ಸಾರಾಂಶ
ದಾಬಸ್‍ಪೇಟೆ: ಕುಮುದ್ವತಿ ನದಿ ಪಾತ್ರದ ಫಲವತ್ತಾದ ಕೃಷಿ ಭೂಮಿಯಲ್ಲಿ ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ವೆ ಕಾರ್ಯಾರಂಭಕ್ಕೆ ಈ ಭಾಗದ ರೈತರು ವಿರೋಧ ವ್ಯಕ್ತಪಡಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಡಿ.5ರಂದು ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ನೆಲಮಂಗಲ-ಕುಣಿಗಲ್ ನಡುವಿನ ಯಂಟಗಾನಹಳ್ಳಿ, ಸೋಲದೇವನಹಳ್ಳಿ ಗ್ರಾಮದಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ನಡುವಿನ ಪ್ರದೇಶವನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೆಲ ದಿನಗಳಿಂದ ಪರಿಸರ ಮಾಲಿನ್ಯ ಅಧಿಕಾರಿಗಳು, ಸರ್ವೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಶೀಲಿಸಿ ಎಸ್‍ಸಿಪಿ ಮಾರ್ಕ್ ಮಾಡಲಾಗಿದೆ. ಡಿಜಿಟಲ್ ಸರ್ವೆ, ಹೆಲಿಕ್ಯಾಪ್ಟರ್ ಸರ್ವೆಗಳ ಪ್ರಗತಿಯಲ್ಲಿದ್ದು ಈ ಭಾಗದ ರೈತರು, ಗ್ರಾಮಸ್ಥರ ನಿದ್ದೆಗೆಡಿಸಿದೆ.
ಕೃಷಿಗೆ ಯೋಗ್ಯ ಭೂಮಿ:
ವಿಮಾನ ನಿಲ್ದಾಣಕ್ಕೆ ಆಯ್ದುಕೊಂಡಿರುವ ಕುಮುದ್ವತಿ ಹಾಗೂ ಅರ್ಕಾವತಿ ನದಿಗಳ ಸಂಗಮ ತಿಪ್ಪಗೊಂಡನಹಳ್ಳಿ ಜಲಾಶಯದ ವಲಯದಲ್ಲಿದ್ದು ಸೋಲದೇವನಹಳ್ಳಿ, ಯಂಟಗಾನಹಳ್ಳಿ ಗ್ರಾಪಂಗಳ ರೈತರು ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಹಾಗೂ ತೆಂಗು, ಅಡಿಕೆ, ಮಾವು ಸೇರಿದಂತೆ ಅನೇಕ ತೋಟಗಾರಿಕೆ ಮಾಡಿದ್ದಾರೆ. ಪ್ರಸ್ತಾಪಿತ ವಿಮಾನ ನಿಲ್ದಾಣ ಈ ಭಾಗದಲ್ಲಿ ಬಂದರೆ 5 ಸಾವಿರಕ್ಕೂ ಹೆಚ್ಚು ಕೃಷಿ ಕುಟುಂಬಗಳು ಕೃಷಿ ಬದುಕಿಗೆ ವಿದಾಯ ಹೇಳುವ ಆತಂಕ ಎದುರಾಗಿದೆ.
