ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಆಧುನಿಕ ಸಂದರ್ಭದ ಈ ವೇಳೆ ಮಹಿಳೆಯ ದೈಹಿಕ ಶ್ರಮ ಕಡಿಮೆಯಾಗಿ, ಮಾನಸಿಕ ಒತ್ತಡ ಹೆಚ್ಚಾಗಿದೆ. ಎಲ್ಲವನ್ನು ಒತ್ತಡದಿಂದ ನಿರ್ವಹಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಸ್ತ್ರೀರೋಗ ತಜ್ಞೆ ಡಾ.ಜ್ಯೋತಿ ಶರತ್‍ಕುಮಾರ್ ಹೇಳಿದರು.ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಲಿಂಗಾಯತ ಶಿವಶಿಂಪಿ ಮಹಿಳಾ ಘಟಕದವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ಮಹಿಳೆಯರು ಕುಟುಂಬದ ಆಹಾರಕ್ಕಾಗಿ ವಿವಿಧ ರೀತಿಯ ಕಸರತ್ತು ಮಾಡುತ್ತಾ, ಕುಟ್ಟುವುದು, ಬೀಸುವುದು, ಅರೆಯುವುದು, ಬಾವಿಯಿಂದ ನೀರನ್ನು ಸೇದುವುದು, ಬಟ್ಟೆ ಒಗೆಯುವುದು ಸೇರಿದಂತೆ ವಿವಿಧ ರೀತಿಯ ಕೆಲಸಗಳನ್ನು ಮಾಡುವುದರ ಮೂಲಕ ತನ್ನ ಆರೋಗ್ಯವನ್ನು ಚನ್ನಾಗಿ ಇಟ್ಟುಕೊಂಡಿದ್ದಳು. ಆದರೆ ಇಂದಿನ ಅಧುನಿಕ ಬದುಕಿನಲ್ಲಿ ಮಹಿಳೆ ಶ್ರಮ ಪಡುವುದು ಕಡಿಮೆಯಾಗಿದೆ. ಎಲ್ಲದ್ದಕ್ಕೂ ಯಂತ್ರವನ್ನು ಅವಲಂಭಿಸಿದ್ದಾಳೆ ಎಂದಳು.
ಮಹಿಳೆಯರು ಮನೆ ಕೆಲಸದ ಜೊತೆಗೆ ಸಂಸ್ಕಾರದ ಬಗ್ಗೆಯೂ ಗಮನ ನೀಡಬೇಕಿದೆ. ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕಿದೆ. ರಾಮಾಯಣ, ಭಗವದ್ಗೀತೆ ಓದಬೇಕಿದೆ. ಶ್ಲೋಕಗಳನ್ನು ಕಲಿಯಬೇಕಿದೆ ಇದರೊಂದಿಗೆ ಧ್ಯಾನ ಹಾಗೂ ಯೋಗವನ್ನು ಮಾಡುವುದರ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದ ಎಂದರು.ಶಿಕ್ಷಕಿ ಗೀತಾ ಭರಮಸಾಗರ ಮಾತನಾಡಿ, ಹಿಂದಿನ ಕಾಲದಲ್ಲಿ ಮದುವೆ ಎಂದರೆ ಎರಡು ಮನಸ್ಸುಗಳನ್ನು ಸೇರಿಸುವ ಕಾರ್ಯಕ್ರಮವಾಗಿತ್ತು. ಆದರೆ ಇಂದು ಮದುವೆ ಎನ್ನುವುದು ಪ್ರತಿಷ್ಠೆಯಾಗಿ ಹಣವನ್ನು ನೀರಿನಂತೆ ವ್ಯಯ ಮಾಡಲಾಗುತ್ತಿದೆ. ಆಡಂಬರವಿಲ್ಲದೆ ಮದುವೆ ಅಸಾಧ್ಯ ಎಂಬ ವಾತಾವರಣ ಸೃಷ್ಟಿಯಾಗಿದೆ ಎಂದರು.
ಜಿಲ್ಲಾ ಲಿಂಗಾಯತ ಶಿವಶಿಂಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಮುರುಗೇಶ್, ಕಾರ್ಯದರ್ಶಿ ಕವಿತಾ ಪಂಪಾಪತಿ, ನಿರ್ಮಲ ಬಸವರಾಜು, ಅನ್ನಪೂರ್ಣವಿಜಯಕುಮಾರ್ , ಶೈಲಾ ವಿಜಯಕುಮಾರ್, ಇಂದಿರಾ ಜಯದೇವ ಮೂರ್ತಿ, ಕುಸುಮಾ ರಾಜಣ್ಣ, ಗೌರಮ್ಮ ಬಸವರಾಜ್ ಉಷಾ ವೇದಮೂರ್ತಿ ಇದ್ದರು. ಇದೇ ಸಂದರ್ಭದಲ್ಲಿ ಮಹಿಳಾ ಘಟಕದ ಪದಾಧಿಕಾರಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ರೀಡಾ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.