ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸರಳೀಕರಣ ಮಾಡಿ ಮುಂದುವರಿಸುವಂತೆ ಆಗ್ರಹಿಸಿ ತಾಲೂಕು ಚುನಾಯಿತ ಗ್ರಾಪಂ ಸದಸ್ಯರ ಮಹಾ ಒಕ್ಕೂಟ ಮುಂಡಗೋಡ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಮುಂಡಗೋಡ
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸರಳೀಕರಣ ಮಾಡಿ ಮುಂದುವರಿಸುವಂತೆ ಆಗ್ರಹಿಸಿ ತಾಲೂಕು ಚುನಾಯಿತ ಗ್ರಾಪಂ ಸದಸ್ಯರ ಮಹಾ ಒಕ್ಕೂಟ ಮುಂಡಗೋಡ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.ಇಲ್ಲಿಯ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಶಿವಾಜಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ ಬಳಿಕ ವಿನಿ ವಿಧಾನಸೌದ ಹಾಗೂ ತಾಪಂಗೆ ತೆರಳಿ ಮನವಿ ಸಲ್ಲಿಸಲಾಯಿತು.
ಇತ್ತೀಚಿನ ಒಂದು ವರ್ಷದಿಂದ ಈ ಯೋಜನೆಯನ್ನು ಬಂದ್ ಮಾಡುವ ದೃಷ್ಟಿಯಿಂದ ಕಠಿಣ ಕಾನೂನು ತಂದು ಉದ್ಯೋಗ ಖಾತ್ರಿ ಕೆಲಸವೇ ಬೇಡ ಎನ್ನುವ ಮಟ್ಟಿಗೆ ಕೆಲಸ ಮಾಡದ ಹಾಗೆ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ನಮ್ಮ ದೇಶದ ರಾಷ್ಟ್ರಪಿತ ಗಾಂಧಿಯವರ ಹೆಸರನ್ನು ತೆಗೆದು ಅವರಿಗೆ ಅಗೌರವ ತೋರಿಸುವ ಮುಖಾಂತರ ಉದ್ಯೋಗ ಖಾತ್ರಿ ಯೋಜನೆಯ ಶೇ. ೩ ರಷ್ಟು ಹಣ ಕಡಿತ ಮಾಡಿ ೬೦:೪೦ರಂತೆ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಕಬೇಕೆಂದು ಕಾನೂನನ್ನು ರೂಪಿಸಿದ್ದಾರೆ. ರಾಜ್ಯ ಸರ್ಕಾರಗಳು ಈ ಹಣವನ್ನು ತುಂಬಲು ಸಾಧ್ಯವೇ ಇಲ್ಲ. ಈ ಯೋಜನೆ ಸ್ಥಗಿತಗೊಳಿಸುವ ಉದ್ದೇಶದಿಂದಲೇ ಈ ರೀತಿಯಾಗಿ ಬೇಕಾಬಿಟ್ಟಿ ಕಾನೂನನ್ನು ರೂಪಿಸಿದ್ದು ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಲಕ್ಷಾಂತರ ಕೋಟಿ ಹಣ ಟ್ಯಾಕ್ಸ್ ಮುಖಾಂತರ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದ್ದು, ರಾಜ್ಯಗಳಿಗೆ ಬರುತ್ತಿರುವುದು ಕೇವಲ ಕೆಲವು ಪರ್ಸೆಂಟ್ ಮಾತ್ರ. ಹೀಗಿದ್ದಾಗ ಈ ಕಾಯ್ದೆಯನ್ನು ಬದಲಾವಣೆ ಮಾಡಿ ರಾಜ್ಯಗಳಿಗೆ ಹೊರೆ ಹಾಕಿ ರಾಜ್ಯಗಳು ಕೊಡದಿದ್ದರೆ ನಾವು ಕೊಡಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಲಿಕ್ಕೆ ಸಂಚು ಮಾಡಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾಗಿ ಈ ಯೋಜನೆಯನ್ನು ರದ್ದು ಮಾಡಿ ಮೊದಲಿದ್ದ ಹಾಗೆ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಮಹಾ ಒಕ್ಕೂಟದ ಧರ್ಮರಾಜ ನಡಗೇರ, ಬಸವರಾಜ ಸಂಗಮೇಶ್ವರ ಹಾಗೂ ಗ್ರಾಪಂ ಅಧ್ಯಕ್ಷರು, ಸದಸ್ಯರು ವಿವಿಧ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.