ಹುಟ್ಟೂರು ಬಿಟ್ಟು ಕೊಡಲ್ಲ:
ಸೊಲದೇವನಹಳ್ಳಿ, ಯಂಟಗಾನಹಳ್ಳಿ, ಮೋಟಗಾನಹಳ್ಳಿ ಗ್ರಾಪಂ ವ್ಯಾಪ್ತಿಯ 6 ಸಾವಿರ ಎಕರೆ ಪ್ರದೇಶದಲ್ಲಿ 13 ಪ್ರಮುಖ ಗ್ರಾಮಗಳು 10ಕ್ಕೂ ಹೆಚ್ಚು ಸಣ್ಣ ಗ್ರಾಮಗಳಲ್ಲಿ ಈಗಗಾಲೇ ಹಾಕಿರುವ ನಕ್ಷೆಯ ಸಂಕೇತಗಳಿಂದ ಆತಂಕಗೊಂಡು ಹುಟ್ಟೂರು ಬಿಡುವ ಪ್ರಶ್ನೆಯೇ ಇಲ್ಲ. ವಿಮಾನ ನಿಲ್ದಾಣ ನಮಗೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಹೋರಾಟಕ್ಕೂ ತೆರೆಮರೆಯಲ್ಲಿ ಸಿದ್ಧತೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಉದ್ದೇಶಿತ 2ನೇ ವಿಮಾನ ನಿಲ್ದಾಣ ನೆಲಮಂಗಲದ ಯಂಟಗಾನಹಳ್ಳಿ-ಸೋಲದೇವನಹಳ್ಳಿ ಭಾಗದಲ್ಲಿಯೇ ಬರಲಿದೆ ಎಂಬ ವಿವಿಧ ನಕ್ಷೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳು ಹಾಗೂ ಹೆಲಿಕಾಪ್ಟರ್ ಓಡಾಟದ ಜತೆ ರಿಯಲ್ ಎಸ್ಟೇಟ್ ಉದ್ಯಮಿಗಳು ಸಂಭಾವ್ಯ 2ನೇ ವಿಮಾನ ನಿಲ್ದಾಣ ಎಂಬುದಾಗಿ ಜಾಹಿರಾತುಗಳಲ್ಲಿ ಬಿಂಬಿಸುತ್ತಿರುವುದು ಈ ಜಾಗವೇ ಅಂತಿಮ ಎಂಬ ಊಹಾಪೋಹಗಳು ಅಧಿಕೃತ ಮಾಹಿತಿ ಇಲ್ಲದಿದ್ದರೂ ಜನರಲ್ಲಿ ಬಹಳಷ್ಟು ಆತಂಕ ಎದುರಾಗುವಂತೆ ಮಾಡಿದೆ.
ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಪ್ರಸ್ತಾಪಿಸಿರುವ 2ನೇ ವಿಮಾನ ನಿಲ್ದಾಣದ ಪ್ರದೇಶ ತಮ್ಮ ಕ್ಷೇತ್ರಕ್ಕೆ ಸೇರಿದೆ. ಈ ಭಾಗದಲ್ಲಿ ರೈತರು ಕೃಷಿಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ. ರೈತರ ಭವಿಷ್ಯದ ದೃಷ್ಟಿಯಿಂದ ನಮಗೆ ವಿಮಾನ ನಿಲ್ದಾಣ ಬೇಡ ಎಂದು ಈಗಾಗಲೇ ಸಿಎಂ, ಡಿಸಿಎಂಗೆ ಮನವಿ ಮಾಡಿದ್ದೇನೆ. ಯಾವುದೇ ಪರಿಸ್ಥಿತಿಯಲ್ಲೂ ರೈತರ ಪರ ತಂತು ಹೋರಾಟ ಮಾಡುತ್ತೇನೆ.
-ಎನ್.ಶ್ರೀನಿವಾಸ್, ಶಾಸಕರು, ನೆಲಮಂಗಲ
ಪ್ರಸ್ತಾಪಿತ ವಿಮಾನ ನಿಲ್ದಾಣ ಪ್ರದೇಶದಲ್ಲಿ 13 ದೊಡ್ಡ ಗ್ರಾಮ, 22 ಸಣ್ಣ ಗ್ರಾಮಗಳು, 6 ಕೆರೆ, 32 ಪ್ರಮುಖ ದೇವಾಲಯಗಳು, 2 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ವಾಸ ಮಾಡುತ್ತಿದ್ದೇವೆ. ಇಂತಹ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಬೇಡವಾಗಿದೆ. ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಸರ್ಕಾರ ನಮ್ಮ ಕೃಷಿ ಭೂಮಿ ಹಾಗೂ ಗ್ರಾಮಗಳನ್ನು ಉಳಿಸಿ ಕೊಡಲು ಮನವಿ ಮಾಡುತ್ತೇವೆ.
-ಮಂಚೇನಹಳ್ಳಿ ಚಂದ್ರು, ಸ್ಥಳೀಯ ರೈತ ಮುಖಂಡ