ಸಾರಾಂಶ
.ಮೇಕೆದಾಟು ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿದರೆ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ದೊರೆಯಲಿದೆ. ಜೊತೆಗೆ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದರೆ, ಹೆಚ್ಚು ಅನುದಾನ ದೊರೆತು, ಬೇಗ ಕಾಮಗಾರಿ ಪೂರ್ಣಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಆಂಧ್ರಪ್ರದೇಶದ ಹಂಡ್ರಿ-ನೀವಾ ಸುಜಲ ಶ್ರಾವಂತಿ ನೀರಾವರಿ ಯೋಜನೆಯನ್ನು ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ವಿಸ್ತರಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರನ್ನು ಮಂಗಳವಾರ ಭೇಟಿ ಮಾಡಿ, ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ. ಈ ಯೋಜನೆಯಡಿ ಕೃಷ್ಣಾ ನದಿ ನೀರನ್ನು ಕರ್ನಾಟಕದ ಗಡಿಭಾಗಗಳಾದ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಪರಿಗಣಿಸಬೇಕು. ಕೃಷ್ಣಾ ನದಿಯಿಂದ ನಾರಾಯಣಪುರ ಜಲಾಶಯದ ಮೂಲಕ 10 ಟಿಎಂಸಿ ನೀರು ಸರಬರಾಜು ಮಾಡಬಹುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ನನ್ನ ಮತ ಕ್ಷೇತ್ರವಾದ ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ಕೋಲಾರ ಜಿಲ್ಲೆಗಳ ಜನರಿಗೆ ನದಿ ಮೂಲಗಳಿಲ್ಲ. ಇಲ್ಲಿನ ಜನರು ಸಂಪೂರ್ಣವಾಗಿ ಮಳೆಯನ್ನೇ ಆಶ್ರಯಿಸಿದ್ದಾರೆ. ರಾಜ್ಯ ಸರ್ಕಾರದಿಂದ ಏತ ನೀರಾವರಿ ಯೋಜನೆ ಜಾರಿಯಲ್ಲಿದೆ. ಆದರೆ ಆರ್ಥಿಕ ಸಮಸ್ಯೆಯಿಂದಾಗಿ ಈ ಯೋಜನೆ ಕುಂಟುತ್ತಾ ಸಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುವುದರೊಂದಿಗೆ, ಜಲಜೀವನ್ ಮಿಶನ್ ಯೋಜನೆಯನ್ನು ಇದರೊಂದಿಗೆ ಸೇರಿಸಬಹುದು ಎಂದು ಕೋರಿದ್ದಾರೆ.2023 ರ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿಸಿ 5,300 ಕೋಟಿ ರೂ. ಮೀಸಲಿಡಲಾಗಿತ್ತು. ಚಿಕ್ಕಮಗಳೂರು, ಚಿತ್ರದುರ್ಗ, ದಾವಣೆಗೆರೆ, ತುಮಕೂರು ಜಿಲ್ಲೆಗಳಿಗೆ ಈ ಯೋಜನೆ ನೀಡಲಾಗಿದೆ. ಇದನ್ನು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಿಗೆ ವಿಸ್ತರಿಸಿದರೆ 1 ಕೋಟಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದು ವಿವಿರಿಸಿದ್ದಾರೆ. ಮೇಕೆದಾಟು ಯೋಜನೆ ಘೋಷಿಸಿ
ಮೇಕೆದಾಟು ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿದರೆ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ದೊರೆಯಲಿದೆ. ಜೊತೆಗೆ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದರೆ, ಹೆಚ್ಚು ಅನುದಾನ ದೊರೆತು, ಬೇಗ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮನವಿ ಮಾಡಿದ್ದಾರೆ. ಕೇಂದ್ರ ಸಚಿವರ ಭರವಸೆಅಟಲ್ ಭೂಜಲ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ತುಂಬಿಸಲು 200 ಕೋಟಿ ರೂ. ಅನುದಾನ ನೀಡಬೇಕೆಂದು ಸಹ ಕೋರಿದ್ದಾರೆ. ರಾಜ್ಯ ಸರ್ಕಾರದಿಂದ ಪ್ರಸ್ತಾಪ ಬಂದರೆ ಪರಿಶೀಲಿಸಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದರು. ಈ ಕುರಿತು ಕೇಂದ್ರ-ರಾಜ್ಯ ಸರ್ಕಾರದ ನಡುವೆ ಸಹಯೋಗದಿಂದ ಕೆಲಸ ಮಾಡುವುದಾಗಿ ಡಾ.ಕೆ.ಸುಧಾಕರ್ ಹೇಳಿದರು.