಕಾರ್ಯದರ್ಶಿ ಮನೋಜ್ ಬಾಂದೇಕರ್, ತಾಲೂಕು ಬಜರಂಗದಳ ಸಂಯೋಜಕ ಅಮಿತ್ ಮಾಳ್ಸೇಕರ್, ಪ್ರಮುಖರಾದ ಸಾಯಿಕಿರಣ್ ನಾಗೇಕರ, ಓಂಕಾರ ಅಂಕೋಲೇಕರ್, ಧೀರಜ್ ರಾಣೆ, ಬಬನ್ ಶೆಟ್ಟಿ, ಅಮಿತ್ ಕಾಮತ್, ಪ್ರಕಾಶ್ ಶೇಟ್, ಪ್ರಜ್ಞಾ ರೇವಣಕರ್ ಉಪಸ್ಥಿತರಿದ್ದರು.